ಗ್ರಾಪಂ ಅಧ್ಯಕ್ಷೆ ಮಂಜುಳಾ ಭೀಮೇಶ್ ವಿಷಾಧ
ಹೆಚ್ಚುತ್ತಿದೆ ಮೊಬೈಲ್ ವ್ಯಾಮೋಹ
ಗೌರಿಬಿದನೂರು: ಗ್ರಾಮೀಣ ಪ್ರತಿಭೆಯನ್ನು ಪ್ರೋತ್ಸಾಹಿಸಲು ಗ್ರಾಮೀಣ ಕ್ರೀಡಾಕೂಟ ಸಹಕಾರಿಯಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಭೀಮೇಶ್ ಅಭಿಪ್ರಾಯಪಟ್ಟರು.
ತಾಲೂಕಿನ ಇಡಗೂರು ಸರ್ಕಾರಿ ಪ್ರಾಥಮಿಕ ಹಿರಿಯ ಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಗೌತಮ ಬುದ್ಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ 2024-25 ಸಾಲಿನ ಗ್ರಾಮೀಣ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಗ್ರಾಮಗಳಲ್ಲಿ ಸಾಮರಸ್ಯ, ಕ್ರೀಡಾಪಟುಗಳಲ್ಲಿ ನಾಯಕತ್ವ ಗುಣ, ಮಾನಸಿಕ ಮತ್ತು ದೈಹಿಕ ಬುದ್ಧಿಶಕ್ತಿ ಹೆಚ್ಚಿಸಲು ಇಂತಹ ಕ್ರೀಡಾಕೂಟಗಳು ಸಹಕಾರಿಯಾಗಿವೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಮೊಬೈಲ್ ವ್ಯಾಮೋಹ ಹೆಚ್ಚುತ್ತಿರುವುದರಿಂದ ಗ್ರಾಮೀಣ ಕ್ರೀಡೆಗಳಲ್ಲಿ ಆಸಕ್ತಿ ಕಡಿಮೆಯಾಗಿದೆ. ಆಧುನಿಕ ತಂತ್ರಜ್ಞಾನದ ಪ್ರಭಾವದಲ್ಲಿ ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಗ್ರಾಪಂ ಸದಸ್ಯ ಜಿ.ಸೋಮಯ್ಯ ಮಾತನಾಡಿ, ಗ್ರಾಮೀಣ ಕ್ರೀಡೆಗಳು ಶ್ರಮ ಸಂಸ್ಕೃತಿಯ ಪ್ರತೀಕ. ಬಾಲ್ಯದ ಜೀವನದ ಅವಿಭಾಜ್ಯ ಅಂಗವಾಗಿದ್ದ ಲಗೋರಿ, ಚಿನ್ನಿದಾಂಡು, ಮರಕೋತಿ, ಕಪ್ಪೆ ಓಟ, ಕುಂಟೆಬಿಲ್ಲೆ, ಹಗ್ಗಜಗ್ಗಾಟ, ಕಣ್ಣಾಮುಚ್ಚಾಲೆಯಂತಹ ದೇಶಿಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಆಟಗಳನ್ನು ಮತ್ತೆ ಆಯೋಜಿಸುತ್ತಿರುವುದು ಸಂತಸದ ವಿಷಯ ಎಂದರು.
ಕ್ರೀಡಾ ಇಲಾಖೆಯ ಶ್ರೀಧರ್ ಮಾತನಾಡಿ, ಇಲಾಖೆಯಿಂದ ಗ್ರಾಮೀಣ ಯುವಜನರಲ್ಲಿ ಸೃಜನಾತ್ಮಕತೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ಪ್ರಸನ್ನ ಕುಮಾರ್ ಮಾತನಾಡಿ, ಪ್ರತಿಯೊಬ್ಬರೂ ತಲೆಮಾರುಗಳ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು ಎಂದರು.
ಗ್ರಾಪಂ ಉಪಾಧ್ಯಕ್ಷೆ ನಾಗಮಣಿ ನಾಗರಾಜ್, ಸದಸ್ಯರಾದ ಪದ್ಮಾವತಿ ನಂಜುಂಡಪ್ಪ, ಮುದ್ದು ಗಂಗಮ್ಮ, ಶಾಹಿದಾದಿ ಉಮಾಶಂಕರ್, ಕೃಷ್ಣಪ್ಪ, ಗೋಪಾಲ್, ನರಸಿಂಹಮೂರ್ತಿ, ಶ್ರೀನಿವಾಸ್, ಪ್ರಕಾಶ್, ಮೃತುಂಜಯ, ಚಿರಂಜೀವಿ ಹಾಗೂ ಗೌತಮ ಬುದ್ಧ ಸಂಸ್ಥೆ ಅಧ್ಯಕ್ಷ ವೈಟಿ ಪ್ರಸನ್ನ ಕುಮಾರ್ ಇದ್ದರು.
ಪರಂಪರೆ ಮರೆಯದಿರಿ
ರಂಗಕರ್ಮಿ ಎಲ್.ನಾಗರಾಜ್ ಮಾತನಾಡಿ, ಎಂದಿಗೂ ನಮ್ಮ ಪರಂಪರೆ ಮರೆಯಬಾರದು. ಬಾಲ್ಯದಲ್ಲಿ ಆಡುತ್ತಿದ್ದ ಹಲವು ಆಟಗಳು ದೇಹಕ್ಕೆ ವ್ಯಾಯಾಮ, ಮನಸ್ಸಿಗೆ ಉಲ್ಲಾಸ ನೀಡುತ್ತಿದ್ದವು. ಪ್ರಸ್ತುತ ಸಂಸ್ಕೃತಿಗೆ ಪೆಟ್ಟು ಬೀಳುತ್ತಿರುವುದು ವಿಷಾದನೀಯ ಎಂದರು.
ಯಾವ್ಯಾವ ಕ್ರೀಡೆಗಳು?
ಕಾರ್ಯಕ್ರಮದಲ್ಲಿ ಕೆರೆ-ದಂಡೆ, ಹಗ್ಗಜಗ್ಗಾಟ, ಖೋಖೋ, ಕಬ್ಬಡಿ, ಗೋಣಿಚೀಲ ಓಟ, ಮೂರು ಕಾಲಿನ ಓಟ ಮುಂತಾದ ಕ್ರೀಡೆಗಳಲ್ಲಿ 800ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿ ಬಹುಮಾನ ಪಡೆದರು.