

ಕಲಬುರಗಿ: ಇದೇ 3ರಂದು ನಡೆದ ಗುಂಡಿನ ದಾಳಿಯಲ್ಲಿ ಕಲಬುರಗಿ ಜಿಲ್ಲೆಯ ಯೋಧ ರಾಜಕುಮಾರ ಮಾವಿನ್ ಹುತಾತ್ಮರಾಗಿದ್ದಾರೆ.
ತ್ರಿಪುರಾ ಗಡಿಯಲ್ಲಿ ಗಸ್ತು ತಿರಗುತ್ತಿದ್ದ ಬಾಂಗ್ಲಾ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಭಾರತ- ಬಾಂಗ್ಲಾ ಗಡಿಯ ಧಲಾಯಿ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆದಿತ್ತು. ಈ ವೇಳೆ ಎದೆಗೆ ಗುಂಡು ತಾಗಿ ಗಡಿ ಭದ್ರತಾ ಪಡೆ ಯೋಧ ಮಾವಿನ್ (38) ಹುತಾತ್ಮರಾಗಿದ್ದಾರೆ. ಇವರು ಜಿಲ್ಲೆಯ ಚಿಂಚನಸೂರು ಗ್ರಾಮದವರು.
ಇವರ ಪಾರ್ಥಿವ ಶರೀರ ಇಂದು ನಸುಕಿನ ಮೂರು ಗಂಟೆಯ ವೇಳೆಗೆ ಸ್ವಗ್ರಾಮ ತಲುಪಿದ್ದು, ಗ್ರಾಮದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಇಂದು ಮಧ್ಯಾಹ್ನ ಹನ್ನೆರಡು ಗಂಟೆಗೆ ಅಂತಿಮ ಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ.