

ಮಾಸ್ಕೋ: ಜಗತ್ತಿನ ಪ್ರಪ್ರಥಮ ಕರೊನ ನಿಗ್ರಹ ಲಸಿಕೆಯನ್ನು ಸಂಶೋಧಿಸಿರುವುದಾಗಿ ಘೋಷಿಸಿರುವ ರಷ್ಯಾ, ಅದನ್ನು ಸ್ಪುಟ್ನಿಕ್-ವಿ ಎಂದು ನಾಮಕರಣ ಮಾಡಿದೆ.
ಕರೊನಾ ಲಸಿಕೆಯನ್ನು ನೋಂದಣಿ ಮಾಡಿದ ವಿಷಯವನ್ನು ಪ್ರಧಾನಿ ವ್ಲಾದಿಮಿರ್ ಪುಟಿನ್ ಪ್ರಕಟಿಸಿದರು. ಈ ವೇಳೆ ಇನ್ನೊಂದು ಮುಖ್ಯ ವಿಷಯವನ್ನು ಅವರು ತಿಳಿಸಿದ್ದರು. ತನ್ನ ಇಬ್ಬರು ಹೆಣ್ಣು ಮಕ್ಕಳಲ್ಲಿ ಒಬ್ಬರಿಗೆ ಈ ಲಸಿಕೆಯನ್ನು ನೀಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದರು.
ಈ ಲಸಿಕೆಯನ್ನು ಎರಡು ಹಂತದಲ್ಲಿ ನೀಡಲಾಗಿತ್ತು. ಇದಾದ ಬಳಿಕ ಪುಟಿನ್ ಮಗಳ ಆರೋಗ್ಯ ಹೇಗಿದೆ ಎಂಬ ಕುತೂಹಲ ಇಡೀ ಜಗತ್ತಿನದಾಗಿತ್ತು. ಅದರಂತೆ ಕೆಲ ಮಾಹಿತಿಗಳು ಲಭ್ಯವಾಗಿವೆ.
ಮೊದಲ ಬಾರಿಗೆ ಲಸಿಕೆ ನೀಡಿದಾಗ ಆಕೆಯ ದೇಹದ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ (100.4 ಫ್ಯಾರನ್ಹೀಟ್) ಆಗಿತ್ತು. ಮರುದಿನ ಇದು 37 ಡಿಗ್ರಿಗೆ ಇಳಿದಿತ್ತು. ಅಂದರೆ 98.6 ಫ್ಯಾರನ್ಹೀಟ್ ಆಗಿತ್ತು. ಎರಡನೇ ಹಂತದ ಲಸಿಕೆ ನೀಡಿದಾಗಲೂ ಉಷ್ಣಾಂಶ ಕೊಂಚ ಏರಿಕೆಯಾಗಿತ್ತು. ಬಳಿಕ ಸಾಮಾನ್ಯ ಸ್ಥಿತಿಗೆ ಬಂದಿದೆ.
ಲಸಿಕೆಯಿಂದ ಮಗಳಿಗೆ ಕೊಂಚ ಜ್ವರ ಬಂದಿದ್ದು ಬಿಟ್ಟರೆ, ಆರೋಗ್ಯ ಉತ್ತಮವಾಗಿದೆ ಜತೆಗೆ ದೇಹದಲ್ಲಿರುವ ಪ್ರತಿರೋಧ ಕಣಗಳ ಸಂಖ್ಯೆ ಹೆಚ್ಚಾಗಿದೆ ಎಂದು ಸ್ವತ: ಪುಟಿನ್ ಹೇಳಿದ್ದಾರೆ.
ಎರಡು ಹಂತದಲ್ಲಿ ಲಸಿಕೆ ನೀಡುವುದರಿಂದ ಪ್ರತಿರೋಧಕ ಶಕ್ತಿ ಹೆಚ್ಚು ಕಾಲ ಇರಲಿದೆ. ಅಂದಾಜು ಎರಡು ವರ್ಷಗಳ ಕಾಲ ಇದರ ಪ್ರಭಾವ ದೇಹದಲ್ಲಿ ಇರಲಿದೆ ಎಂದು ರಷ್ಯಾ ಆರೋಗ್ಯ ಇಲಾಖೆ ತಿಳಿಸಿದೆ.