ಬಿಗ್​ಬಾಸ್​ ಸ್ಪರ್ಧಿ, ಖ್ಯಾತ ನೃತ್ಯಗಾತಿ ಸಪ್ನಾಗೆ ಬಂಧನದ ಭೀತಿ: ಕೋರ್ಟ್​ನಿಂದ ವಾರೆಂಟ್​ ಜಾರಿ​

sapna
Published on

ಲಖನೌ: ಪ್ರಸಿದ್ಧ ಗಾಯಕಿ, ನೃತ್ಯಗಾತಿ ಹಾಗೂ ಬಿಗ್​ಬಾಸ್​ ಹಿಂದಿಯ 11ನೇ ಸೀಸನ್​ನ ಸ್ಪರ್ಧಿ ಸಪ್ನಾ ಚೌಧರಿ ವಿರುದ್ಧ ಬಂಧನ ವಾರೆಂಟ್​ ಜಾರಿಯಾಗಿದೆ. ಅವರನ್ನು ಬಂಧಿಸಲು ಲಖನೌ ಪೊಲೀಸರು ಹರಿಯಾಣಕ್ಕೆ ತೆರಳಿದ್ದಾರೆ.

ಇವರ ವಿರುದ್ಧ ಇರುವ ಆರೋಪಕ್ಕೆ ಸಂಬಂಧಿಸಿದಂತೆ ಕೋರ್ಟ್​ ಆದೇಶದ ಹೊರತಾಗಿಯೂ ಹಾಜರು ಆಗದ ಹಿನ್ನೆಲೆಯಲ್ಲಿ ವಾರೆಂಟ್​ ಜಾರಿ ಮಾಡಲಾಗಿದೆ.

ಆಗಿದ್ದೇನೆಂದರೆ, ಸಪ್ನಾ ಚೌಧರಿ ಅವರು 2018 ರಲ್ಲಿ ಕಾರ್ಯಕ್ರಮವೊಂದರಲ್ಲಿ ಪ್ರದರ್ಶನ ನೀಡುವುದಾಗಿ ಹೇಳಿದ್ದರು. ಇದಕ್ಕಾಗಿ ಸಂಘಟಕರು ಮುಂಗಡವಾಗಿ ಪಾವತಿಸಿದ್ದರು. ಆದರೆ ಸಪ್ನಾ ಹೇಳದೇ ಕೇಳದೇ ಕಾರ್ಯಕ್ರಮ ರದ್ದು ಮಾಡಿದ್ದರು. ಆದರೆ ತಮಗೆ ನೀಡಿದ್ದ ಮುಂಗಡ ಹಣವನ್ನು ಅವರು ವಾಪಸ್​ ನೀಡಿರಲಿಲ್ಲ.

ಈ ಹಿನ್ನೆಲೆಯಲ್ಲಿ ಸಂಘಟಕರು ಸಪ್ನಾ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಖುದ್ದು ಹಾಜರಿಗೆ ಲಖನೌ ಕೋರ್ಟ್​ ಹಲವು ಬಾರಿ ನಿರ್ದೇಶಿಸಿತ್ತು. ಇದರ ಹೊರತಾಗಿಯೂ ಸಪ್ನಾ ಹಾಜರು ಆಗಿರಲಿಲ್ಲ. ಅಷ್ಟೇ ಅಲ್ಲದೇ ತಮ್ಮ ಪರವಾಗಿ ಯಾವುದೇ ಮನವಿಯನ್ನೂ ಅವರು ಕೋರ್ಟ್​ಗೆ ಸಲ್ಲಿಸಲಿಲ್ಲ. ಈ ಹಿನ್ನೆಲೆಯಲ್ಲಿ ಈಗ ಬಂಧನ ವಾರೆಂಟ್​ ಹೊರಡಿಸಿದೆ.

ಇದೊಂದು ಪ್ರಕರಣ ಅಲ್ಲದೇ ಸಪ್ನಾ ವಿರುದ್ಧ ಇನ್ನೂ ಕೆಲವು ಕೇಸ್​ಗಳು ಇವೆ. 2021ರ ಫೆಬ್ರವರಿಯಲ್ಲಿ ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗವು ಸಪ್ನಾ ಚೌಧರಿ ವಿರುದ್ಧ ವಂಚನೆ ಮತ್ತು ನಂಬಿಕೆಯ ಉಲ್ಲಂಘನೆಯ ಆರೋಪದ ಮೇಲೆ ಪ್ರಕರಣವನ್ನು ದಾಖಲಿಸಿತ್ತು. ಸಪ್ನಾರನ್ನು ನಿರ್ವಹಿಸುವ ಸೆಲೆಬ್ರಿಟಿ ಮ್ಯಾನೇಜ್‌ಮೆಂಟ್ ಕಂಪೆನಿ ಕೂಡ ಸಪ್ನಾ ಸೇರಿದಂತೆ ಅವರ ತಾಯಿ, ಸಹೋದರರ ವಿರುದ್ಧ ವಂಚನೆ ಕೇಸ್​ ದಾಖಲು ಮಾಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net