

ಅಮರಾವತಿ: ಲೋಕಸಭಾ ಚುನಾವಣೆ ಮತ್ತು ವಿಧಾನಸಭೆ ಚುನಾವಣೆಗೂ ಮುನ್ನ ಅಕ್ರಮವಾಗಿ ಹಣ ಸಾಗಿಸುವವರ ಮೇಲೆ ಚುನಾವಣಾಧಿಕಾರಿಗಳು ಮತ್ತು ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಇಂದು ಆಂಧ್ರಪ್ರದೇಶದಲ್ಲಿ ಲಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾದ ಗೂಡ್ಸ್ ವಾಹನವೊಂದರಿಂದ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 7 ಕೋಟಿ ರೂಪಾಯಿ ಜಪ್ತಿ ಮಾಡಲಾಗಿದೆ.
ಗೂಡ್ಸ್ ವಾಹನ ವಿಜಯವಾಡದಿಂದ ವಿಶಾಖಪಟ್ಟಣಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಪೂರ್ವ ಗೋದಾವರಿ ಪೊಲೀಸರು ವಾಹನದಿಂದ 7 ಬಾಕ್ಸ್‌ಗಳು ಒಂದು ಚೀಲದಲ್ಲಿ ತುಂಬಿದ್ದ 7 ಕೋಟಿ ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ. ನಲ್ಲಜರ್ಲ ಮಂಡಲದ ಅನಂತಪಲ್ಲಿ ಎಂಬಲ್ಲಿ ಲಾರಿಗೆ ಡಿಕ್ಕಿ ಹೊಡೆದು ನಗದು ಸಾಗಿಸುತ್ತಿದ್ದ ವಾಹನವನ್ನು ಪಲ್ಟಿಯಾದ ನಂತರ ವಶಪಡಿಸಿಕೊಳ್ಳಲಾಗಿದೆ. ಪಲ್ಟಿಯಾದ ವಾಹನದ ಚಾಲಕನಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಗೋಪಾಲಪುರಂ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆ ನಡೆದಿದ್ದು ?: ನಲ್ಲಜರ್ಲ ಮಂಡಲದ ಅನಂತಪಲ್ಲಿ ಎಂಬಲ್ಲಿ ಲಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ವಾಹನ ಪಲ್ಟಿಯಾಗುತ್ತಿದಂತೆಯೇ ಅದರಲ್ಲಿದ್ದ ಸುಮಾರು 7 ಬಾಕ್ಸ್ ಡಬ್ಬಗಳು ಮತ್ತು ಒಂದು ಗೋಣಿ ಚೀಲದಿಂದ ಇನ್ನೊಂದು ಚೀಲಕ್ಕೆ ಹಾಕುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಹಾಗೂ ಚುನಾವಣಾ ಅಧಿಕಾರಿಗಳು ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮೇ.13 ರಂದು ವಿಧಾನಸಭೆ/ಲೋಕಸಭೆ ಚುನಾವಣೆ: ಲೋಕಸಭಾ ಚುನಾವಣೆಯ ನಡುವೆ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆ ಕೂಡ ನಡೆಯುತ್ತಿದೆ. ವಿಭಜಿತ ಆಂಧ್ರ ಪ್ರದೇಶದ ಮೂರನೇ ಚುನಾವಣೆ ಇದು. ಆಂಧ್ರಪ್ರದೇಶದಲ್ಲಿ ಲೋಕಸಭಾ ಚುನಾವಣೆಯ ಜೊತೆಗೆ ವಿಧಾನಸಭೆಯ 175 ಕ್ಷೇತ್ರಗಳಿಗೆ ಮತದಾನ ಮೇ 13 ರಂದು ಮತದಾನ ನಡೆಯಲಿದೆ. ಆಂಧ್ರಪ್ರದೇಶದ ಚುನಾವಣೆ ಈ ಬಾರಿ ಹೆಚ್ಚು ಗಮನಸೆಳೆದಿದ್ದು, ಬಿಜೆಪಿ ತನ್ನ ಛಾಪು ಮೂಡಿಸಲು ಪ್ರಯತ್ನಿಸುತ್ತಿದೆ. ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಯಶಸ್ಸಿನೊಂದಿಗೆ ಪ್ರಧಾನಿ ಮೋದಿಯವರ ರ‍್ಯಾಲಿ ಈ ವಿಚಾರದಲ್ಲಿ ಗಮನಾರ್ಹ.