

ಗೋಕರ್ಣ: ಹಾಲಕ್ಕಿ ಹುಳಸೇಕೇರಿ ಒಕ್ಕಲಿಗರಿಂದ ಪ್ರತಿವರ್ಷದಂತೆ ಭಾನುವಾರ ಆಷಾಢ ಅಮಾವಾಸ್ಯೆ ನಿಮಿತ್ತ ಸಂಜೆಯ ಗೋಧೂಳಿ ಸಮಯದಲ್ಲಿ ವಿಶೇಷ ಮದುವೆಯೊಂದು ನಡೆಯಿತು.
ಉತ್ತಮ ಮಳೆ ಮತ್ತು ಬೆಳೆಗಾಗಿ ಮಳೆದೇವರು ದೇವೇಂದ್ರನ ಪ್ರೀತ್ಯರ್ಥ ಮಂತ್ರ-ತಂತ್ರಗಳಿಲ್ಲದೆ ಜಾನಪದೀಯವಾಗಿ ನಡೆಯುವ ಈ ವಿವಾಹಕ್ಕೆ ‘ದಾದಮ್ಮನ (ದೇವೇಂದ್ರ) ಮದ್ವೆ’ ಎಂದು ಕರೆಯಲಾಗುತ್ತದೆ. ಈ ವಿವಾಹದಲ್ಲಿ ಹೆಣ್ಣು ವರ ಮತ್ತು ವಧು ಸ್ಥಾನ ನಿಭಾಯಿಸುವುದು ವಿಶೇಷ.
ಪುರಾತನ ಶ್ರೀ ಕೇತಕಿವಿನಾಯಕ ಸನ್ನಿಧಿಯಲ್ಲಿ ನಡೆಯುವ ಮದುವೆಯಲ್ಲಿ ಜಾನಪದ ಹಾಡೇ ಮಂತ್ರಗಳು. ಮದುವೆಯ ನಂತರ ಹಿರಿಯ ಮುತ್ತೈದೆಯರಿಂದ ದೇವೇಂದ್ರನ ಕುರಿತಾಗಿ ಶ್ರೀದೇವರಲ್ಲಿ ಪ್ರಾರ್ಥಿಸಲಾಗುತ್ತದೆ. ನಂತರ ಮೆರವಣಿಗೆಯಲ್ಲಿ ಮದುವೆ ದಿಬ್ಬಣ ಹೊರಟು ಹುಳಸೇಕೇರಿ ಪ್ರಧಾನ ಗೌಡರ ಮನೆಗೆ ತೆರಳಿ, ಅಲ್ಲಿ ಮದುವೆಯ ಉಡುಗೊರೆ, ಓಕಳಿ ಮತ್ತಿತರರ ವೈವಾಹಿಕ ಪದ್ಧತಿ ಆಚರಿಸಲಾಗುತ್ತದೆ. ತರುವಾಯ ಎರಡು ಕಪ್ಪೆಗಳನ್ನು ವಧು-ವರರನ್ನಾಗಿಸಿ ಮದುವೆ ಶಾಸ್ತ್ರ ಮಾಡಲಾಗುತ್ತದೆ. ವಿಶೇಷವಾಗಿ ಮಹಿಳೆಯರು ಮಾತ್ರ ವಿವಾಹದ ಎಲ್ಲ ಪ್ರಮುಖ ಕರ್ತವ್ಯ ನಿರ್ವಹಿಸುತ್ತಾರೆ.
ನೈಜ ಮದುವೆಯ ರೀತಿಯಲ್ಲಿಯೇ ಈ ಮದುವೆಗಾಗಿ ಅದ್ದೂರಿಯ ಮಂಗಳವಾದ್ಯ ಮತ್ತು ವೈಭವದ ಮೆರವಣಿಗೆ ಸಂಘಟಿಸಲಾಗುತ್ತದೆ. ಮಹಿಳೆಯೊಂದಿಗಿನ ಮಹಿಳಾ ವಿವಾಹ ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಜನ ಸೇರುವುದು ಇಂದಿಗೂ ಈ ಲಗ್ನ ಹೊಂದಿರುವ ಆಕರ್ಷಣೆಗೆ ಸಾಕ್ಷಿಯಾಗಿದೆ. ಈ ವರ್ಷ ದೇವಕಿ ಗೌಡ ವರನಾಗಿ ಮತ್ತು ಲಕ್ಷ್ಮೀ ಗೌಡ ವಧುವಾಗಿ ಮದುವೆ ನಡೆಸಿಕೊಟ್ಟರು.