

ನವದೆಹಲಿ: ಕಳೆದ ನಾಲ್ಕು ತಿಂಗಳಿನಲ್ಲಿ ಅಂದರೆ ಮೇಯಿಂದ ಆಗಸ್ಟ್ವರೆಗೆ ಕರೊನಾ ವೈರಸ್ ಹಾಗೂ ಅದರಿಂದ ಉಂಟಾದ ಲಾಕ್ಡೌನ್ ಪರಿಣಾಮಗವಾಗಿ ಭಾರತದಲ್ಲಿ ಒಟ್ಟು 66 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಅಧ್ಯಯನ ವರದಿಯೊಂದು ಬಹಿರಂಗಪಡಿಸಿದೆ.
ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಈ ವಿಷಯವನ್ನು ಬಹಿರಂಗಪಡಿಸಿದೆ. ಭಾರತೀಯ ಆರ್ಥಿಕತೆಯನ್ನು ಅವಲೋಕಿಸುವ ಸಿಎಂಐಇ, ಪ್ರತಿ ನಾಲ್ಕು ತಿಂಗಳಿಗೊಮ್ಮೆ ಉದ್ಯೋಗದ ಸಮೀಕ್ಷೆಯನ್ನು ಪ್ರಕಟಿಸುತ್ತದೆ.
ಉದ್ಯೋಗ ಕಳೆದುಕೊಂಡಿರುವವರ ಪೈಕಿ ವೈಟ್ ಕಾಲರ್ ಜಾಬ್ಗಳವರೇ ಅಧಿಕ ಮಂದಿ ಎಂದು ಸಮೀಕ್ಷೆ ಹೇಳಿದೆ. ಇದರರ್ಥ ಇಂಜಿನಿಯರ್, ಡಾಕ್ಟರ್ಗಳು ಸೇರಿದಂತೆ ಅಧಿಕ ಸಂಬಳ ಪಡೆಯುವ ಉನ್ನತ ಹುದ್ದೆಯಲ್ಲಿರುವವರೇ ಕೆಲಸ ಕಳೆದುಕೊಂಡಿರುವುದು ಹೆಚ್ಚು (ವೈಟ್ ಕಾಲರ್ ಜಾಬ್ ಎಂದರೆ ಹೆಚ್ಚಿನ ವೇತನ ಹೊಂದಿರುವ ಉದ್ಯೋಗಗಳು. ಕಚೇರಿಗಳಲ್ಲಿ ಕೆಲಸ ಮಾಡುವ ಹಿರಿಯ ಅಧಿಕಾರಿಗಳು, ಶರ್ಟ್ ಮತ್ತು ಟೈ ಧರಿಸಿದವರು, ಕೈಗಳನ್ನು ಕೊಳೆ ಮಾಡಿಕೊಳ್ಳದ ವೃತ್ತಿಪರರನ್ನು ‘ವೈಟ್ ಕಾಲರ್’ ಎಂದು ಹಿಂದಿನಿಂದಲೂ ಕರೆಯಲಾಗುತ್ತದೆ).
ಲಾಕ್‌ಡೌನ್‌ನಿಂದ ವೈಟ್ ಕಾಲರ್ ವಲಯದ ಕ್ಲರ್ಕ್‌ಗಳಿಗೆ ಹೆಚ್ಚಿನ ತೊಂದರೆಯಾಗಿಲ್ಲ. ಬಿಪಿಒ/ಕೆಪಿಒ ವಲಯದ ಸೆಕ್ರೆಟರಿಗಳು, ಡೇಟಾ ಎಂಟ್ರಿ ಆಪರೇಟರ್‌ಗಳು, ಆಫೀಸ್ ಕ್ಲರ್ಕ್‌ಗಳಿಗೆ ಮನೆಯಿಂದ ಕೆಲಸ ಮಾಡುವ ಅವಕಾಶ ನೀಡಲಾಗಿದ್ದು, ಹೆಚ್ಚಿನವರಿಗೆ ಉದ್ಯೋಗ ಬಾಧಿಸಿಲ್ಲ ಎಂದು ವರದಿ ಹೇಳಿದೆ.
2019ರ ಆಗಸ್ಟ್‌ನಲ್ಲಿ 1.88 ಕೋಟಿ ವೈಟ್ ಕಾಲರ್ ಉದ್ಯೋಗಿಗಳಿದ್ದರು. ಈಗ 1.22 ಕೋಟಿಗೆ ಉದ್ಯೋಗಿಗಳ ಸಂಖ್ಯೆ ಇಳಿಕೆಯಾಗಿದೆ. ಉದ್ಯಮ ವಲಯದಲ್ಲಿ 50 ಲಕ್ಷ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಅಂದರೆ ಉದ್ಯೋಗಿಗಳ ಸಂಖ್ಯೆ ಶೇ. 26ರಷ್ಟು ಕುಸಿದಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಹೆಚ್ಚಿನ ಉದ್ಯೋಗ ನಷ್ಟ ಸಂಭವಿಸಿದೆ. ಏಪ್ರಿಲ್‌ನಲ್ಲಿ ಸಿಎಂಐಇ ಅಂದಾಜು ಮಾಡಿದ ಪ್ರಕಾರ, 12.1 ಕೋಟಿ ಉದ್ಯೋಗಗಳು ಕಡಿತವಾಗಿದ್ದವು. ಆಗಸ್ಟ್ ವೇಳೆಗೆ ಪರಿಸ್ಥಿತಿ ಸ್ವಲ್ಪ ಮಟ್ಟಗೆ ಸುಧಾರಿಸಿಕೊಂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.