‘ರಾಜಕೀಯವಾಗಿ ಸೋಲಿಸಲು ಆಗಿಲ್ಲವೆಂದು ಅಂದು ಸಿಕ್ಕಿದ್ರೆ ನನ್ನನ್ನೇ ಸುಟ್ಟುಹಾಕ್ತಿದ್ರು’

akhanda
Published on

ಬೆಂಗಳೂರು: ಬೆಂಗಳೂರಿನ ಡಿ.ಜಿ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಪ್ರಕರಣದ ಹಿಂದೆ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರೇ ಟಾರ್ಗೆಟ್‌ ಎಂದು ಸಂದೇಹ ವ್ಯಕ್ತವಾಗುತ್ತಲೇ ಶಾಸಕರು, ಪೊಲೀಸ್ ಠಾಣೆಯಿಂದ ಇಂದು ಕಣ್ಣೀರು ಹಾಕಿದ್ದಾರೆ.

ಇಂದು ಕಮಿಷನರ್ ಕಚೇರಿಗೆ ಆಗಮಿಸಿದ ಅಖಂಡ ಶ್ರೀನಿವಾಸ್ ಅವರನ್ನು ಸಿಸಿಬಿ ಡಿಸಿಪಿ ರವಿಕುಮಾರ್ ವಿಚಾರಣೆ ನಡೆಸಿದರು. ಆಗ ಪೊಲೀಸರ ಮುಂದೆ ಭಾವುಕರಾಗಿ ಅಖಂಡ ಅವರು ನುಡಿದರು.

ನನ್ನನ್ನು ರಾಜಕೀಯವಾಗಿ ಮುಗಿಸಬೇಕು ಅಂದುಕೊಂಡು ಇಷ್ಟೆಲ್ಲಾ ಮಾಡಿದ್ದಾರೆ. ಅವರು ಈ ಮಟ್ಟಕ್ಕೆ ಇಳಿಯುತ್ತಾರೆ ಎಂದು ಅಂದುಕೊಂಡಿರಲಿಲ್ಲ. ರಾಜಕೀಯವಾಗಿ ಮುಗಿಸಬೇಕು ಎಂದಿದ್ದರೆ . ರಾಜಕೀಯವಾಗಿಯೇ ಫೇಸ್ ಮಾಡಬೇಕಿತ್ತು ಎಂದಿದ್ದಾರೆ.

ಇಷ್ಟೊಂದು ಆವಾಂತರ ಮಾಡಿರುವುದನ್ನು ನೋಡಿದರೆ, ಅಂದು ಗಲಭೆ ನಡೆದ ದಿನ ನಾನೇನಾದರೂ ಎದುರಿಗೆ ಸಿಕ್ಕಿದ್ದರೆ ನನ್ನನ್ನೇ ಸುಟ್ಟುಹಾಕಿಬಿಡುತ್ತಿದ್ದರು ಎಂದರು. ನನ್ನ ಮೇಲೆ ಈ ರೀತಿ ದ್ವೇಷ ಸಾಧಿಸುತ್ತಾರೆ ಎಂದು ಅಂದುಕೊಂಡಿರಲಿಲ್ಲ. ಸಾಕಷ್ಟು ಆಸ್ತಿ ಪತ್ರ ಹಾಳಾಗಿದೆ. ಡೈರಿ ಎಲ್ಲಾ ಸುಟ್ಟು ಹೋಗಿದೆ. ರಾಜಕೀಯವಾಗಿ ಮುಗಿಸಬೇಕು ಅಂದಿದ್ರೆ ರಾಜಕೀಯವಾಗಿಯೇ ಸೋಲಿಸಬಹುದಿತ್ತಲ್ವಾ ಎಂದಿದ್ದಾರೆ.

ಅವರು ಏನೇ ಮಾಡಲಿ ನಾನು ಗೆದ್ದೇ ಗೆಲ್ತಿದ್ದೇನೆ. ಪಕ್ಷಾಂತರವಾಗಿ ಚುನಾವಣೆ ಸ್ಪರ್ಧಿಸಿದ್ರೂ ಗೆಲ್ಲುತ್ತಿದ್ದೆ. ಇದನ್ನು ಸಹಿಸಲು ಆಗಲಿಲ್ಲ ಅವರಿಗೆ. ನನಗೆ ನನ್ನ ಜನ ಇದ್ದಾರೆ ಎಂದುಕೊಂಡಿದ್ದೆ. ಅದರೆ ಇವತ್ತು ಅವರೇ ತಿರುಗಿ ಬಿದ್ರಾ ಅನ್ನೋ ಅನುಮಾನ ಇದೆ ಎಂದಿದ್ದಾರೆ.

ಕಾಂಗ್ರೆಸ್ ಪಾಪದ ಕೆಲಸ ಮಾಡಿದೆ ಎಂದ ಸಚಿವ ಸುಧಾಕರ

ಇದೇ ವೇಳೆ ಘಟನೆಯನ್ನು ತೀವ್ರವಾಗಿ ಖಂಡಿಸಿ ವೈದ್ಯಕೀಯ ಶಿಕ್ಷಣ ಶಿಕ್ಷಣ ಸಚಿವ ಸುಧಾಕರ ಟ್ವೀಟ್‌ ಮಾಡಿದ್ದಾರೆ. ಅಖಂಡ ಶ್ರೀನಿವಾಸ ಅವರ ಮನೆಯನ್ನು ಸುಟ್ಟು ಕಾಂಗ್ರೆಸ್ ಪಾಪದ ಕೆಲಸ ಮಾಡಿದೆ ಎಂದಿದ್ದಾರೆ.

ಎಪಿಜೆ ಅಬ್ದುಲ್‌ ಕಲಾಂ, ರಾಮ್ ನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿ ಸ್ಥಾನ ಕೊಟ್ಟು ಬಿಜೆಪಿ ಗೌರವಿಸಿತು. ಕಾಂಗ್ರೆಸ್, ಕಾರ್ಪೊರೇಟರ್‌ಗಳ ಕುಮ್ಮಕ್ಕಿನಿಂದ ದಲಿತ ಶಾಸಕ ಅಖಂಡ ಶ್ರೀನಿವಾಸ್‌ ಮನೆ ಸುಟ್ಟು ಪಾಪದ ಕೆಲಸ ಮಾಡಿತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾವುದು ಸ್ವಾರ್ಥವೋ ಅದೇ ಪಾಪ.ಯಾವುದು ನಿಸ್ವಾರ್ಥವೋ ಅದೇ ಪುಣ್ಯ. ಸೇವಾ ಕಾರ್ಯದಲ್ಲಿ ಪ್ರೀತಿ ಇರಬೇಕು ಹೊರತು ದ್ವೇಷವಲ್ಲ ಎಂದು ತಮ್ಮ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net