

| ಸುಚೇತನಾ ನಾಯ್ಕ
ಐದನೇ ತರಗತಿಯ ನೇಹಾ ಅದೊಂದು ದಿನ ಗಾಬರಿಯಿಂದ ‘‘ಅಮ್ಮಾ ಅಮ್ಮಾ ನನಗೆ ಒಂದು ಮಾಡುವ ಜಾಗದಿಂದ ರಕ್ತ ಬರುತ್ತಿದೆ... ಏನೋ ಆಗಿಬಿಟ್ಟಿದೆ’’ ಎಂದು ಅಳುತ್ತಾ ಹೇಳಿದಾಗ ಅಮ್ಮ ಕಂಗಾಲಾಗಿ ಹೋದಳು. ಅದೇನಾಗಿದೆ ಎಂದು ತಿಳಿಯದ ಆ ಕಂದ ಗಾಬರಿಯಲ್ಲಿದ್ದರೆ, ಅದು ಏನು ಎಂದು ತಿಳಿದ ಈ ಅಮ್ಮನಿಗೆ ದಿಗ್ಭ್ರಮೆ! ‘ಮಗಳಿಗಿನ್ನೂ 10 ವರ್ಷವಷ್ಟೇ ತುಂಬಿದೆ. ಇಷ್ಟು ಬೇಗ...? ಮಗಳಿಗೆ ಏನು ಹೇಳುವುದು?’ ಎಂದು ಅರೆಕ್ಷಣ ಗರಬಡಿದವಳಂತೆ ಅಮ್ಮ ನಿಂತರೆ, ‘‘ಅಮ್ಮಾ ಅಮ್ಮಾ ಅದೇನು ರಕ್ತ? ನನಗೇನಾಯಿತು’’ ಎಂದು ಒಂದೇ ಸಮನೆ ಅಳುತ್ತಿದ್ದಾಳೆ ಮಗಳು...
ಇದು ನೇಹಾ ಒಬ್ಬಳ ಕಥೆಯಲ್ಲ. ಬಹು ಹಿಂದಿನಿಂದಲೂ ಇಂಥ ಪ್ರಕರಣಗಳು ಅಲ್ಲೊಂದು ಇಲ್ಲೊಂದು ನಡೆಯುತ್ತಿದ್ದರೆ, ಇಂದು ಬಹುತೇಕ ಮನೆಗಳ ಕಥೆಯಾಗಿ ಹೋಗಿದೆ. ಪ್ರತಿ 500 ಮಂದಿ ಬಾಲಕಿಯರಲ್ಲಿ ಓರ್ವ ಬಾಲಕಿ 8-9ನೇ ವಯಸ್ಸಿನಲ್ಲಿಯೇ ಋತುಮತಿಯಾಗುತ್ತಿದ್ದಾಳೆ ಎಂದು ದಿ ಜರ್ನಲ್ ಆಫ್ ಹ್ಯೂಮನ್ ರಿಪ್ರೊಡಕ್ಷನ್ ಪ್ರಕಟಿಸಿರುವ ಅಧ್ಯಯನ ವರದಿಯಲ್ಲಿ ಉಲ್ಲೇಖವಾಗಿದೆ. ಅದರಲ್ಲಿಯೂ ಕರೊನಾದಿಂದ ಈ ಸಮಸ್ಯೆ ದುಪ್ಪಟ್ಟಾಗಿದೆಯಂತೆ. ಮೊದಲೇ ಮೊಬೈಲ್ ಫೋನ್ ದಾಸರಾಗಿರುವ ಮಕ್ಕಳು, ಇದೀಗ ಕರೊನಾದಿಂದಾಗಿ ದೈಹಿಕ ಚಟುವಟಿಕೆಗಳಿಗೆ ತಿಲಾಂಜಲಿ ಇತ್ತು, ಮನೆಯಲ್ಲಿಯೇ ಕುಳಿತು ಬೇಡದ ಆಹಾರಗಳ ಸೇವನೆ ಮಾಡುತ್ತಾ ಬೊಜ್ಜು ಬರಿಸಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ದೊಡ್ಡವರಾಗುತ್ತಿರುವ ಪ್ರಕರಣಗಳು ದುಪ್ಪಟ್ಟು ಆಗಿದೆ ಎನ್ನುತ್ತಿದ್ದಾರೆ ವೈದ್ಯರು. ಇಂಥ ಸಮಯದಲ್ಲಿ ಪಾಲಕರು ಅದರಲ್ಲಿಯೂ ತಾಯಿಯಾದವಳು ತೋರುವ ಧೈರ್ಯ ಮುಖ್ಯವಾದದ್ದು. ಸಂಬಂಧಿಕರು ಏನಂದಾರು? ಅಕ್ಕಪಕ್ಕದವರಿಗೆ ಗೊತ್ತಾದರೆ ಏನು ಗತಿ ಎಂದೆಲ್ಲಾ ಮನಸ್ಸಿಗೆ ತಂದುಕೊಳ್ಳದೇ ಇದು ಬಹುತೇಕ ಮನೆಗಳ ಸಮಸ್ಯೆ ಎಂದುಕೊಂಡು ಮಗಳಿಗೆ ತಿಳಿಹೇಳಬೇಕಿದೆ. ನೀವೂ ಆಘಾತಕ್ಕೊಳಗಾಗಿ, ಮಗಳನ್ನೂ ಆಘಾತಗೊಳಿಸುವ ಬದಲು ಪರಿಸ್ಥಿತಿಯನ್ನು ಜಾಣ್ಮೆಯಿಂದ ನಿಭಾಯಿಸಬೇಕಿದೆ. ಅಮ್ಮನಿಲ್ಲದ ಕಂದನಾದರೆ, ಅಪ್ಪನೇ ಅಮ್ಮನ ಸ್ಥಾನವನ್ನು ತುಂಬಿ ಮಗಳಿಗೆ ಧೈರ್ಯ ಹೇಳಬೇಕಿದೆ.
ಎಳವೆಯಲ್ಲಿ ಮಗಳು ಋತುಮತಿಯಾದರೆ ಆಕೆಯ ಮೇಲೆ ಗಮನ ಹೆಚ್ಚಿರಲಿ. ಮಗಳು ದೈಹಿಕವಾಗಿ ದೊಡ್ಡವಳಾದರೂ ಮನಸ್ಸಿನ್ನೂ ಎಳವೆಯಲ್ಲೇ ಇರುತ್ತದೆ. ಪ್ರೌಢತ್ವ ಹೊಂದಿರದ ಮನಸ್ಸು ದೇಹದ ಬದಲಾವಣೆಯಿಂದಾಗಿ ತೊಳಲಾಟದಲ್ಲಿ ಸಿಲುಕಿ ಕೊಳ್ಳುತ್ತದೆ. ಕೆಲವು ಮಕ್ಕಳು ಖಿನ್ನತೆಗೂ ಹೋಗಬಹುದು. ಬಹುಬೇಗನೇ ಲೈಂಗಿಕ ಆಸೆ ಹುಟ್ಟುವುದು ಇನ್ನೊಂದು ಸಮಸ್ಯೆ. ಆಕರ್ಷಣೆಯೊಂದೇ ಕಾಣಿಸುತ್ತದೆಯೇ ವಿನಾ ತಪ್ಪು ಯಾವುದು, ಸರಿ ಯಾವುದು ಎಂದು ಯೋಚಿಸುವ ಪರಿಪಕ್ವತೆ ಮನಸ್ಸಿಗೆ ಇರುವುದಿಲ್ಲ. ಅದ್ದರಿಂದ ಅಮ್ಮಂದಿರು ನಿಧಾನವಾಗಿ ಎಲ್ಲವನ್ನೂ ಮಗಳಿಗೆ ಹೇಳಬೇಕು.