20:20:20ರ ನಿಯಮ ಅನುಸರಿಸಿ- ಆನ್​ಲೈನ್​ ಕ್ಲಾಸ್​ ಕಣ್ಣಿನ ಸಮಸ್ಯೆಯಿಂದ ದೂರವಿರಿ

1139040
Published on

ಬೆಂಗಳೂರು: ಕರೊನಾದ ಹಿನ್ನೆಲೆಯಲ್ಲಿ ಕಳೆದ ವರ್ಷದಿಂದಲೂ ಆನ್​ಲೈನ್​ ಕ್ಲಾಸ್​ ಅನಿವಾರ್ಯವಾಗಿದೆ. ಇದರ ನಡುವೆಯೇ ಆನ್​ಲೈನ್​ ಕ್ಲಾಸ್​ ನೆಪದಲ್ಲಿ ಸದಾ ಕಂಪ್ಯೂಟರ್​ ಮತ್ತು ಮೊಬೈಲ್​ನಲ್ಲಿ ಮುಳುಗಿರುವ ಮಕ್ಕಳಿಗೆ ಕಣ್ಣಿನ ಸಮಸ್ಯೆಗಳೂ ಹೆಚ್ಚಾಗಿದ್ದು, ಆಸ್ಪತ್ರೆಗೆ ಬರುತ್ತಿರುವವರ ಸಂಖ್ಯೆ ಹೆಚ್ಚಾಗಿದೆ.

ಈ ಹಿನ್ನೆಲೆಯಲ್ಲಿ ಮಕ್ಕಳು ಹಾಗೂ ಪಾಲಕರು ಯಾವೆಲ್ಲಾ ಮುಂಜಾಗರೂಕತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನಾರಾಯಣ ನೇತ್ರಾಲಯದ ಖ್ಯಾತ ವೈದ್ಯ ಡಾ.ಭುಜಂಗ ಶೆಟ್ಟಿ ಇಲ್ಲಿ ಮಾಹಿತಿ ನೀಡಿದ್ದಾರೆ. ಅವರು ಏನು ಹೇಳಿದ್ದಾರೆ ನೋಡಿ...

ಆನ್​ಲೈನ್​ ಕ್ಲಾಸ್​ ಹಿನ್ನೆಲೆಯಲ್ಲಿ ಮಕ್ಕಳು ಹೆಚ್ಚಾಗಿ ಡಿಜಿಟಲ್​ ಡಿವೈಸ್​ಗೆ ಎಕ್ಸ್​ಪೋಸ್​ ಆಗುತ್ತಿದ್ದಾರೆ. ಇದರಿಂದ ಕಣ್ಣಿನ ಸಮಸ್ಯೆ ಬರುತ್ತಿದೆ. ಇದಕ್ಕೆ ಕಂಪ್ಯೂಟರ್ ವಿಷನ್​ ಸಿಂಡ್ರೋಮ್​ ಎಂದು ಕರೆಯುತ್ತೇವೆ. ಆನ್​ಲೈನ್​ ಕ್ಲಾಸ್​ ಅನಿವಾರ್ಯ ಆಗಿರುವ ಈ ಹೊತ್ತಿನಲ್ಲಿ ಮಕ್ಕಳು ಕಂಪ್ಯೂಟರ್​ ಇಲ್ಲವೇ ಮೊಬೈಲ್​ ಫೋನ್​ ನೋಡುವುದು ಅನಿವಾರ್ಯವಾಗಿದೆ. ಆದರೆ ಸ್ವಲ್ಪ ಮುಂಜಾಗರೂಕತೆ ತೆಗೆದುಕೊಂಡರೆ ಸಮಸ್ಯೆ ಬಗೆಹರಿಸಬಹುದು.

ಸಾಮಾನ್ಯವಾಗಿ ನಾವು ಒಂದು ನಿಮಿಷಕ್ಕೆ ಏನಿಲ್ಲವೆಂದರೂ 15 ಸಲ ಕಣ್ಣನ್ನು ಮಿಟುಕಿಸುತ್ತೇವೆ (ಬ್ಲಿಂಕಿಂಗ್​). ಆದರೆ ಕಂಪ್ಯೂಟರ್​ ಇಲ್ಲವೇ ಫೋನ್​ ಮುಂದೆ ಕುಳಿತಾದ ಇದನ್ನು ಮಾಡುವುದಿಲ್ಲ. ಇದು ಅತಿ ದೊಡ್ಡ ಸಮಸ್ಯೆಯಾಗಿದೆ. ಇದೇ ಕಾರಣಕ್ಕೆ ಕಣ್ಣಿನ ತೊಂದರೆ, ಕಣ್ಣಿನಲ್ಲಿ ನೀರು ಬರುವುದು, ಕೆಂಪಗಾಗುವುದು, ತಲೆನೋವು ಬರುವ ಸಮಸ್ಯೆ ಉಂಟಾಗುತ್ತಿದೆ.

ಆದ್ದರಿಂದ ಕಣ್ಣಿಗೆ ಬ್ರೇಕ್​ ಕೊಡಬೇಕು. 20:20:20 ರೂಲ್ಸ್​ ಫಾಲೋ ಮಾಡಬೇಕು. ಅದೇನು ಎಂದರೆ ಪ್ರತಿ 20 ನಿಮಿಷಕ್ಕೊಮ್ಮೆ 20 ಸೆಕೆಂಡ್​ಗಳವರೆಗಾದರೂ ಸುಮಾರು 20 ಅಡಿಗಳಷ್ಟು ದೂರ ಕಣ್ಣಿನ ದೃಷ್ಟಿ ಹಾಕಿಸಬೇಕು. ಹೀಗೆ ಮಾಡುತ್ತಿದ್ದರೆ ಕಣ್ಣಿನ ಸಮಸ್ಯೆಯನ್ನು ತಕ್ಕಮಟ್ಟಿಗೆ ಪರಿಹರಿಸಿಕೊಳ್ಳಬಹುದು. ಮಕ್ಕಳು ಈ ನಿಯಮ ಪಾಲನೆ ಮಾಡುವ ಬಗ್ಗೆ ಪಾಲಕರು ಗಮನಿಸುತ್ತಿರಬೇಕು. ಮಕ್ಕಳಿಗೆ ಈ ವಿಷಯವನ್ನು ಹೇಳಿಕೊಡಬೇಕು.

ಆನ್​ಲೈನ್​ ಕ್ಲಾಸ್​ ಅನಿವಾರ್ಯ ಹೌದು. ಆದರೆ ಈ ಕ್ಲಾಸ್​ ಮುಗಿದ ಮೇಲೆ ಟಿವಿ ನೋಡುವುದು ಇಲ್ಲವೇ ಮೊಬೈಲ್​ ಗೇಮ್​ ಆಡುವುದರಿಂದ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ ಉಂಟಾಗುತ್ತಿದೆ. ಆದ್ದರಿಂದ ಸಾಧ್ಯವಾದಷ್ಟು ದಿನಕ್ಕೆ ಮುಕ್ಕಾಲು ಗಂಟೆಯಾದರೂ ಔಟ್​ಡೋರ್​ ಗೇಮ್​ ಆಡಲು ಮಕ್ಕಳಿಗೆ ಕಳುಹಿಸಬೇಕು. ಟಿ.ವಿ. ಮೊಬೈಲ್​ ಗೇಮ್​ಗಳಿಂದ ದೂರ ಇರಬೇಕು. ಇವುಗಳಿಂದ ದೂರ ಇರು ಎಂದಾಕ್ಷಣ ಮಕ್ಕಳೇನೂ ಮಾತು ಕೇಳುವುದಿಲ್ಲ. ಮೊದಲು ಪಾಲಕರು ಸರಿಯಾಗಬೇಕು. ತಾವು ಟಿ.ವಿ ಮುಂದೆ ಕುಳಿತೋ ಇಲ್ಲವೇ ಮೊಬೈಲ್​ ನೋಡುತ್ತಲೋ ಮಕ್ಕಳಿಗೆ ನೀವು ಮಾಡಬೇಡಿ ಎಂದರೆ ಅವರು ಮಾತು ಕೇಳುವುದಿಲ್ಲ. ಮೊದಲು ಪಾಲಕರು ಇವುಗಳಿಂದ ದೂರ ಇರಬೇಕು.

ಮಕ್ಕಳಿಗೆ ಕಣ್ಣಿನ ಸಮಸ್ಯೆ ಇದ್ದರೂ ಎಷ್ಟೋ ವೇಳೆ ಅದು ಗೊತ್ತಾಗುವುದಿಲ್ಲ. ಆದ್ದರಿಂದ ವರ್ಷಕ್ಕೆ ಒಮ್ಮೆಯಾದರೂ ಕಡ್ಡಾಯವಾಗಿ ಮಕ್ಕಳಿಗೆ ಕಣ್ಣಿನ ಪರೀಕ್ಷೆ ಮಾಡಿಸಬೇಕು. ಇಲ್ಲದಿದ್ದರೆ, ಒಂದು ಕಣ್ಣು ಸರಿಯಿದ್ದರೂ ಇನ್ನೊಂದು ಕಣ್ಣಿಗೆ ಸಮಸ್ಯೆಯಾಗುವ ಸಾಧ್ಯತೆ ಇರುತ್ತದೆ. ದೊಡ್ಡವರಾದ ಮೇಲೆ ಸಮಸ್ಯೆ ಉಲ್ಬಣ ಆಗಬಹುದು. ಆದ್ದರಿಂದ ಚಿಕ್ಕವರಿರುವಾಗಲೇ ಸಮಸ್ಯೆ ಪರಿಹರಿಸಿಕೊಳ್ಳಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net