ನಿಮಗೆ ಉಗುರು ಕಚ್ಚುವ ಅಭ್ಯಾಸವಿದೆಯೇ? ಈ ಹುಡುಗಿ ಕತೆ ಕೇಳಿದ್ರೆ ತಕ್ಷಣ ನೀವದನ್ನು ನಿಲ್ಲಿಸ್ತೀರಿ... Biting Your Nails

Biting Your Nails
Published on

Biting Your Nails : ನಿಮಗೆ ಉಗುರು ಕಚ್ಚುವ ಅಭ್ಯಾಸವಿದೆಯೇ? ಹೌದು ಎಂದಾದರೆ ತಕ್ಷಣ ನಿಲ್ಲಿಸಿ. ಇಲ್ಲದಿದ್ದರೆ, ನಿಮಗೆ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಹೌದು, ನಾವು ಹೇಳುತ್ತಿರುವುದು ನಿಜವೇ ಹೊರತು ಸುಳ್ಳಲ್ಲ. ಇದೇ ಉಗುರು ಕಚ್ಚುವ ಅಭ್ಯಾಸದಿಂದ ಯುವತಿಯೊಬ್ಬಳಿಗೆ ಕ್ಯಾನ್ಸರ್ ಬಂದ ಉದಾಹರಣೆ ಇದೆ. ಇದರಿಂದಾಗಿ, ಆಕೆ ತನ್ನ ಹೆಬ್ಬೆರಳನ್ನೇ ಕಳೆದುಕೊಂಡಿದ್ದಾಳೆ. ಅಸಲಿಗೆ ಏನಾಯಿತು ಎಂದು ನಾವೀಗ ತಿಳಿದುಕೊಳ್ಳೋಣ.

ಈ ಘಟನೆ ನಡೆದಿದ್ದು 2018ರಲ್ಲಿ. ಆದರೆ, ಶುರುವಾಗಿದ್ದು ಮಾತ್ರ 2014ರಲ್ಲಿ. ಇಂಗ್ಲೆಂಡ್‌ನ ಕೌಂಟಿ ಡರ್ಹ್ಯಾಮ್‌ನ ನ್ಯೂಟನ್ ಐಕ್ಲಿಫ್‌ ಪಟ್ಟಣದ ಯುವತಿ ಕೋರ್ಟ್ನಿ ವಿಥಾರ್ನ್ ಎಂಬಾಕೆ ಒಂಬತ್ತು ವರ್ಷಗಳ ಹಿಂದೆ ತನ್ನ ಕುಟುಂಬದೊಂದಿಗೆ ಆಸ್ಟ್ರೇಲಿಯಾಕ್ಕೆ ವಲಸೆ ಬಂದಳು. ಕೋರ್ಟ್ನಿಗೆ ಉಗುರು ಕಚ್ಚುವ ಅಭ್ಯಾಸವಿದೆ. ಶಾಲಾ ವಯಸ್ಸಿನಿಂದಲೂ ಈ ಅಭ್ಯಾಸ ಅವಳಿಗೆ ಅಂಟಿಕೊಂಡಿದೆ.

2014ರಲ್ಲಿ ಒಂದು ದಿನ ಕೋರ್ಟ್ನಿ ತುಂಬಾ ಕೋಪಗೊಂಡಳು. ಏಕೆಂದರೆ, ಶಾಲೆಯಲ್ಲಿ ಆಕೆಯ ಸಹಪಾಠಿಗಳು ಅವಳನ್ನು ರೇಗಿಸಿದರು. ಇದರಿಂದ ಆಕ್ರೊಶಗೊಂಡ ಕೋರ್ಟ್ನಿ ತನ್ನ ಬಲಗೈ ಹೆಬ್ಬೆರಳಿನ ಉಗುರನ್ನು ಸಂಪೂರ್ಣವಾಗಿ ಕಚ್ಚಿದಳು. ಇದರಿಂದ ಆ ಜಾಗದಲ್ಲಿ ಸ್ವಲ್ಪ ಗಾಯವಾಯಿತು. ಸ್ವಲ್ಪ ಸಮಯದ ನಂತರ ಆ ಗಾಯ ವಾಸಿಯಾಯಿತು ಮತ್ತು ಉಗುರು ಮತ್ತೆ ಬೆಳೆಯಿತು.

ಉಗುರು ಬೆಳೆಯಿತೇನೋ ಸರಿ ಆದರೆ, ಆ ಉಗುರು ನಿರೀಕ್ಷಿಸದಂತೆ ಕಪ್ಪಾಯಿತು. ಇದರಿಂದ ಭಯಭೀತಳಾದ ಆಕೆ ಚಿಕಿತ್ಸೆಗಾಗಿ ವೈದ್ಯರ ಬಳಿಗೆ ಹೋದಳು. ಈ ವೇಳೆ ಆ ಕಪ್ಪು ಉಗುರನ್ನು ಪರೀಕ್ಷಿಸಲಾಯಿತು. ಇದರಿಂದಾಗಿ ಅವಳಿಗೆ ಅಪರೂಪದ ಕ್ಯಾನ್ಸರ್ ಇದೆ ಎಂದು ತಿಳಿದುಬಂದಿತು. ಆರಂಭದಲ್ಲಿ ಈ ಬಗ್ಗೆ ಆಕೆ ತನ್ನ ಕುಟುಂಬವರಿಗೆ ತಿಳಿಸಿರಲಿಲ್ಲ.

ಪರೀಕ್ಷೆಗಳನ್ನು ನಡೆಸಿದ ವೈದ್ಯರು ಕೋರ್ಟ್ನಿಗೆ ಅಕ್ರಲ್ ಲೆಂಟಿಜಿನಸ್ ಸಬಂಗುವಲ್ ಮೆಲನೋಮ ಎಂಬ ಅಪರೂಪದ ಚರ್ಮದ ಕ್ಯಾನ್ಸರ್ ಇದೆ ಎಂದು ನಿರ್ಧರಿಸಿದರು. ಕೋರ್ಟ್ನಿ ತನ್ನ ಉಗುರುಗಳನ್ನು ಕಚ್ಚುವುದರಿಂದ ಕ್ಯಾನ್ಸರ್ ಉಂಟಾಗಿದೆ ಎಂದು ವೈದ್ಯರು ನಿರ್ಧರಿಸಿದರು. ಇದನ್ನು ಕೇಳಿ ಆಕೆಗೆ ಆಘಾತ ಉಂಟಾಯಿತು. ತಕ್ಷಣ ವೈದ್ಯರು ಆಕೆಯ ಉಗುರನ್ನು ಸಂಪೂರ್ಣವಾಗಿ ತೆಗೆದುಹಾಕಿದರು. ಹೆಚ್ಚಿನ ಪರೀಕ್ಷೆಗಳ ನಂತರ, 2018ರಲ್ಲಿ ಆಕೆಯ ಹೆಬ್ಬೆರಳನ್ನು ಸಹ ಸಂಪೂರ್ಣವಾಗಿ ತೆಗೆದುಹಾಕಿದರು. ಏಕೆಂದರೆ, ಕ್ಯಾನ್ಸರ್​ ಹರಡುವ ಸಾಧ್ಯತೆ ಇತ್ತು.

ಹೀಗಾಗಿ, ನಿಮಗೆ ಉಗುರುಗಳನ್ನು ಕಚ್ಚುವ ಅಭ್ಯಾಸವಿದ್ದರೆ, ತಕ್ಷಣವೇ ನಿಲ್ಲಿಸಿ. ಇತರರಿಗೆ ಈ ಅಭ್ಯಾಸವಿದ್ದರೆ ನಿಲ್ಲಿಸಲು ಹೇಳಿ. ಇಲ್ಲದಿದ್ದರೆ, ಈ ಹುಡುಗಿಗೆ ಆದ ಗತಿಯೂ ನಿಮಗೂ ಆಗಬಹುದು. ಅಷ್ಟಕ್ಕೂ ಉಗುರು ಕಚ್ಚುವ ಅಭ್ಯಾಸ ಒಳ್ಳೆಯದಲ್ಲ. ಏಕೆಂದರೆ, ನಮ್ಮ ಕೈಗಳು ಯಾವಾಗಲೂ ಕ್ಲೀನ್​ ಆಗಿರುತ್ತದೆ ಎಂದು ಹೇಳುವುದಕ್ಕೆ ಆಗಲ್ಲ. ಅನೇಕ ಬ್ಯಾಕ್ಟೀರಿಗಳು ದೇಹದ ವಿವಿಧ ಭಾಗವನ್ನು ಸೇರುವುದು ನಮ್ಮ ಕೈಗಳು ಮಾಡುವ ತಪ್ಪಿನಿಂದ ಎಂಬುದನ್ನು ಮರೆಯಬಾರದು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net