ರಷ್ಯಾ ಉಪಗ್ರಹನಿರೋಧಕ ಶಸ್ತ್ರ ಪ್ರದರ್ಶಿಸಿತೇ? ಹಾಗೆಂದು ಅಮೆರಿಕ ಆರೋಪಿಸುತ್ತಿದೆ...

russia-us
Published on

ನವದೆಹಲಿ: ರಷ್ಯಾದವರು ಇತ್ತೀಚೆಗೆ ಉಪಗ್ರಹನಿರೋಧಕ ಶಸ್ತ್ರಾಸ್ತ್ರವನ್ನು ಯಶಸ್ವಿಯಾಗಿ ಪ್ರಯೋಗಿಸಿದೆ. ಇದು ನಿಜಕ್ಕೂ ತುಂಬಾ ಗಂಭೀರವಾದ ಮತ್ತು ಆತಂಕ ಮೂಡಿಸುವ ವಿಚಾರ ಎಂದು ಅಮೆರಿಕ ಹೇಳಿದೆ.

ಜುಲೈ 15ರಂದು ರಷ್ಯಾ ಬಾಹ್ಯಾಕಾಶದಲ್ಲಿ ನೆಲೆಗೊಳಿಸಿರುವ ಉಪಗ್ರಹನಿರೋಧ ಶಸ್ತ್ರಾಸ್ತ್ರವನ್ನು ಅಪಾಯಕಾರಿಯಲ್ಲದ ರೀತಿಯಲ್ಲಿ ಯಶಸ್ವಿಯಾಗಿ ಪ್ರಯೋಗಿಸಿದೆ. ಇದಕ್ಕೆ ಪೂರಕವಾದ ಸಾಕ್ಷ್ಯ ನಮ್ಮಲ್ಲಿದೆ ಎಂದು ಅಮೆರಿಕದ ಬಾಹ್ಯಾಕಾಶ ಕಮಾಂಡ್​ ತಿಳಿಸಿದೆ.

ಈ ಬಗ್ಗೆ ಟ್ವಿಟರ್​ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಅಮೆರಿಕ ಅಣ್ವಸ್ತ್ರ ನಿಶ್ಯಸ್ತ್ರೀಕರಣ ಸಂಧಾನಕಾರ ಮಾರ್ಷಲ್​ ಬಿಲ್ಲಿಂಗ್​ಸ್ಲೀ, ಇದು ಒಪ್ಪಲಾಗದ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೊಸ START ಒಪ್ಪಂದದ ಪ್ರಕಾರ ಶೀತಲ ಸಮರದ ಯುಗದ ಸೂಪರ್​ಪವರ್​ಗಳು ಎನಿಸಿದ ಅಮೆರಿಕ ಮತ್ತು ರಷ್ಯಾಗಳು ಹೊಂದಬಹುದಾದ ಆಣ್ವಸ್ತ್ರಗಳ ಪ್ರಮಾಣವನ್ನು ನಿರ್ಬಂಧಿಸಲು ಸಹಕಾರಿಯಾಗಿದೆ.

ಅಮೆರಿಕ ಬಾಹ್ಯಾಕಾಶ ಕಮಾಂಡ್​ನ ಪ್ರಕಾರ ರಷ್ಯಾವು ಕಾಸ್ಮೋಸ್​ 2543 ಎಂಬ ಉಪಗ್ರಹವನ್ನು ಬಳಸಿ ಬಾಹ್ಯಾಕಾಶ ಕಕ್ಷೆಗೆ ಉಪಗ್ರಹನಿರೋಧಕ ಶಸ್ತ್ರವನ್ನು ಬಿಡುಗಡೆ ಮಾಡಿತು. ಈ ಪರೀಕ್ಷೆ ಮಾಡುವ ಸಲುವಾಗಿ ರಷ್ಯಾ 2019ರ ನವೆಂಬರ್​ 25ರಂದು ಕಾಸ್ಮೋಸ್​-2542 ಎಂಬ ಉಪಗ್ರಹದ ಮೂಲಕ ಕಾಸ್ಮೋಸ್​-2543 ಉಪಗ್ರಹವನ್ನು ಉಡಾವಣೆ ಮಾಡಿತ್ತು ಎಂದು ಆರೋಪಿಸಿದೆ.

ಒಂದು ಕಾಯ ನಮ್ಮ ಉಪಗ್ರಹವನ್ನು ಹಾದು ಹೋಗಿತ್ತು. ಅದರಿಂದ ನಮ್ಮ ಉಪಗ್ರಹಕ್ಕೆ ಅಪಾಯವುಂಟಾಗುವ ಸಾಧ್ಯತೆ ಇತ್ತು. ಈ ಬಗ್ಗೆ ನಾವು ಆತಂಕ ವ್ಯಕ್ತಪಡಿಸಿದ್ದೆವು. ಇದೀಗ ರಷ್ಯಾ ಪ್ರಯೋಗಿಸಿರುವ ಶಸ್ತ್ರಾಸ್ತ್ರ ಕೂಡ ಆ ಕಾಯವನ್ನೇ ಹೋಲುತ್ತದೆ ಎಂದು ಅಮೆರಿಕ ಬಾಹ್ಯಾಕಾಶ ಕಮಾಂಡ್​ನ ಮುಖ್ಯಸ್ಥ ಜನರಲ್​ ಜೇ ರೇಮಂಡ್​ ಹೇಳಿದ್ದಾರೆ.

ರಷ್ಯಾ ಬಾಹ್ಯಾಕಾಶದಲ್ಲೂ ಶಸ್ತ್ರಾಸ್ತ್ರ ಪೈಪೋಟಿ ನಡೆಸಲು ಮುಂದಾಗುತ್ತಿದೆ. ತನ್ಮೂಲಕ ಅದು ಆಷಾಢಭೂತಿ ಮನೋಭಾವವನ್ನು ಅದು ತೋರುತ್ತಿದೆ. ತನ್ನ ಜನವಿರೋಧಿ ಬಾಹ್ಯಾಕಾಶ ಕಾರ್ಯಕ್ರಮಗಳನ್ನು ನಿಲ್ಲಿಸುವ ಬದಲು ರಷ್ಯಾ ಬಾಹ್ಯಾಕಾಶದಲ್ಲಿ ಅಮೆರಿಕದ ಸಾಮರ್ಥ್ಯವನ್ನು ನಿರ್ಬಂಧಿಸಲು ಪ್ರಯತ್ನಿಸುತ್ತಿದೆ ಎಂದು ಅಮೆರಿಕದ ಗೃಹ ಇಲಾಖೆಯ ಅಂತಾರಾಷ್ಟ್ರೀಯ ಭದ್ರತೆ ಮತ್ತು ಅಣ್ವಸ್ತ್ರ ಸೋರಿಕೆ ನೀತಿ ವಿಭಾಗದ ಸಹಾಯಕ ಕಾರ್ಯದರ್ಶಿ ಕ್ರಿಸ್ಟೋಫರ್​ ಫೋರ್ಡ್​ ಆರೋಪಿಸಿದ್ದಾರೆ.

ಆದರೆ ಈ ಆರೋಪವನ್ನು ತಳ್ಳಿಹಾಕಿರುವ ರಷ್ಯಾದ ಕ್ರೆಮ್ಲಿನ್​ ವಕ್ತಾರ ಡಿಮಿಟ್ರಿ ಪೆಸ್ಕೋವ್​, ರಷ್ಯಾವು ಬಾಹ್ಯಾಕಾಶವನ್ನು ಶಸ್ತ್ರಾಸ್ತ್ರ ಮುಕ್ತವಾಗಿರಿಸಲು ಬಯಸುತ್ತದೆ. ಬಾಹ್ಯಾಕಾಶದಲ್ಲಿ ಯಾವುದೇ ಬಗೆಯ ಶಸ್ತ್ರಾಸ್ತ್ರವನ್ನು ನೆಲಗೊಳಿಸಲು ಅದು ಮುಂದಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net