

ಮುಂಬೈ: ಅಪರಿಚಿತರು ಕರೆ ಮಾಡಿದರೆ, ತುಂಬಾ ಕೇರ್ಫುಲ್ ಆಗಿರಿ, ಬ್ಯಾಂಕ್ ಡಿಟೇಲ್ಸ್, ವೈಯಕ್ತಿಕ ಮಾಹಿತಿ ಯಾವುದೂ ಕೊಡಬೇಡಿ ಎಂದು ಎಷ್ಟೇ ಸುದ್ದಿಗಳು ಬರುತ್ತಿದ್ದರೂ ಜನರು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ.
ಅಂಥದ್ದೇ ಒಂದು ಎಡವಟ್ಟು ಮಾಡಿರುವ ವ್ಯಕ್ತಿಯೊಬ್ಬರು ಇದೀಗ 9 ಲಕ್ಷ ರೂಪಾಯಿ ಕಳೆದುಕೊಂಡು ಪೊಲೀಸ್ ಠಾಣೆ ಅಲೆಯಬೇಕಾದ ಪ್ರಸಂಗ ಬಂದಿದೆ.
ಅಷ್ಟಕ್ಕೂ ಆಗಿದ್ದೇನೆಂದರೆ, ಅಶೋಕ್ ಮನ್ವಾಟೆ ಎನ್ನುವ ಮಹಾರಾಷ್ಟ್ರದ ನಾಗ್ಪುರದ ವ್ಯಕ್ತಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿದ್ದಾನೆ. ಆ ಸಂದರ್ಭದಲ್ಲಿ ಅಶೋಕ್ ಅವರ 15 ವರ್ಷದ ಮಗ ಕರೆ ಸ್ವೀಕರಿಸಿದ್ದಾನೆ. ಅಲ್ಲಿಂದ ಕರೆ ಮಾಡಿದಾತ ತಾನು ಡಿಜಿಟಲ್ ಹಣ ಪಾವತಿ ಕಂಪನಿಯ ಗ್ರಾಹಕ ಆರೈಕೆಯ ಕಾರ್ಯನಿರ್ವಾಹಕ ಎಂದು ಹೇಳಿಕೊಂಡು, ನಿಮ್ಮ ಮೊಬೈಲ್ ನಲ್ಲಿ ಆ್ಯಪ್ ಡೌನ್ಲೋಡ್ ಮಾಡಿ ಅದಕ್ಕೆ
ಬ್ಯಾಂಕ್ ಅಕೌಂಟ್ ಲಿಂಕ್ ಮಾಡುವಂತೆಯೂ ಹೇಳಿದ್ದಾನೆ. ಅಲ್ಲದೆ ಕ್ರೆಡಿಟ್ ಮಿತಿ ಹೆಚ್ಚಿಸುವುದಾಗಿ ತಿಳಿಸಿದ್ದಾನೆ.
ಇದನ್ನು ಬಾಲಕ ನಂಬಿಬಿಟ್ಟಿದ್ದಾನೆ. ಹಿಂದೆ ಮುಂದೆ ನೋಡದೇ ತಂದೆಯ ಮೊಬೈಲ್ ನಲ್ಲಿ ಆ್ಯಪ್ ಇನ್ಸ್ಟಾಲ್ ಮಾಡಿದ್ದಾನೆ. ಅಷ್ಟೇ. ಆ್ಯಪ್ ಇನ್ಸ್ಟಾಲ್ ಆಗುತ್ತಿದ್ದಂತೆಯೇ ಅಶೋಕ್ ಅವರ ಬ್ಯಾಂಕ್ ಖಾತೆಯಲ್ಲಿದ್ದ 8.95 ಲಕ್ಷ ರೂಪಾಯಿ ವಿತ್ಡ್ರಾ ಆಗಿಬಿಟ್ಟಿದೆ.
ಈ ವಿಷಯ ತಿಳಿಯುತ್ತಲೇ ಇದೀಗ ಅಶೋಕ್ ಅವರು ಸೈಬರ್ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾರೆ. ತನಿಖೆ ನಡೆಯುತ್ತಿದೆ.