

ನವದೆಹಲಿ : ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆ ಕೇಂದ್ರ ಸರ್ಕಾರವು ರಾಜ್ಯಸಭೆಯಲ್ಲಿ ಕೃಷಿ ಮಸೂದೆಗಳನ್ನು ಮಂಡಿಸಿದೆ.
ರೈತರು ಮತ್ತು ಬೆಳೆಗಳ ವ್ಯಾಪಾರ, ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ 2020 ಮತ್ತು ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ 2020 ಮಸೂದೆಯನ್ನು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ರಾಜ್ಯಸಭೆಯಲ್ಲಿ ಮಂಡನೆ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಈ ಎರಡು ಮಸೂದೆಗಳು ರೈತರ ಜೀವನದಲ್ಲಿ ಬದಲಾವಣೆ ತರಲಿದ್ದು, ರೈತರು ದೇಶದಲ್ಲಿ ಎಲ್ಲಿ ಬೇಕಾದರೂ ತಮ್ಮ ಬೆಳೆಗಳನ್ನು ಮುಕ್ತವಾಗಿ ವ್ಯಾಪಾರ ಮಾಡಲು ಈ ಮಸೂದೆಗಳು ಅನುವು ಮಾಡಿಕೊಡಲಿದೆ. ಈ ಮಸೂದೆಗಳು ಐತಿಹಾಸಿಕವಾಗಿದ್ದು ರೈತರ ಜೀವನದಲ್ಲಿ ಬದಲಾವಣೆ ತರಲಿದೆ ಎಂದು ಅವರು ಹೇಳಿದರು.
ಈ ಮಸೂದೆಗಳು ಕನಿಷ್ಠ ಬೆಂಬಲ ಬೆಲೆಗೆ ಸಂಬಂಧಿಸಿಲ್ಲ ಎಂಬುದನ್ನು ಇದೇವೇಳೆ ಸ್ಪಷ್ಟಪಡಿಸಲು ಇಚ್ಛಿಸುತ್ತನೆಂದು ಹೇಳಿದ್ದಾರೆ.
ರೈತರ ಬೆಳೆಗಳ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ, ಇಲೆಕ್ಟ್ರಾನಿಕ್ ವ್ಯಾಪಾರಗಳ ವಹಿವಾಟಿಗೆ ಅನುಮತಿ ನೀಡಲಿದೆ ಮತ್ತು ಕೃಷಿ ಉತ್ಪನ್ನಗಳ ಮೇಲೆ ನೇರ ಆನ್‌ಲೈನ್ ಖರೀದಿ ಮತ್ತು ಮಾರಾಟಕ್ಕೆ ಅನುಕೂಲವಾಗುವಂತೆ ವಹಿವಾಟು ವೇದಿಕೆಗಳನ್ನು ಸ್ಥಾಪನೆಗೊಳಿಸಲು ಅನುವು ಮಾಡಿಕೊಡುತ್ತದೆ ಹಾಗೂ ಇನ್ನು ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ, ಯಾವುದೇ ಕೃಷಿ ಉತ್ಪನ್ನಗಳ ಉತ್ಪಾದನೆ ಅಥವಾ ಪಾಲನೆಗೂ ಮೊದಲು ಕೃಷಿ ಒಪ್ಪಂದವನ್ನು ಅನುವು ಮಾಡಿಕೊಡಲಿದೆ. ಕೃಷಿ ಉತ್ಪನ್ನಗಳ ಖರೀದಿಗೆ ಪಾವತಿಸಬೇಕಾದ ಖಾತರಿಯ ಬೆಲೆಯನ್ನು ಅಂತಹ ಒಪ್ಪಂದಗಳಲ್ಲಿ ಉಲ್ಲೇಖಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಆದರೆ ಇದಾವುದಕ್ಕೂ ಕಿವಿಗೊಡದ ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ಇದಕ್ಕೆ ಸಹಿಹಾಕುವ ಮೂಲಕ ರೈತರಿಗೆ ಗಲ್ಲುಶಿಕ್ಷೆ ನೀಡಬೇಡಿ ಎಂದು ಪ್ರತಿಭಟನೆ ಮಾಡಿದವು.
ಈ ಮಸೂದೆ ರೈತರಿಗೆ ಬಹಳ ರೀತಿಯಲ್ಲಿ ಅನುಕೂಲಕರ ಆಗಲಿದೆ. ಮಧ್ಯವರ್ತಿಗಳು ಹಾಗೂ ವಿವಿಧ ಸಮಸ್ಯೆಗಳಿಂದ ರೈತರು ಹಾಗೂ ಕೃಷಿ ಕ್ಷೇತ್ರಕ್ಕೆ ಮುಕ್ತಿ ನೀಡಲಿವೆ. ಈಗ ಚಾಲ್ತಿಯಲ್ಲಿರುವ ಕನಿಷ್ಠ ಬೆಂಬಲ ಬೆಲೆ, ಸರ್ಕಾರವೇ ಕೃಷಿ ಉತ್ಪನ್ನಗಳ ಖರೀದಿಯಂತಹ ವ್ಯವಸ್ಥೆ ಮುಂದುವರಿಯಲಿವೆ. ಈ ಮಸೂದೆಗಳ ಪರಿಣಾಮ ರೈತರಿಗೆ ಇನ್ನೂ ಹಲವಾರು ಸೌಲಭ್ಯಗಳು, ಅನುಕೂಲಗಳು ದೊರೆಯಲಿವೆ ಎಂದು ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರೂ ಹೇಳಿದ್ದರು.
ಇದು ಕೃಷಿಯಲ್ಲಿ ರೈತರಿಗೆ ನೂತನ ಸ್ವಾತಂತ್ರ್ಯ ನೀಡುತ್ತದೆ. ಅವರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಹೆಚ್ಚಿನ ಆಯ್ಕೆಗಳು ಮತ್ತು ಅವಕಾಶಗಳನ್ನು ನೀಡುತ್ತದೆ ಎಂಬುದಾಗಿ ಹೇಳಿದ್ದರು.