

ಸೂರತ್ (ಗುಜರಾತ್): ಕಳ್ಳನೋಟು ಸಾಗಣೆದಾರರು ಸಿಕ್ಕಿಬೀಳದಂತೆ ಮಾಡುವ ಕಿತಾಪತಿಗಳು ಅಷ್ಟಿಷ್ಟಲ್ಲ. ಆದರೂ ಹಲವು ಬಾರಿ ಪೊಲೀಸರ ಕೈಗೆ ಸಿಕ್ಕಿಬೀಳುತ್ತಾರೆ. ಗುಜರಾತ್ನ ಸೂರತ್ನಲ್ಲಿ ಆಂಬುಲೆನ್ಸ್ನಲ್ಲಿ ಕಳ್ಳನೋಟು ಸಾಗಣೆ ಮಾಡಿ ಸಿಕ್ಕಿಬಿದ್ದಿದ್ದಾರೆ ಖದೀಮರು.
ಇಷ್ಟೇ ಆಗಿದ್ದರೆ ಇದು ಸುದ್ದಿನೇ ಆಗುತ್ತಿರಲಿಲ್ಲವೇನೋ. 26 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಕಳ್ಳನೋಟನ್ನು ಇಲ್ಲಿ ಸಾಗಾಟ ಮಾಡಲಾಗುತ್ತಿತ್ತು. ಆದರೆ ವಿಚಿತ್ರ ಎಂದರೆ ನೋಡಲು ಥೇಟ್ ಅಸಲಿ ನೋಟಿನಂತೆಯೇ ಇದ್ದ ಈ ನಕಲಿ ನೋಟನ್ನು ಸೂಕ್ಷ್ಮವಾಗಿ ಗಮನಿಸಿದಾಗ ಪೊಲೀಸರೇ ಕಕ್ಕಾಬಿಕ್ಕಿಯಾಗಿದ್ದಾರೆ.
ಸೂರತ್ನ ಆಸ್ಪತ್ರೆಯೊಂದ ಅಂಬುಲೆನ್ಸ್ನಲ್ಲಿ ಸಾಗಿಸುತ್ತಿದ್ದ ಈ ಕಳ್ಳನೋಟನ್ನು ಪರಿಶೀಲಿಸಿದಾಗ ಅದರಲ್ಲಿ ರಿಸರ್ವ್ ಬ್ಯಾಂಕ್ ಬದಲು ರಿವರ್ಸ್ ಬ್ಯಾಂಕ್ ಆಫ್ ಇಂಡಿಯಾ ಎಂದು ಪ್ರಿಂಟ್ ಮಾಡಲಾಗಿತ್ತು! ಕಳ್ಳನೋಟು ಸಾಗಾಟ ಮಾಡುತ್ತಿರುವ ಕುರಿತು ಖಚಿತ ಸುಳಿವಿನ ಮೇರೆಗೆ ಕಾರ್ಯಪ್ರವೃತ್ತರಾಗಿದ್ದ ಪೊಲೀಸರು ಸೂರತ್ನ ಕಮ್ರೇಜ್ ಪ್ರದೇಶದಲ್ಲಿ ಆಂಬುಲೆನ್ಸ್ ತಡೆದು ನಿಲ್ಲಿಸಿದ್ದರು.
ಅದರಲ್ಲಿ 1,290 ಬಂಡಲ್ ನೋಟುಗಳನ್ನು ಆರು ಪೆಟ್ಟಿಗೆಗಳಲ್ಲಿ ಇಡಲಾಗಿತ್ತು. ಅವೆಲ್ಲವೂ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳಾಗಿದ್ದವು. ಅದನ್ನು ಪೊಲೀಸರು ಪರಿಶೀಲಿಸಿದಾಗ 'ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ' ಬದಲಿಗೆ 'ರಿವರ್ಸ್ ಬ್ಯಾಂಕ್ ಆಫ್ ಇಂಡಿಯಾ' ಎಂದು ಮುದ್ರಿಸಿರುವುದು ಕಂಡುಬಂದಿದೆ. ಯಾರಿಗೂ ಸಂದೇಹ ಬರಬಾರದು ಎನ್ನುವ ಕಾರಣಕ್ಕೆ ಈ ಆಂಬುಲೆನ್ಸ್ ಹೊರಗೆ ‘ಗೋ ಮಾತಾ ರಾಷ್ಟ್ರ ಮಾತಾ’ ಎಂದೂ ಬರೆಯಲಾಗಿತ್ತು. ಸದ್ಯ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ (ಏಜೆನ್ಸೀಸ್)