ಯುಕ್ರೇನ್​ನ ಡೊನೆಟ್ಸ್ಕ್ ಪ್ರದೇಶದ ಎರಡು ಹಳ್ಳಿಗಳನ್ನು ವಶಪಡಿಸಿಕೊಂಡ ರಷ್ಯಾ|Russia

PUTIN 24-08-2025
Published on

Russia: ಕಳೆದ 24 ಗಂಟೆಗಳಲ್ಲಿ ಯುಕ್ರೇನ್‌ನ ಡೊನೆಟ್ಸ್ಕ್ ಪ್ರದೇಶದ ಎರಡು ಹಳ್ಳಿಗಳನ್ನು ರಕ್ಷಣಾ ಪಡೆಗಳು ನಿಯಂತ್ರಣಕ್ಕೆ ತೆಗೆದುಕೊಂಡಿವೆ ಎಂದು ರಷ್ಯಾ ಘೋಷಿಸಿದೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ರಷ್ಯಾದ ರಕ್ಷಣಾ ಸಚಿವಾಲಯವು, ದಕ್ಷಿಣ ಮತ್ತು ಪಶ್ಚಿಮ ಮಿಲಿಟರಿ ಗುಂಪುಗಳು ನಡೆಸಿದ ಕಾರ್ಯಾಚರಣೆಗಳ ನಂತರ ಸೆರೆಡ್ನೆ ಮತ್ತು ಕ್ಲೆಬನ್ ಬೈಕ್ ಗ್ರಾಮಗಳು ರಷ್ಯಾದ ನಿಯಂತ್ರಣಕ್ಕೆ ಬಂದಿವೆ ಎಂದು ತಿಳಿಸಿದೆ.

ರಷ್ಯಾದ ರಕ್ಷಣಾ ಪಡೆಗಳು 143 ಸ್ಥಳಗಳಲ್ಲಿ ಯುಕ್ರೇನಿಯನ್ ಮಿಲಿಟರಿ ಹಾಗೂ ಕೈಗಾರಿಕಾ ಸೌಲಭ್ಯ ಮತ್ತು ಉಕ್ರೇನಿಯನ್ ಪಡೆಗಳು ಹಲವಾರು ತಾತ್ಕಾಲಿಕ ನೆಲೆಗಳನ್ನು ಗುರಿಯಾಗಿಸಿಕೊಂಡಿವೆ ಎಂದು ಸಚಿವಾಲಯ ವರದಿ ಮಾಡಿದೆ. ಅಲ್ಲದೆ, ರಷ್ಯಾದ ವಾಯು ರಕ್ಷಣಾ ವ್ಯವಸ್ಥೆಯು ಕಳೆದ ವಾರ ಯುಕ್ರೇನ್​ನ ನಾಲ್ಕು ಬಾಂಬ್‌ಗಳು ಮತ್ತು 160 ಡ್ರೋನ್‌ಗಳನ್ನು ಹೊಡೆದುರುಳಿಸಿದ ಎಂದು ವರದಿಯಾಗಿದೆ.

ಉಕ್ರೇನ್ ಮತ್ತು ರಷ್ಯಾ ನಡುವಿನ ಶಾಂತಿ ಮಾತುಕತೆಗಳು ಮತ್ತೆ ಆರಂಭವಾಗುತ್ತಿರುವ ಮಧ್ಯೆ ಈ ಬೆಳವಣಿಗೆಗಳು ನಡೆದಿವೆ. ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸುವ ಪ್ರಯತ್ನಗಳಲ್ಲಿ ಅಮೆರಿಕ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಪುಟಿನ್​ರನ್ನು ಭೇಟಿ ಮಾಡಲು ಇಚ್ಛಿಸಿದ ಝೆಲೆನ್ಸ್ಕಿ

ಯುಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಇತ್ತೀಚೆಗೆ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾರೊಂದಿಗೆ ಮಾತನಾಡಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದರು.

ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಾಫೋಸಾ ಅವರ ಕೋರಿಕೆಯ ಮೇರೆಗೆ ನಾನು ಅವರೊಂದಿಗೆ ಮಾತನಾಡಿದೆ ಎಂದು ಯುಕ್ರೇನ್​ ಅಧ್ಯಕ್ಷ ಝೆಲೆನ್ಸ್ಕಿ ಹೇಳಿದ್ದಾರೆ. ನಮ್ಮ ಪಾಲುದಾರರೊಂದಿಗಿನ ಜಂಟಿ ರಾಜತಾಂತ್ರಿಕ ಪ್ರಯತ್ನಗಳು ಮತ್ತು ಅಮೆರಿಕ ಅಧ್ಯಕ್ಷ ಟ್ರಂಪ್​​ರೊಂದಿಗಿನ ಉತ್ಪಾದಕ ಸಭೆಗಳ ಬಗ್ಗೆ ನಾನು ಮಾಹಿತಿ ನೀಡಿದ್ದೇನೆ ಎಂದು ತಿಳಿಸಿದರು.

ರಷ್ಯಾದ ಪುಟಿನ್​ರೊಂದಿಗಿನ ಯಾವುದೇ ರೀತಿಯ ಸಭೆಗೆ ನನ್ನ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದೇನೆ. ಅಲ್ಲದೆ, ರಷ್ಯಾ ಮತ್ತೊಮ್ಮೆ ಎಲ್ಲವನ್ನೂ ಮತ್ತಷ್ಟು ಎಳೆಯಲು ಪ್ರಯತ್ನಿಸುತ್ತಿರುವುದನ್ನು ನಾವು ನೋಡುತ್ತೇವೆ. ಜಾಗತಿಕ ದಕ್ಷಿಣವು ಸಂಬಂಧಿತ ಸಂಕೇತಗಳನ್ನು ಕಳುಹಿಸುವುದು ಮತ್ತು ರಷ್ಯಾವನ್ನು ಶಾಂತಿಯತ್ತ ತಳ್ಳುವುದು ಮುಖ್ಯವಾಗಿದೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.

ರಷ್ಯಾ ಮೇಲೆ ನಿರ್ಬಂಧ ಹೇರುವುದಾಗಿ ಟ್ರಂಪ್ ಬೆದರಿಕೆ

ರಷ್ಯಾವು ಎರಡು ವಾರಗಳಲ್ಲಿ ಶಾಂತಿಯತ್ತ ಯಾವುದೇ ಪ್ರಗತಿ ಸಾಧಿಸದಿದ್ದರೆ ರಷ್ಯಾದ ಮೇಲೆ ನಿರ್ಬಂಧಗಳನ್ನು ವಿಧಿಸುವುದಾಗಿ ಟ್ರಂಪ್​​ ಬೆದರಿಕೆ ಹಾಕಿದ್ದಾರೆ. ಅಲಾಸ್ಕಾದಲ್ಲಿ ಪುಟಿನ್ ಮತ್ತು ಟ್ರಂಪ್ ನಡುವಿನ ಸಭೆಯ ಕೇವಲ ಒಂದು ವಾರದ ನಂತರ ಈ ಹೇಳಿಕೆ ಬಂದಿದೆ.

ಝೆಲೆನ್ಸ್ಕಿ ಹೇಳಿಕೆಯನ್ನು ತಳ್ಳಿಹಾಕಿದ ಲಾವ್ರೊವ್

ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರು ಪುಟಿನ್ ಮತ್ತು ಝೆಲೆನ್ಸ್ಕಿ ನಡುವಿನ ಭೇಟಿಯನ್ನು ತಳ್ಳಿಹಾಕಿದರು. ಝೆಲೆನ್ಸ್ಕಿ ಎಲ್ಲದಕ್ಕೂ ಇಲ್ಲ ಎಂದು ಹೇಳುತ್ತಾರೆ ಮತ್ತು ಇಂತಹ ಸಭೆಗೆ ಪ್ರಸ್ತುತವಾಗಿ ಯಾವುದೇ ಕಾರ್ಯಸೂಚಿ ಇಲ್ಲ ಎಂದು ಸೆರ್ಗೆಯ್ ಲಾವ್ರೊವ್ ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net