ಜಪೋರಿಜಿಯಾ ಅಣುವಿದ್ಯುತ್​ ಕೇಂದ್ರದಲ್ಲಿ ಭಾರಿ ಪ್ರಮಾಣದಲ್ಲಿ ಬೆಂಕಿ! ಉಕ್ರೇನ್​ ಹೆದರಿಸಲು ರಷ್ಯಾ ಸ್ಫೋಟಿಸಿತೇ?

atomic
Published on

ಮಾಸ್ಕೋ: ಯುರೋಪ್‌ನ ಅತಿದೊಡ್ಡ ಹಾಗೂ ಉಕ್ರೇನ್‌ನ ಜಪೋರಿಜಿಯಾದಲ್ಲಿರುವ ಪರಮಾಣು ವಿದ್ಯುತ್ ಕೇಂದ್ರದಲ್ಲಿ ಭಾರಿ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಇದರೊಂದಿಗೆ ವಿಶ್ವದೆಲ್ಲೆಡೆ ಆತಂಕ ಮನೆ ಮಾಡಿದೆ.

ಪ್ರಸ್ತುತ ಈ ಅಣು ವಿದ್ಯುತ್​ ಸ್ಥಾವರ ರಷ್ಯಾದಿಂದ ನಿಯಂತ್ರಿಸಲ್ಪಡುತ್ತಿದ್ದು, ಮಾಸ್ಕೋ ಪಡೆಗಳೇ ಸ್ಥಾವರವನ್ನು ಸ್ಫೋಟಿಸಲು ಯತ್ನಿಸಿವೆ ಉಕ್ರೇನ್​ ಅಧ್ಯಕ್ಷ ಝೆಲೆನ್​ಸ್ಕಿ ಆರೋಪಿಸಿದ್ದಾರೆ.

ಉಕ್ರೇನ್​ ಅನ್ನು ಭಯಪಡಿಸಲು ರಷ್ಯಾ ಈ ಬ್ಲ್ಯಾಕ್ ಮೇಲ್ ಕೃತ್ಯ ಎಸಗಿದ್ದಾರೆ ಎಂಬುದು ಅವರ ಪ್ರಮುಖ ಆರೋಪ. ಆದರೆ, ಉಕ್ರೇನ್ ಪಡೆಗಳು ಹಾರಿಸಿದ ಫಿರಂಗಿ ಶೆಲ್‌ಗಳಿಂದ ಬೆಂಕಿ ಹೊತ್ತಿಕೊಂದಿದೆ ಎಂದು ರಷ್ಯಾ ಹೇಳುತ್ತಿದೆ.

ಅಂತರಾಷ್ಟ್ರೀಯ ಅಣುಶಕ್ತಿ ಏಜೆನ್ಸಿಯ ಸಿಬ್ಬಂದಿಯೂ ಪ್ರಸ್ತುತ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ಇದುವರೆಗೆ ಯಾವುದೇ ಪರಮಾಣು ಸೋರಿಕೆಯಾಗಿಲ್ಲ ಎನ್ನಲಾಗುತ್ತಿದೆ. ಬೆಂಕಿ ಹರಡಿದ ಸ್ಥಳಕ್ಕೆ ತಮ್ಮನ್ನು ತೆರಳಲು ಅನುಮತಿಸಬೇಕು ಎಂದು ಸಿಬ್ಬಂದಿ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಮತ್ತೊಂದೆಡೆ ಅಣುಸ್ಥಾವರದ ಕೂಲಿಂಗ್ ಟವರ್‌ನಲ್ಲಿ ಭಾನುವಾರ ಭಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವಿಷಯವನ್ನು ಅಲ್ಲಿ ಕೆಲಸ ಮಾಡುತ್ತಿರುವ ರಷ್ಯಾದ ನಿಯೋಜಿತ ಗವರ್ನರ್ ಯುವ್ನಿ ಬಾಲಿಟೆಸ್ಕಿ ಹೇಳಿದ್ದಾರೆ. ಸೋಮವಾರದ ವೇಳೆಗೆ ನಮ್ಮ ಪಡೆಗಳು ಅದನ್ನು ಸಂಪೂರ್ಣವಾಗಿ ನಂದಿಸಿವೆ ಎಂದು ಅವರು ಹೇಳಿದ್ದಾರೆ.

2022 ರಲ್ಲಿ ರಷ್ಯಾದ ಪಡೆಗಳು ಈ ಪರಮಾಣು ಕೇಂದ್ರವನ್ನು ವಶಪಡಿಸಿಕೊಂಡವು. ಇದರಿಂದಾಗಿ ಎರಡು ವರ್ಷಗಳಿಂದ ಇಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ. ಈ ವರ್ಷದ ಏಪ್ರಿಲ್‌ನಿಂದ ಎಲ್ಲಾ ರಿಯಾಕ್ಟರ್‌ಗಳನ್ನು ಸ್ಥಗಿತಗೊಳಿಸಲಾಗಿದೆ. ಸ್ಥಾವರದ ಕೂಲಿಂಗ್ ಟವರ್ ಮೇಲೆ ಡ್ರೋನ್ ದಾಳಿ ನಡೆದಿರುವುದಾಗಿ ಇಂಟರ್ನ್ಯಾಷನಲ್ ಅಟಾಮಿಕ್ ಎನರ್ಜಿ ಏಜೆನ್ಸಿ ತಜ್ಞರು ಸಾಮಾಜಿಕ ಮಾಧ್ಯಮ ಎಕ್ಸ್​ ನಲ್ಲಿ ಬಹಿರಂಗಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net