75 ವರ್ಷದ ಬಳಿಕ ನಿವೃತ್ತಿ ತಗೊಳ್ಳಿ ಅಂದ್ರು ಮೋಹನ್​ ಭಾಗವತ್​: ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್​! Mohan Bhagwat

Mohan Bhagwat
Published on

Mohan Bhagwat : 75 ವರ್ಷ ದಾಟಿದ ನಂತರ ರಾಜಕೀಯ ನಾಯಕರು ನಿವೃತ್ತಿ ತೆಗೆದುಕೊಳ್ಳಬೇಕೆಂದು ರಾಷ್ಟ್ರೀಯ ಸ್ವಯಂ ಸೇವಕ (ಆರ್​ಎಸ್​ಎಸ್​) ಸಂಘದ ಮುಖ್ಯಸ್ಥ ಮೋಹನ್​ ಭಾಗವತ್​ ಹೇಳಿಕೆಯನ್ನು ಕಾಂಗ್ರೆಸ್​ ಲೇವಡಿ ಮಾಡಿದೆ.

ಈ ಕುರಿತು ಟ್ವೀಟ್​ ಮಾಡಿರುವ ಕಾಂಗ್ರೆಸ್​ ನಾಯಕ ಜೈರಾಮ್​ ರಮೇಶ್​, ಭಾಗವತ್​ ಹೇಳಿಕೆಯನ್ನು ಮುಂದಿಟ್ಟುಕೊಂಡು ಪ್ರಧಾನಿ ಮೋದಿ ಅವರನ್ನು ಟೀಕಿಸಿದ್ದಾರೆ.

ಪ್ರಶಸ್ತಿಗಳನ್ನು ಅರಸುವ ಬಡ ಪ್ರಧಾನಿ! ವಾವ್​ ಎಂಥಾ ಮರಳುವಿಕೆ. ವಿದೇಶಿ ಪ್ರವಾಸದಿಂದ ಮೋದಿ ಹಿಂದಿರುಗಿದಾಗ, ಸರಸಂಘಚಾಲಕ ಭಾಗವತ್​ ಅವರು 2025, ಸೆಪ್ಟೆಂಬರ್ 17ರಂದು ಮೋದಿಗೆ 75 ವರ್ಷ ತುಂಬುತ್ತದೆ ಎಂದು ನೆನಪಿಸಿದ್ದಾರೆ. ಆದರೆ, ಪ್ರಧಾನ ಮಂತ್ರಿಗಳು ಮೋಹನ್​ ಭಾಗವತ್​ಗೂ ಇದನ್ನು ಹೇಳಬಹುದು. ಏಕೆಂದರೆ, ಅವರಿಗೂ 2025, ಸೆಪ್ಟೆಂಬರ್ 11ರಂದು 75 ವರ್ಷ ತುಂಬುತ್ತದೆ! ಒಂದು ಬಾಣ, ಎರಡು ಗುರಿಗಳು! ಎಂದು ಜೈರಾಮ್​ ರಮೇಶ್​ ಹೇಳಿದ್ದಾರೆ.

ಭಾಗವತ್ ಅವರ ಹೇಳಿಕೆಯನ್ನು ಅನುಸರಿಸಿ ಜೈರಾಮ್​ ರಮೇಶ್ ನೀಡಿದ ಹೇಳಿಕೆಯನ್ನು ಅವರ ಸಹೋದ್ಯೋಗಿ ಪವನ್ ಖೇರಾ ಕೂಡ ಪುನರುಚ್ಛರಿಸಿದ್ದಾರೆ. ಈಗ ನೀವಿಬ್ಬರೂ ಬ್ಯಾಗ್ ಎತ್ತಿಕೊಂಡು ಒಬ್ಬರಿಗೊಬ್ಬರು ಮಾರ್ಗದರ್ಶನ ಮಾಡಿಕೊಳ್ಳಿ ಎಂದು ಮೋದಿ ಹಾಗೂ ಭಾಗವತ್​ರನ್ನು ಟೀಕಿಸಿ, ಟ್ವೀಟ್​ ಮಾಡಿದ್ದಾರೆ.

ಅಂದಹಾಗೆ, ಬುಧವಾರ (ಜುಲೈ 09) ನಾಗ್ಪುರದಲ್ಲಿ ದಿವಂಗತ ಆರ್‌ಎಸ್‌ಎಸ್ ಸಿದ್ಧಾಂತವಾದಿ ಮೊರೊಪಂತ್ ಪಿಂಗ್ಲೆ ಅವರಿಗೆ ಸಮರ್ಪಿತವಾದ "ಮೊರೊಪಂತ್ ಪಿಂಗ್ಲೆ: ದಿ ಆರ್ಕಿಟೆಕ್ಟ್ ಆಫ್ ಹಿಂದೂ ರಿಸರ್ಜೆನ್ಸ್" ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮೋಹನ್ ಭಾಗವತ್ ಈ ಹೇಳಿಕೆ ನೀಡಿದರು. 75 ವರ್ಷದ ಶಾಲನ್ನು ಒಬ್ಬ ವ್ಯಕ್ತಿಯ ಮೇಲೆ ಹೊದಿಸಿದರೆ, ಅದರರ್ಥ ಅವರು ಒಂದು ನಿರ್ದಿಷ್ಟ ವಯಸ್ಸನ್ನು ತಲುಪಿದ್ದಾರೆ ಮತ್ತು ಅವರು ಪಕ್ಕಕ್ಕೆ ಸರಿದು ಇತರರಿಗೆ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಪಿಂಗ್ಲೆ ಅವರು ಈ ಹಿಂದೆ ಹೇಳಿದ್ದನ್ನು ಆರ್‌ಎಸ್‌ಎಸ್ ಮುಖ್ಯಸ್ಥರು ಉಲ್ಲೇಖಿಸಿದರು. ಇದೇ ಹೇಳಿಕೆಯನ್ನು ಉಲ್ಲೇಖಿಸಿ ಜೈರಾಮ್​ ರಮೇಶ್​ ಪ್ರಧಾನಿ ಮೋದಿಯನ್ನು ಟೀಕಿಸಿದರು.

ಸದ್ಯ ಮೋಹನ್​ ಭಾಗವತ್​ ಅವರ ಹೇಳಿಕೆ ದೇಶ್ಯಾದ್ಯಂತ ನಾನಾ ತರಹದ ಚರ್ಚೆಗಳನ್ನು ಹುಟ್ಟುಹಾಕಿದೆ. ಈ ಕುರಿತಾಗಿ ಕಾಂಗ್ರೆಸ್ ಪಕ್ಷ ವ್ಯಂಗ್ಯವಾಡಿದ್ದು. ಪ್ರಧಾನಿ ಮೋದಿ ಮತ್ತು ಭಾಗವತ್ ಇಬ್ಬರೂ ಸೆಪ್ಟೆಂಬರ್‌ನಲ್ಲಿ 75 ವರ್ಷಗಳನ್ನು ಪೂರೈಸಲಿದ್ದಾರೆ, ಅವರ ಜನ್ಮದಿನಗಳ ಅಂತರ ಆರು ದಿನಗಳು ಎಂದು ಕುಹಕವಾಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net