

ನವದೆಹಲಿ: ಕಳೆದ ವರ್ಷ ಇದೇ ಸಮಯದಲ್ಲಿ ದೆಹಲಿಯ "ಬಾಬಾ ಕಾ ಡಾಬಾ" ಪ್ರತಿಯೊಬ್ಬರನ್ನೂ ತಲುಪಿದ್ದರು. ಗೂಡಂಗಡಿ ಇಟ್ಟುಕೊಂಡಿದ್ದ 80 ವರ್ಷದ ಕಾಂತಾ ಪ್ರಸಾದ್ ಲಾಕ್‌ಡೌನ್‌ನಿಂದಾಗಿ ಕೆಲಸವಿಲ್ಲದೇ ಕಂಗಾಲಾಗಿದ್ದಾಗ ಯ್ಯೂಟೂಬರ್ ಗೌರವ್ ವಾಸನ್ ಎನ್ನುವವರು ಇವರ ವಿಡಿಯೋ ಮಾಡಿದ್ದರು.
ಒಂದೆರಡು ದಿನಗಳಲ್ಲಿಯೇ ಇದು ಎಷ್ಟು ಪ್ರಸಿದ್ಧಿಗೆ ಬಂತೆಂದರೆ, ಹಣದ ಹೊಳೆಯೇ ಹರಿದುಬಂತು. ಇಷ್ಟು ಪ್ರಮಾಣದಲ್ಲಿ ಜನರು ಸ್ಪಂದಿಸುವುದನ್ನು ಕಂಡು ಕಳೆದ ವರ್ಷ ಖುಷಿಯಿಂದ ತೇಲಿ ಹೋಗಿದ್ದ ಕಾಂತಾ ಪ್ರಸಾದ್ ಅವರು, ಇದೀಗ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ!
ಅವರ ಸ್ಥಿತಿ ಗಂಭೀರವಾಗಿದ್ದು, ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮದ್ಯದೊಳಗೆ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇಷ್ಟಕ್ಕೂ ಕಾರಣವೇನೆಂದರೆ ಜನರು ನೆರವಿನ ಮಹಾಪೂರ ಹರಿಸುತ್ತಿದ್ದಂತೆಯೇ ಕಾಂತಾ ಪ್ರಸಾದ್ ಅವರು ದೆಹಲಿಯಲ್ಲಿ ತಿಂಗಳಿಗೆ ಒಂದು ಲಕ್ಷ ರೂಪಾಯಿ ಬಾಡಿಗೆಯ ರೆಸ್ಟೋರೆಂಟ್ ಅನ್ನು ತೆರೆದರು. ಆದರೆ ಅವರಿಗೆ ಈಗ ತಿಂಗಳಿಗೆ 30 ಸಾವಿರ ರೂಪಾಯಿ ಕೂಡ ದುಡಿಯಲು ಸಾಧ್ಯವಿಲ್ಲವಾಗಿದೆ! ಸಾಲದ ಸುಳಿಯಲ್ಲಿ ಸಿಲುಕಿ ಬೇಸರಗೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಇವರ ಹೆಸರಿನಲ್ಲಿ ಬರುತ್ತಿರುವ ಹಣವನ್ನು ಇವರ ವಿಡಿಯೋ ಮಾಡಿದ ಗೌರವ್ ವಾಸನ್ ಇವರಿಗೆ ಕೊಡದೇ ಮೋಸ ಮಾಡುತ್ತಿದ್ದಾರೆ ಎಂದು ಈ ಮೊದಲೇ ಕಾಂತಾ ಪ್ರಸಾದ್ ಹೇಳಿದ್ದರು. ಗೌರವ್ ಅವರು, ತಮ್ಮ ಸ್ನೇಹಿತರ ಬ್ಯಾಂಕ್ ಅಕೌಂಟ್ ಮಾಹಿತಿ ನೀಡಿ ಜನರಿಂದ ಹಣ ಸಂಗ್ರಹಿಸಿದ್ದಾರೆ ಎಂದು ಆರೋಪಿಸಿದ್ದರು. ಕಳೆದೆರಡು ದಿನಗಳ ಹಿಂದೆ ಸ್ಪಷ್ಟನೆ ನೀಡಿದ್ದ ಗೌರವ್ ವಾಸನ್ ಅದಕ್ಕೆ ಸಂಬಂಧಿಸಿದ ದಾಖಲೆ ತೋರಿಸಿ ಇದಕ್ಕೆ ಸ್ಪಷ್ಟನೆ ನೀಡಿದ್ದರು. ಕಡೆಗೆ ಕಾಂತಾ ಪ್ರಸಾದ್ ಈ ವಿವಾದಕ್ಕೆ ತೆರೆ ಎಳೆದಿದ್ದರು.