

ಲಖನೌ: 11ನೇ ಕ್ಲಾಸಿನ ಬಾಲಕಿಯೊಬ್ಬಳು ನೀರಿನ ಟ್ಯಾಂಕ್ ಮೇಲೇರಿ ಕುಳಿತು ನಂತರ ಅದರಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಭಯಾನಕ ವಿಡಿಯೋ ಇದೀಗ ವೈರಲ್ ಆಗಿದೆ.
ಈಕೆಯ ಪ್ರೇಮಿ ಮಾಡಿದ ಕೃತ್ಯದಿಂದ ಇಂಥದ್ದೊಂದು ಸಾವು ಬಾಲಕಿ ಕಂಡಿರುವುದಾಗಿ ಆರೋಪಿಸಲಾಗಿದೆ. ಉತ್ತರ ಪ್ರದೇಶದ ಮುಜಫರನಗರದ ಮಂಡಿ ಕೋತ್ವಾಲಿ ಕ್ಷೇತ್ರದ ಗಾಂಧಿನಗರದ ನಿವಾಸಿಯಾಗಿರುವ ಬಾಲಕಿ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು.
ಈ ಸಮಯದಲ್ಲಿ ಅವರಿಬ್ಬರ ನಡುವೆ ನಡೆದಿರುವ ಕೆಲವೊಂದು ಘಟನೆಗಳನ್ನು ಯುವಕ ವಿಡಿಯೋದಲ್ಲಿ ಸೆರೆ ಹಿಡಿದಿದ್ದಾನೆ. ನಂತರ ಯಾವುದೋ ಕಾರಣಕ್ಕೆ ಇಬ್ಬರ ನಡುವೆ ಜಗಳವಾಗಿದೆ. ಈ ಸಂದರ್ಭದಲ್ಲಿ ತನ್ನಲ್ಲಿರುವ ದೃಶ್ಯಗಳನ್ನು ವೈರಲ್ ಮಾಡುವುದಾಗಿ ಯುವಕ ಹೇಳಿದ್ದಾನೆ.
ಇದರಿಂದ ನೊಂದ ಬಾಲಕಿ ನೀರಿನ ಟ್ಯಾಂಕ್ ಏರಿ ಕುಳಿತಿದ್ದಾಳೆ. ಕುಟುಂಬಸ್ಥರು ಮತ್ತು ಸ್ಥಳೀಯರು ಕೆಳಗೆ ಇಳಿಯುವಂತೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಲಿಲ್ಲ. ತಾನು ಸಾಯುವದಾಗಿ ಹೇಳುತ್ತಿದ್ದಳು. ಹಿಂದಿನಿಂದ ಓರ್ವ ಮೆಟ್ಟಿಲು ಏರಿ ಯುವತಿಯನ್ನ ರಕ್ಷಿಸಲು ಮುಂದಾಗಿದ್ದಾನೆ.
ಆದರೆ ಆತನನ್ನು ನೋಡುತ್ತಲೇ ಬಾಲಕಿ ಕೆಳಗೆ ಜಿಗಿದಿದ್ದಾಳೆ. ಕೂಡಲೇ ಪೋಷಕರು ಯುವತಿಯನ್ನ ಆಸ್ಪತೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಯುವಕನ ವಿರುದ್ಧ ದೂರು ದಾಖಲು ಮಾಡಿಕೊಳ್ಳಲಾಗಿದೆ. ಬಾಲಕಿ ಟ್ಯಾಂಕ್ ಏರಿ ಕುಳಿತಿರುವುದು, ಕೆಳಕ್ಕೆ ಹಾರಿರುವುದು ಎಲ್ಲವನ್ನೂ ಸ್ಥಳೀಯರು ವಿಡಿಯೋ ಮಾಡಿಕೊಂಡಿದ್ದಾರೆ. ಅದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ