‘ಆರ್.ಆರ್.ಆರ್’ ಬಿಡುಗಡೆ ಇನ್ನೂ ಒಂದು ವರ್ಷ ಮುಂದಕ್ಕೆ ಹೋಯ್ತಾ?

RRR - Final
Published on

ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಆರ್.ಆರ್.ಆರ್’ ಚಿತ್ರದ ಚಿತ್ರೀಕರಣ ಇಷ್ಟರಲ್ಲಿ ಮುಗಿದು, ಪೋಸ್ಟ್-ಪ್ರೊಡಕ್ಷನ್ ಕೆಲಸಗಳು ಶುರುವಾಗಬೇಕಿತ್ತು. ಲಾಕ್‌ಡೌನ್‌ನಿಂದ ರಾಜಮೌಳಿ ಅವರ ಯೋಚನೆಗಳೆಲ್ಲಾ ತಲೆಕೆಳಗಾಗಿವೆ.

ಈಗ ಲಾಕ್‌ಡೌನ್ ಮುಗಿದು, ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿರುವಾಗಲಾದರೂ ಬೇಗ ಚಿತ್ರೀಕರಣ ಮುಗಿಸುವಾ ಎಂದು ರಾಜಮೌಳಿ ಪ್ಲಾನ್ ಹಾಕಿಕೊಂಡು ಕುಳಿತಿದ್ದರೆ, ಕರೊನಾ ಹಾವಳಿ ಹೆಚ್ಚಾಗಿರುವುದರಿಂದ ಶೂಟಿಂಗ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ಜ್ಯೂನಿಯರ್ ಎನ್.ಟಿ.ಆರ್ ಮತ್ತು ರಾಮ್‌ಚರಣ್ ತೇಜ ಹೇಳಿರುವುದರಿಂದ ಚಿತ್ರೀಕರಣ ಸದ್ಯಕ್ಕೆ ಪ್ರಾರಂಭವಾಗುವುದು ಸಹ ಸಂಶಯವಾಗಿದೆ.

ಈ ಮಧ್ಯೆ, ಚಿತ್ರದ ಬಗ್ಗೆ ಒಂದು ಸುದ್ದಿ ಕೇಳಿ ಬಂದಿದೆ. 'ಬಾಹುಬಲಿ' ತರಹವೇ ಈ ಚಿತ್ರವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡಿದರೆ ಹೇಗೆ ಎಂಬ ಯೋಚನೆಯೊಂದು ಚಿತ್ರತಂಡಕ್ಕೆ ಬಂದಿದೆ. ಎಲ್ಲಾ ಬಿಟ್ಟು ರಾಜಮೌಳಿಗೆ ಇಂಥದ್ದೊಂದು ಯೋಚನೆ ಯಾಕೆ ಬಂತು ಎಂಬ ಪ್ರಶ್ನೆ ಬರುವುದು ಸಹಜ. ಉತ್ತರ ಇಲ್ಲಿದೆ ಕೇಳಿ.

ಮುಂಚೆ ಚಿತ್ರತಂಡವು, ಚಿತ್ರವನ್ನು ಮುಂದಿನ ಸಂಕ್ರಾಂತಿಗೆ ಬಿಡುಗಡೆ ಮಾಡುವುದಕ್ಕೆ ಪ್ಲಾನ್​ ಮಾಡಿತ್ತು. ಆದರೆ, ಚಿತ್ರೀಕರಣ ತಡವಾಗುತ್ತಾ ಹೋಗುತ್ತಿದ್ದಂತೆಯೇ, ಯಾವುದೇ ಕಾರಣಕ್ಕೂ ಮುಂದಿನ ಸಂಕ್ರಾಂತಿಗೆ ಚಿತ್ರ ಬಿಡುಗಡೆಯಾಗುವುದಕ್ಕೆ ಚಾನ್ಸ್​ ಇಲ್ಲ ಎಂಬುದು ಸ್ಪಷ್ಟವಾಗಿದೆ.

ಸಂಕ್ರಾಂತಿಗೆ ಆಗದಿದ್ದರೆ ಬೇಡ, 2021ರ ಜುಲೈ 30ಕ್ಕೆ ಚಿತ್ರ ಬಿಡುಗಡೆ ಮಾಡಿದರಾಯಿತು ಎಂದು ಆ ದಿನಾಂಕವನ್ನು ಬಿಡುಗಡೆಗೆ ಫಿಕ್ಸ್​ ಮಾಡಿದ್ದಾರೆ ರಾಜಮೌಳಿ. ಈಗ ನೋಡಿದರೆ, ಅದು ಸಹ ಸಂಶಯ ಎನ್ನುವಂತಿದೆ. ಏಕೆಂದರೆ, ಕರೊನಾ ಹಾವಳಿ ಸ್ವಲ್ಪ ಕಡಿಮೆಯಾಗಿ ಆಗಸ್ಟ್​ನಿಂದ ಚಿತ್ರೀಕರಣ ಶುರುವಾಗಿ, ಅಂದುಕೊಂಡಂತೆ ಮುಗಿದರೆ, ಆಗ ಚಿತ್ರ 2021ರ ಜುಲೈ ಹೊತ್ತಿಗೆ ಬಿಡುಗಡೆ ಮಾಡಬಹುದು ಎಂದು ಅಂದಾಜಿಸಲಾಗಿದೆ. ಒಂದು ಪಕ್ಷ, ಇನ್ನೂ ತಡವಾಗಿ ಚಿತ್ರೀಕರಣವೇನಾದರೂ, ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷ ಪ್ರಾರಂಭವಾದರೆ, ಚಿತ್ರ ಬಿಡುಗಡೆಯಾಗುವುದೇನಿದ್ದರೂ 2022ಕ್ಕೆ ಹೇಳಲಾಗುತ್ತಿದೆ.

ಹಾಗೆ ನೋಡಿದರೆ, ಈಗಾಗಲೇ ಚಿತ್ರದ ಶೇ 60ರಷ್ಟು ಚಿತ್ರೀಕರಣವನ್ನು ರಾಜಮೌಳಿ ಮುಗಿಸಿದ್ದಾರಂತೆ ರಾಜಮೌಳಿ. ಇನ್ನು ದಿನಗಳ ಚಿತ್ರೀಕರಣವೇನಿಲ್ಲ. ಆದರೂ ಇಂಥದ್ದೊಂದು ಚಿತ್ರವು ವರ್ಷದ ಮೊದಲಿಗೆ ಬಂದರೆ ಚೆನ್ನಾಗಿರುತ್ತದೆ ಎಂಬುದು ಚಿತ್ರತಂಡದ ಅನಿಸಿಕೆ. ಹಾಗಾಗಿ ಮುಂದಿನ ವರ್ಷ ದಸರಾ ಅಥವಾ ದೀಪಾವಳಿ ಹೊತ್ತಿಗೆ ಚಿತ್ರ ಸಂಪೂರ್ಣವಾದರೂ, ಬಿಡುಗಡೆ ಏನಿದ್ದರೂ 2022ರ ಸಂಕ್ರಾಂತಿಗೆ ಎಂಬ ಮಾತು ಟಾಲಿವುಡ್​ನಲ್ಲಿ ಕೇಳಿ ಬರುತ್ತಿದೆ. ಇದಕ್ಕೆ ಚಿತ್ರತಂಡದವರು ಇನ್ನೂ ಉತ್ತರ ಕೊಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net