

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಗಸ್ಟ್ 28, 2023 ರಂದು ರೋಜ್‌ಗಾರ್ ಮೇಳದ ಅಡಿಯಲ್ಲಿ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಹೊಸದಾಗಿ ನೇಮಕಗೊಂಡವರಿಗೆ 51,000 ಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿತರಿಸಿದರು.
ಈ ಸಂದರ್ಭದಲ್ಲಿ ಅಭ್ಯರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನೂತನವಾಗಿ ನೇಮಕಗೊಂಡ ಯುವಕರ ಯಶಸ್ಸಿಗೆ ಅಭಿನಂದನೆ ಸಲ್ಲಿಸಿದರು. ಹಾಗೆಯೇ ಯುವಕರನ್ನು ಅಮೃತ ಪ್ರಹರಿ ಎಂದು ಸಂಬೋಧಿಸಿದರು.
ಜನ್ ಧನ್ ಯೋಜನೆಯ ಪಾತ್ರ
ಯುವಕರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಕಳೆದ 09 ವರ್ಷಗಳ ನಮ್ಮ ಪ್ರಯತ್ನದಿಂದಾಗಿ ಮತ್ತೊಂದು ಹೊಸ ಬದಲಾವಣೆಯ ಮಜಲು ಕಾಣಿಸಿಕೊಳ್ಳಲಾರಂಭಿಸಿದೆ. ಯಾವುದೇ ಆರ್ಥಿಕತೆ ಮುಂದುವರಿಯಬೇಕಾದರೆ ದೇಶದ ಪ್ರತಿಯೊಂದು ಕ್ಷೇತ್ರವೂ ಅಭಿವೃದ್ಧಿ ಹೊಂದುವುದು ಅವಶ್ಯಕ. ಯುವಕರಿಗೆ ಹೊಸ ಮಾರ್ಗಗಳನ್ನು ತೆರೆಯಲು ನಾವು ಕಳೆದ ಕೆಲವು ವರ್ಷಗಳಲ್ಲಿ ಅರೆಸೈನಿಕ ಪಡೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಿದ್ದೇವೆ.
ದೇಶವೇ ಹೆಮ್ಮೆ, ಆತ್ಮವಿಶ್ವಾಸ ತುಂಬಿರುವ ಇಂತಹ ವಾತಾವರಣದಲ್ಲಿ ಈ ಬಾರಿ ಉದ್ಯೋಗ ಮೇಳ ಆಯೋಜಿಸಲಾಗುತ್ತಿದೆ. ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯು ಹಳ್ಳಿಗಳು ಮತ್ತು ಬಡವರ ಆರ್ಥಿಕ ಸಬಲೀಕರಣದಲ್ಲಿ ಮತ್ತು ಉದ್ಯೋಗ ಸೃಷ್ಟಿಯಲ್ಲಿ ದೊಡ್ಡ ಪಾತ್ರವನ್ನು ವಹಿಸಿದೆ.
ಉತ್ತರ ಪ್ರದೇಶದ ಬಗ್ಗೆಯೂ ಮಾತನಾಡಿದ ಪ್ರಧಾನಿ
ಉತ್ತರ ಪ್ರದೇಶವು ಒಂದು ಕಾಲದಲ್ಲಿ ಅಪರಾಧಕ್ಕೆ ಹೆಸರಾಗಿತ್ತು, ಆದರೆ ಇಂದು ಕಾನೂನು ಸುವ್ಯವಸ್ಥೆ ಸ್ಥಾಪನೆಯಾದ ನಂತರ ಹೂಡಿಕೆಗೆ ಹೆಸರುವಾಸಿಯಾಗಿದೆ ಎಂದು ಪ್ರಧಾನಿ ಹೇಳಿದರು. ಈ ದಶಕದಲ್ಲಿ ಭಾರತವು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಲಿದೆ. ನಾನು ಈ ಖಾತರಿಯನ್ನು ನೀಡಿದಾಗ, ಅದನ್ನು ಸಂಪೂರ್ಣ ಜವಾಬ್ದಾರಿಯೊಂದಿಗೆ ನೀಡುತ್ತೇನೆ ಎಂದರು.
ಆಟೋಮೊಬೈಲ್ ಉದ್ಯಮದಲ್ಲಿ ಉದ್ಯೋಗಾವಕಾಶಗಳು
ಪ್ರವಾಸೋದ್ಯಮ ಕ್ಷೇತ್ರವು 2030 ರ ವೇಳೆಗೆ ಭಾರತೀಯ ಆರ್ಥಿಕತೆಗೆ 20 ಲಕ್ಷ ಕೋಟಿ ರೂ.ಗೂ ಹೆಚ್ಚು ಕೊಡುಗೆ ನೀಡುವ ನಿರೀಕ್ಷೆಯಿದೆ. ಯುವಕರಿಗೆ 13-14 ಕೋಟಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಫಾರ್ಮಾ ವಲಯವು ವೇಗವಾಗಿ ಬೆಳೆಯುತ್ತಿದೆ ಮತ್ತು ಮುಂಬರುವ ದಿನಗಳಲ್ಲಿ ಇದು ದೊಡ್ಡ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಆಟೋಮೊಬೈಲ್ ಉದ್ಯಮವು ಸಹ ವೇಗವಾಗಿ ಬೆಳೆಯುತ್ತಿದೆ. ಈ ಎರಡೂ ಕೈಗಾರಿಕೆಗಳು (ಫಾರ್ಮಾ ಮತ್ತು ಆಟೋಮೊಬೈಲ್ ಉದ್ಯಮ) ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಬೆಳೆಯಲಿವೆ ಎಂದು ಮೋದಿ ತಿಳಿಸಿದರು.