ಇಪಿಎಫ್​ನಿಂದ ಹತ್ತೇ ದಿನದಲ್ಲಿ 280 ಕೋಟಿ ರೂ. ವಿತ್​ಡ್ರಾ: ಕೇಂದ್ರದ ನಿರ್ಧಾರದಿಂದ ಸಂಕಷ್ಟದ ಸಮಯದಲ್ಲಿ ನೌಕರರಿಗೆ ಬಿಗ್​ ರಿಲೀಫ್​

epfo
Published on

ನವದೆಹಲಿ: ಕರೊನಾ ವೈರಸ್​ನಿಂದ ಉಂಟಾಗಿರುವ ಬಿಕ್ಕಟ್ಟಿನ ನಡುವೆ ನೌಕರರಿಗೆ ನೆರವಾಗಲೆಂದು ಈಗಾಗಲೇ ಕೇಂದ್ರ ಸರ್ಕಾರ ನೌಕರರ ಭವಿಷ್ಯ ನಿಧಿ ಸಂಸ್ಥೆಯಿಂದ(ಇಪಿಎಫ್​ಒ) ಶೇ. 75 ಹಣವನ್ನು ಹಿಂಪಡೆಯಲು ಅನುವು ಮಾಡಿಕೊಟ್ಟಿದೆ. ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ನೌಕರರು ಮುಗಿಬಿದ್ದಿದ್ದು, ಕೇವಲ 10 ದಿನಗಳಲ್ಲಿ 280 ಕೋಟಿ ರೂ. ಹಣವನ್ನು ಹಿಂಪಡೆದುಕೊಂಡಿದ್ದಾರೆ.

ಈ ಸಂಬಂಧ ಇಪಿಎಫ್​ಒ ಪತ್ರಿಕಾ ಪ್ರಕಟಣೆಯನ್ನು ಶುಕ್ರವಾರ ಹೊರಡಿಸಿದ್ದು, ಪ್ರಧಾನ ಮಂತ್ರಿ ಗರೀಬ್​ ಕಲ್ಯಾಣ ಯೋಜನಾ(ಪಿಎಂಜಿಕೆವೈ) ಪ್ಯಾಕೇಜ್​ ಭಾಗವಾಗಿ ವಿಶೇಷ ವಿತ್​ಡ್ರಾ ಅಡಿಯಲ್ಲಿ ಈವರೆಗೆ 1.37 ಲಕ್ಷ ನೌಕರರಿಗೆ 279.65 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಲಾಗಿದೆ.

ಮಾರ್ಚ್​ 26ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಪಿಎಂಜಿಕೆವೈ ವಿಶೇಷ ಪ್ಯಾಕೇಜ್​ ಅನ್ನು ಘೋಷಿಸಿದರು. ಉದ್ಯೋಗದಾತರು ಹಾಗೂ ನೌಕರರು ಕಟ್ಟುವ ತಲಾ ಶೇ.12 ಇಪಿಎಫ್​ನ್ನು ಅಂದರೆ ಒಟ್ಟು ಶೇ.24 ವಂತಿಗೆ ಅನ್ನು ಕೇಂದ್ರ ಸರ್ಕಾರ ನೀಡಲಿದೆ. ಆದರೆ ಈ ಸೌಲಭ್ಯ 100 ಉದ್ಯೋಗಿಗಳವರೆಗೆ ಇರುವ ಹಾಗೂ ಶೇ.90 ಉದ್ಯೋಗಿಗಳು ತಿಂಗಳಿಗೆ ಸರಾಸರಿ 15 ಸಾವಿರ ರೂ.ನಷ್ಟು ವೇತನ ಪಡೆಯುವ ಉದ್ದಿಮೆಗಳಿಗೆ ಅನ್ವಯವಾಗಲಿದೆ. ಇದರಿಂದ 80 ಲಕ್ಷ ಉದ್ಯೋಗಿಗಳು ಮತ್ತು 4 ಲಕ್ಷ ಕಂಪನಿಗಳಿಗೆ ಲಾಭವಾಗಲಿದೆ. ಜತೆಗೆ ಪಿಎಫ್ ನಿಯಮಾವಳಿಗಳಲ್ಲಿ ತಿದ್ದುಪಡಿ ಮಾಡಲಾಗುವುದು. ಇದರಿಂದಾಗಿ ಉದ್ಯೋಗಿಗಳು ಕಷ್ಟದ ಸಮಯದಲ್ಲಿ ನೌಕರರ ಭವಿಷ್ಯ ನಿಧಿಯಿಂದ ಶೇ.75ವರೆಗಿನ ಹಣ ಅಥವಾ ಮೂರು ತಿಂಗಳ ವೇತನದಲ್ಲಿ ಯಾವುದು ಕಡಿಮೆ ಇರುತ್ತದೆಯೋ ಅಷ್ಟನ್ನು ಹಿಂಪಡೆಯಬಹುದು. ಸುಮಾರು 4.8 ಕೋಟಿ ಉದ್ಯೋಗಿಗಳಿಗೆ ಇದರಿಂದ ಪ್ರಯೋಜನವಾಗಲಿದೆ ಎಂದು ಹೇಳಿದ್ದರು.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರ ಮಹತ್ವದ ಘೋಷಣೆಯ ಬಳಿಕ ಮಾರ್ಚ್​ 28ರಂದು ಇಪಿಎಫ್​ಒ ಈ ಕುರಿತು ಅಧಿಸೂಚನೆ ಹೊರಡಿಸಿತು. ಕಷ್ಟಕಾಲದಲ್ಲಿ ಕೂಡಿಟ್ಟ ಹಣ ನೆರವಿಗೆ ಬರಲಿ ಎಂಬ ಉದ್ದೇಶದಿಂದ ಹೊರತಂದ ಕೇಂದ್ರದ ಯೋಜನೆಗೆ ನೌಕರರಿಂದ ಭಾರಿ ಬೇಡಿಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಇಪಿಎಫ್​ಒ ಕೂಡ ಆನ್​ಲೈನ್​ ರಶೀದಿ ಮತ್ತು ಹಣಕಾಸು ಇತ್ಯರ್ಥಕ್ಕೆ ಪ್ರತ್ಯೇಕ ಸಾಫ್ಟ್​ವೇರ್​ ಅನ್ನು ಹೊರತಂದಿತು. ಮಾರ್ಚ್​ 29ರಂದು ಹೊಸ ವೆಬ್​ಸೈಟ್​ ಅನ್ನು ನಿಯೋಜಿಸಿತು.

ಸಂಕಷ್ಟದ ಸಮಯದಲ್ಲಿ ಹುಟ್ಟಿದ ದಿನಾಂಕ ಹಾಗೂ ಕೆವೈಸಿ ಮಾಹಿತಿ ತಿದ್ದುಪಡಿಗೂ ಇಪಿಎಫ್​ಒ ವಿನಾಯಿತಿಯನ್ನು ನೀಡಿದೆ. ಇಂದಿಗೂ ಕೂಡ ಸಾಕಷ್ಟು ಅಪ್ಲಿಕೇಶನ್​ಗಳು ಬರುತ್ತಿದ್ದು, ಕೇವಲ 72 ಗಂಟೆಗಳಲ್ಲಿ ಕೆವೈಸಿ ದೂರುಗಳು ಸೇರಿದಂತೆ ಎಲ್ಲವನ್ನು ಸರಿಪಡಿಸಿದ ಹಣವನ್ನು ಇತ್ಯರ್ಥ ಮಾಡಲು ಇಪಿಎಫ್​ಒ ಹಗಲಿರುಳು ಶ್ರಮಿಸುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net