‘ಕೆಜಿಎಫ್​ 2’ ಸೆಟಲೈಟ್​ ಹಕ್ಕು ಮಾರಾಟದ ಬಗ್ಗೆ ಹರಿದಾಡ್ತಿರೋ ಈ ಸುದ್ದಿ ನಿಜಾನಾ?

kgfff
Published on

ಹಲವು ಕಾರಣಗಳಿಂದ ಸದಾ ಸುದ್ದಿಯಲ್ಲಿರುವ ಕನ್ನಡದ ಮಾಸ್ಟರ್​ಪೀಸ್​ ಸಿನಿಮಾ ‘ಕೆಜಿಎಫ್​- ಚಾಪ್ಟರ್ 2‘ ಇದೀಗ ಮತ್ತೊಂದು ವಿಚಾರಕ್ಕೆ ಸದ್ದು ಮಾಡುತ್ತಿದೆ. ಚಾಪ್ಟರ್​ 1ಕ್ಕೆ ಸಿಕ್ಕ ಭರ್ಜರಿ ಪ್ರತಿಕ್ರಿಯೆಯಿಂದ, ಚಾಪ್ಟರ್ 2ರ ಬಗ್ಗೆ ಪ್ರೇಕ್ಷಕರೂ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಇತ್ತ ‘ಕೆಜಿಎಫ್​ ಚಾಪ್ಟರ್ 2‘ ಸೆಟಲೈಟ್​ ಹಕ್ಕಿಗೂ ಭಾರೀ ಡಿಮಾಂಡ್​ ಕ್ರಿಯೆಟ್​ ಆಗಿದೆ. ಬರೋಬ್ಬರಿ 120 ಕೋಟಿ ಮೊತ್ತಕ್ಕೆ ಕೆಜಿಎಫ್​ ಸಿನಿಮಾ ಸೇಲ್​ ಆಗಿದೆ ಎನ್ನಲಾಗುತ್ತಿದೆ!!

‘ಕೆಜಿಎಫ್​’ ಸಿನಿಮಾ ಕನ್ನಡದ ಜತೆಗೆ ಬಾಲಿವುಡ್, ಟಾಲಿವುಡ್​, ಕಾಲಿವುಡ್​, ಮಾಲಿವುಡ್​ನಲ್ಲೂ ಹವಾ ಸೃಷ್ಟಿಸಿತ್ತು. ರಾಕಿಂಗ್​ ಸ್ಟಾರ್ ಯಶ್​ಗೆ ನ್ಯಾಶನಲ್​ ಸ್ಟಾರ್ ಪಟ್ಟ ತಂದು ಕೊಟ್ಟಿತ್ತು, ಪ್ರಶಾಂತ್​ ನೀಲ್​ ನಿರ್ದೇಶನದ ಈ ಸಿನಿಮಾ. ಹಾಗಾಗಿ ಈ ಚಿತ್ರದ ಬಗ್ಗೆ ಸಣ್ಣ ಮಾಹಿತಿ ಹೊರಬಿದ್ದರೂ, ಅದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುವುದು ಸಹಜ. ಅದೇ ರೀತಿ ಇದೀಗ ಚಿತ್ರದ ಸೆಟಲೈಟ್​ ಹಕ್ಕುಗಳ ಮಾರಾಟವೂ ಭರ್ಜರಿಯಾಗಿ ಬಿಕರಿಯಾಗಿದೆಯಂತೆ. ಸದ್ಯಕ್ಕೆ ಯಾವ ಮನರಂಜನಾ ವಾಹಿನಿ ಹಕ್ಕುಗಳನ್ನು ಖರೀದಿಸಿದೆ? ಯಾವ ಭಾಷೆಯಲ್ಲಿ ಟಿವಿ ಹಕ್ಕುಗಳು ಮಾರಾಟವಾಗಿವೆ? ಈ ಎಲ್ಲವೂ ಸದ್ಯಕ್ಕೆ ಬಹಿರಂಗವಾಗಿಲ್ಲ. ಒಟ್ಟಾರೆಯಾಗಿ 120 ಕೋಟಿಗೆ ಸೇಲ್​ ಎಂಬುದಷ್ಟೇ ಸದ್ಯದ ಸುದ್ದಿ. ಇದು ನಿಜವಾ ಸುಳ್ಳಾ ಎಂಬುದನ್ನು ಚಿತ್ರತಂಡವೇ ಅಧಿಕೃತವಾಗಿ ಹೇಳಬೇಕಿದೆ!

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಹಾಡುಗಳ ಕೆಲಸಕ್ಕೆ ಚಾಲನೆ ನೀಡಿರುವ ಚಿತ್ರತಂಡ, ಪೋಸ್ಟ್​ ಪ್ರೊಡಕ್ಷನ್​ನತ್ತ ದೃಷ್ಟಿ ನೆಟ್ಟಿದೆ. ಶೂಟಿಂಗ್​ಗೆ ಅನುಮತಿ ಸಿಗುತ್ತಿದ್ದಂತೆ ಒಂದಷ್ಟು ಪ್ಯಾಚ್​ವರ್ಕ್​ ಚಿತ್ರೀಕರಣವನ್ನು ಮಾಡಿಕೊಳ್ಳಲು ಸಜ್ಜಾಗಲಿದೆ. ಈ ಮೊದಲೇ ಹೇಳಿದಂತೆ ಅಕ್ಟೋಬರ್​ 23ರಂದೇ ಚಿತ್ರ ಬಿಡುಗಡೆ ಆಗುವುದು ಖಚಿತ ಎಂದು ಚಿತ್ರತಂಡವೂ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net