

ನೊಯ್ಡಾ (ಉತ್ತರ ಪ್ರದೇಶ): ಪೊಲೀಸ್ ಸಹಾಯವಾಣಿಯಾಗಿರುವ 100 ಸಂಖ್ಯೆಗೆ ಕರೆ ಮಾಡಿರುವ ವ್ಯಕ್ತಿಯೊಬ್ಬ ಪ್ರಧಾನಿ ನರೇಂದ್ರ ಮೋದಿಯವರಿಗೆ ಹಾನಿ ಮಾಡುವುದಾಗಿ ಬೆದರಿಕೆ ಹಾಕಿರುವ ಘಟನೆ ಉತ್ತರ ಪ್ರದೇಶದ ನೊಯ್ಡಾದಲ್ಲಿ ನಡೆದಿದೆ.
ಕರೆ ಮಾಡಿರುವ ವ್ಯಕ್ತಿಯ ಹುಡುಕಾಟ ನಡೆಸಿದ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
100ಕ್ಕೆ ನಿನ್ನೆ ಸಂಜೆಯ ವೇಳೆ ಕರೆ ಮಾಡಿದ್ದ ವ್ಯಕ್ತಿ ಪ್ರಧಾನಿ ಮೋದಿಯವರಿಗೆ ಅಪಾಯ ಉಂಟುಮಾಡುವುದಾಗಿ ಏನೇನೋ ಹೇಳತೊಡಗಿದ್ದ. ತನ್ನ ಹೆಸರು, ವಿಳಾಸ ಆತ ಹೇಳಿರಲಿಲ್ಲ. ಇಷ್ಟು ಹೇಳಿ ಫೋನ್ ಕಟ್ ಮಾಡಿದ. ನಂತರ ಆತ ಫೋನ್ ಮಾಡಿದ ಸಂಖ್ಯೆಯ ಆಧಾರದ ಮೇಲೆ ಆರೋಪಿಯನ್ನು ಪತ್ತೆಹಚ್ಚಲಾಗಿದೆ ಎಂದು ನೊಯ್ಡಾ ಪೊಲೀಸರು ಹೇಳಿದ್ದಾರೆ.
ಬಂಧಿತನನ್ನು 33 ವರ್ಷದ ಹರ್ಭಜನ್ ಸಿಂಗ್ ಎಂದು ಗುರುತಿಸಲಾಗಿದೆ. ಹರಿಯಾಣದ ಮೂಲದ ಈತ ನೊಯ್ಡಾದಲ್ಲಿ ವಾಸವಾಗಿದ್ದಾನೆ.
ಈತನು ವಿಚಿತ್ರ ನಡವಳಿಕೆ ಹೊಂದಿದ್ದು, ಮೇಲ್ನೋಟಕ್ಕೆ ಮಾದಕ ವ್ಯಸನಿ ಎಂದು ತೋರುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ.
ಸದ್ಯ ಯುವಕನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈತನ ಮನಸ್ಥಿತಿಯ ಕುರಿತು ಪರೀಕ್ಷೆ ನಡೆಸಲು ಮೊದಲು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.