ಕಾರವಾರ: ಭ್ರಷ್ಟಾಚಾರಿಗಳಿಂದಲೇ ತುಂಬಿರುವ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಎನ್‌ಡಿಎ ಮೈತ್ರಿ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಜಂಟಿಯಾಗಿ ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆಯ ಚನ್ನಪಟ್ಟಣದ ವೇದಿಕೆ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್.ನಾಯ್ಕ ಪಾಲ್ಗೊಂಡರು.
ಪಕ್ಷದ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ, ರಾಜ್ಯ ಅಧ್ಯಕ್ಷ ಬಿ ವೈ ವಿಜಯೇಂದ್ರ, ಕೇಂದ್ರ ಸಚಿವರಾದ ಎಚ್. ಡಿ. ಕುಮಾರಸ್ವಾಮಿ, ಆರ್. ಅಶೋಕ, ಚಲವಾದಿ ನಾರಾಯಣಸ್ವಾಮಿ, ಪ್ರಮೋದ ಮಧ್ವರಾಜ್, ಎಂ. ಮಹೇಶ, ಡಾ. ಅಶ್ವತ್ಥ ನಾರಾಯಣ ಮತ್ತಿತರ ನಾಯಕರೊಂದಿಗೆ ರೂಪಾಲಿ ಎಸ್.ನಾಯ್ಕ ಭಾಗವಹಿಸಿದ್ದರು.
ಮೂರನೇ ದಿನದ ಪಾದಯಾತ್ರೆ:
ಸರ್ಕಾರದ ಸೌಲಭ್ಯ ಜನರಿಗೆ ತಲುಪಿಸದೆ ಕಾಂಗ್ರೆಸ್ ನಾಯಕರೇ ಲೂಟಿಗೆ ಇಳಿದಿದ್ದಾರೆ. ಅಭಿವೃದ್ಧಿಗೆ ಕವಡೆಕಾಸು ಹಣವನ್ನೂ ನೀಡದೆ ರಾಜ್ಯದ ಜನತೆಗೆ ಸರ್ಕಾರ ಮೋಸ ಮಾಡುತ್ತಿದೆ ಎಂದು ಆಪಾದಿಸಿದರು.
ಬಿಜೆಪಿಯವರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಕಾಂಗ್ರೆಸ್‌ನವರು ಪರದಾಡುತ್ತಿದ್ದಾರೆ. ಹಗರಣ ನಡೆದಿರುವ ಬಗ್ಗೆ ಒಪ್ಪಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವ ನೈತಿಕತೆಯಿಂದ ಆಡಳಿತ ನಡೆಸುತ್ತಿದ್ದಾರೆ. ಕೂಡಲೇ ಅವರು ರಾಜೀನಾಮೆ ನೀಡಬೇಕು ಎಂದು ಕಿಡಿಕಾರಿದರು.
ಪಾದಯಾತ್ರೆಯ ಉದ್ದಕ್ಕೂ ಬಿಜೆಪಿ ಹಾಗೂ ಜೆಡಿಎಸ್ ಬಾವುಟ, ಫ್ಲೆಕ್ಸ್ ಗಳು ರಾರಾಜಿಸಿದವು. ಅಲ್ಲಲ್ಲಿ ಕುಡಿಯುವ ನೀರು, ಲಘು ಆಹಾರ ವ್ಯವಸ್ಥೆ ಕಾರ್ಯಕರ್ತರಿಗಾಗಿ ಮಾಡಿರುವುದು ಕಂಡು ಬಂದಿತು.
ಮೂರನೇ ದಿನ ಪಾದಯಾತ್ರೆಯಲ್ಲಿ ಪಾಲ್ಗೊಂಡು ಸುಮಾರು 20 ಕಿ.ಮೀ.ದೂರ ಹೆಜ್ಜೆ ಹಾಕಿ ಕಾಂಗ್ರೆಸ್ ವಿರುದ್ಧ ನಿರಂತರವಾಗಿ ಘೋಷಣೆಗಳನ್ನು ಕೂಗಿದ ಕಾರವಾರ ಅಂಕೋಲಾ ಸೇರಿದಂತೆ ಉತ್ತರಕನ್ನಡ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ರಾಗಿ ಮುದ್ದೆ ಊಟವನ್ನು ಸವಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಎನ್. ಎಸ್. ಹೆಗಡೆ, ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ, ಅಂಕೋಲಾ ಮಂಡಲದ ಗೋಪಾಲಕೃಷ್ಣ ವೈದ್ಯ, ಚೆಂಡಿಯಾ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಪೂಜಾ ನಾಯ್ಕ, ನಗರಸಭೆ ಸದಸ್ಯರಾದ ಹನುಮಂತ ತಳವಾರ, ಶ್ರಿಧರ ನಾಯ್ಕ, ರಾಘು ಭಟ್ಟ, ಪರ್ಬತ ನಾಯ್ಕ ಸೇರಿದಂತೆ ನೂರಾರು ಕಾರ್ಯಕರ್ತರು ಉತ್ಸಾಹದಿಂದ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.