ಫೋನ್​ಗಳಲ್ಲಿ ಬಳಸುವ ಅಂಡ್ರಾಯ್ಡ್​ ಸಿಸ್ಟಂ ವಿವಾದ: ಅಮೆರಿಕದ 'ಸುಪ್ರೀಂ' ಬಾಗಿಲಿದೆ ಗೂಗಲ್​, ಒರಾಕಲ್​ ಕಿತ್ತಾಟ

oracle-google
Published on

ವಾಷಿಂಗ್ಟನ್‌: ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸುವ ಆಂಡ್ರಾಯ್ಡ್ ಆಪರೇಟಿಂಗ್‌ ಸಿಸ್ಟ್ಂಗೆ ಸಂಬಂಧಿಸಿದಂತೆ ದೈತ್ಯ ತಂತ್ರಜ್ಞಾನ ಕಂಪೆನಿಗಳಾಗಿರುವ ಗೂಗಲ್‌ ಮತ್ತು ಒರಾಕಲ್‌ ನಡುವೆ ದಶಕಗಳಿಂದ ಶುರುವಾಗಿರುವ ಕಿತ್ತಾಟವೀಗ ಅಮೆರಿಕದ ಸುಪ್ರೀಂಕೋರ್ಟ್​ ಮೆಟ್ಟಿಲೇರಿದೆ.

ಈ ಸಿಸ್ಟಂನ ಹಕ್ಕುಸ್ವಾಮ್ಯದ ಮೇಲೆ ತನ್ನದೇ ಹಕ್ಕು ಇದೆ ಎಂದು ಈ ಎರಡೂ ಕಂಪೆನಿಗಳು ಹೇಳುತ್ತಿದ್ದು, ಇದರ ವಿವಾದವನ್ನು ಅಂತಿಮವಾಗಿ ಸುಪ್ರೀಂಕೊರ್ಟ್‌ ಬಗೆಹರಿಸಬೇಕಿದೆ.

ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸುವ ಆಂಡ್ರಾಯ್ಡ್ ಆಪರೇಟಿಂಗ್‌ ಸಿಸ್ಟ್ಂ ಅನ್ನು ಗೂಗಲ್​ 2007ರಲ್ಲಿ ಬಿಡುಗಡೆಗೊಳಿಸಿತ್ತು. ಈ ಸಾಫ್ಟ್​ವೇರ್​ ಅಭಿವೃದ್ಧಿಪಡಿಸಲು ಲಕ್ಷಾಂತರ ಹೊಸ ಕಂಪ್ಯೂಟರ್‌ ಕೋಡ್‌ಗಳನ್ನು ಬಳಸಲಾಗಿದೆ ಹಾಗೂ ಇದರಲ್ಲಿ ಒರಾಕಲ್‌ನ ಜಾವಾ ತಂತ್ರಜ್ಞಾನದ 11,330 ಕೋಡ್‌ಗಳನ್ನು ಗೂಗಲ್‌ ಬಳಸಿಕೊಂಡಿದೆ ಎನ್ನಲಾಗಿದೆ.

ಇದೇ ಈಗ ಗೂಗಲ್​ಗೆ ಮುಳುವಾಗಿದೆ. ತನ್ನ 11,330 ಕೋಡ್‌ಗಳನ್ನು ಗೂಗಲ್‌ ಬಳಸಿಕೊಂಡಿರುವ ಹಿನ್ನೆಲೆಯಲ್ಲಿ ಇದು ಕೃತಿಚೌರ್ಯ ಎನ್ನುವುದು ಒರಾಕಲ್​ ವಾದ. ಹಕ್ಕುಸ್ವಾಮ್ಯದ ಉಲ್ಲಂಘನೆಯಾಗಿದೆ. ಕಳ್ಳತನ ಪ್ರಕರಣ ಇದು ಎಂದು ಒರಾಕಲ್​ ಹೇಳಿದೆ. ಈ ಹಿನ್ನೆಲೆಯಲ್ಲಿ ಗೂಗಲ್‌ ವಿರುದ್ಧ ಹಕ್ಕುಸ್ವಾಮ್ಯ ಆರೋಪದಡಿ 800 ಕೋಟಿ ಡಾಲರ್‌ ಮೊಕದ್ದಮೆ ಹೂಡಿದೆ.

ಆದರೆ ತನ್ನ ಕ್ರಮವನ್ನು ಗೂಗಲ್‌ ಸಮರ್ಥಿಸಿಕೊಂಡಿದೆ. ಉದ್ಯಮ ವಲಯದಲ್ಲಿ ಈ ರೀತಿಯು ಸಾಮಾನ್ಯ ಪದ್ಧತಿಯಾಗಿದೆ. ತಾಂತ್ರಿಕತೆಯ ಪ್ರಗತಿಯ ದೃಷ್ಟಿಯಿಂದ ಇದೊಂದು ಉತ್ತಮ ಕ್ರಮ ಎಂದು ಗೂಗಲ್​ ಪ್ರತಿಪಾದಿಸಿದೆ.

ಹಲವು ವರ್ಷಗಳಿಂದ ನಡೆಯುತ್ತಿರುವ ಈ ಜಗಳಕ್ಕೆ ಸಂಬಂಧಿಸಿದಂತೆ ಹೈಕೋರ್ಟ್​ ಗೂಗಲ್​ ಪರವಾಗಿ ತೀರ್ಪು ನೀಡಿತ್ತು. ತಂತ್ರಜ್ಞಾನವನ್ನು ಗೂಗಲ್​ ಸದ್ಬಳಕೆ ಮಾಡಿಕೊಂಡಿದೆ ಎಂದಿತ್ತು. ಇದೀಗ ಸುಪ್ರೀಂ ಅಂಗಳಕ್ಕೆ ಹೋಗಿದೆ.

ಮೈಕ್ರೊಸಾಫ್ಟ್‌, ಐಬಿಎಂ ಸೇರಿದಂತೆ ಹಲವು ಕಂಪನಿಗಳು ಗೂಗಲ್‌ಗೆ ಬೆಂಬಲ ನೀಡಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್‌ ಆಡಳಿತ, ಮೋಷನ್‌ ಪಿಕ್ಚರ್‌ ಅಸೋಸಿಯೇಷನ್‌ ಮತ್ತು ರಿಕಾರ್ಡಿಂಗ್‌ ಅಸೋಸಿಯೇಷನ್‌ ಆಫ್‌ ಅಮೆರಿಕ ಒರಾಕಲ್‌ಗೆ ಬೆಂಬಲ ನೀಡಿವೆ.

ಕೋಟ್ಯಂತರ ಡಾಲರ್‌ ಮೌಲ್ಯದ ಪ್ರಕರಣ ಇದಾಗಿದ್ದು, ಭವಿಷ್ಯದಲ್ಲಿ ಸಾಫ್ಟ್‌ವೇರ್‌ ಅಭಿವೃದ್ಧಿ ದೃಷ್ಟಿಯಿಂದ ಮಹತ್ವ ಪಡೆದಿದೆ ಎಂದೇ ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net