

ನವದೆಹಲಿ: 9 ವರ್ಷದ ಬಾಲಕಿಯ ಮುಖದಲ್ಲಿ ನಗು ತರಿಸಲು ಪೈಲಟ್ ಮಾಡಿರುವ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ವ್ಯಾಲೆಂಟಿನಾ ಎಂಬ ಬಾಲಕಿ ತನ್ನ ಬೊಂಬೆಯನ್ನು ವಿಮಾನದಲ್ಲಿಯೇ ಮರೆತಿದ್ದಳು. ಕೊನೆಗೆ ಪೈಲಟ್ ಸುಮಾರು 6 ಸಾವಿರ ಮೈಲುಗಳವರೆಗೆ ತೆರಳಿ, ಕಳೆದುಹೋದ ಬೊಂಬೆಯನ್ನು ಬಾಲಕಿಗೆ ಹಿಂದಿರುಗಿಸಿದರು.
ಏನಿದು ವಿಷಯ?
ಅಮೆರಿಕನ್ ಏರ್‌ಲೈನ್ಸ್‌ನಲ್ಲಿ ಕೆಲಸ ಮಾಡುವ ಜೇಮ್ಸ್ ಡ್ಯಾನನ್ ಎಂಬುವವರಿಗೆ ವ್ಯಾಲೆಂಟಿನಾ ಎಂಬ ಬಾಲಕಿಯ ಬೊಂಬೆ ಕಳೆದುಹೋಗಿರುವುದು ಫೇಸ್‌ಬುಕ್‌ನಿಂದ ತಿಳಿದುಬಂದಿದೆ. ಬಾಲಕಿ ಆ ಬೊಂಬೆಯನ್ನು ಕೊನೆಯದಾಗಿ ನೋಡಿದ್ದು ಟೋಕಿಯೋದಲ್ಲಿ.
ಬಾಲಕಿಯ ಕುಟುಂಬವು ಇಂಡೋನೇಷ್ಯಾದ ಬಾಲಿಗೆ ಪ್ರಯಾಣಿಸಿ ಟೆಕ್ಸಾಸ್ಗೆ ಹಿಂತಿರುಗುತ್ತಿತ್ತು. ಇತ್ತ ಕಡೆ ಜೇಮ್ಸ್ ಡ್ಯಾನನ್ ಅವರಿಗೆ ಟೋಕಿಯೋದಲ್ಲಿ ನಿಲುಗಡೆ ಇತ್ತು. ಆಗ ಸಾಮಾಜಿಕ ಮಾಧ್ಯಮದಲ್ಲಿ ಬಾಲಕಿ ಬೊಂಬೆ ಕಳೆದುಹೋಗಿರುವ ಕುರಿತು ಪೋಸ್ಟ್ ಮಾಡಿರುವುದನ್ನು ಜೇಮ್ಸ್ ಡ್ಯಾನನ್ ನೋಡಿದ್ದಾರೆ.
ಆಗ ಜೇಮ್ಸ್ ಡ್ಯಾನನ್ ಟೋಕಿಯೊ ಹನಡಾ ವಿಮಾನ ನಿಲ್ದಾಣದಲ್ಲಿ ಟರ್ಕಿಶ್ ಏರ್ಲೈನ್ಸ್ ಅನ್ನು ಸಂಪರ್ಕಿಸಿ, ಬೊಂಬೆ ಕಳೆದುಕೊಂಡವರ ಬಗ್ಗೆ ತಿಳಿದುಕೊಂಡಿದ್ದಾರೆ. ಅಂತಿಮವಾಗಿ ಅವರು ಆ ಬೊಂಬೆಯನ್ನು ತೆಗೆದುಕೊಂಡು ವ್ಯಾಲೆಂಟಿನಾ (ಬೊಂಬೆ ಕಳೆದುಕೊಂಡ ಬಾಲಕಿ)ಗೆ ನೀಡಲು ಹೊರಟರು.
ಡ್ಯಾನನ್ ಹೇಳಿದ್ದೇನು?
ಡ್ಯಾನನ್ 'ಇದು ನನ್ನ ಸ್ವಭಾವ. ಜನರಿಗೆ ಸಹಾಯ ಮಾಡಲು ಇಷ್ಟಪಡುತ್ತೇನೆ. ಅದನ್ನೇ ಮಾಡುತ್ತಿದ್ದೇನೆ. ನಾನು ಯಾರಿಗಾದರೂ ಒಳ್ಳೆಯದನ್ನು ಮಾಡಿದರೆ ನನಗೆ ತುಂಬಾ ಸಂತೋಷವಾಗುತ್ತದೆ' ಎಂದು ತಿಳಿಸಿದ್ದಾರೆ.
ಬೊಂಬೆಯನ್ನು ಪಡೆದ ನಂತರ ಬಾಲಕಿ ಹೇಳಿದ್ದು..
ಮೂರು ವಾರಗಳ ನಂತರ ಬಾಲಕಿಗೆ ಬೊಂಬೆ ಸಿಕ್ಕಿತು. ಪೈಲಟ್ ಮನೆಯು ಬಾಲಕಿ ಮನೆಯ ಸಮೀಪದಲ್ಲಿದೆ. ಪೈಲಟ್ ಬಾಲಕಿಗೆ ಜಪಾನಿ ತಿನಿಸನ್ನು ಉಡುಗೊರೆಯಾಗಿ ನೀಡಿದರು ಜತೆಗೆ ಮ್ಯಾಪ್ ಸಹ ನೀಡಿದರು. ವ್ಯಾಲೆಂಟಿನಾ 'ಈ ಬೊಂಬೆ ನನಗೆ ಬಹಳ ಮುಖ್ಯ, ಅದು ನನಗೆ ಖುಷಿ ಕೊಡುತ್ತದೆ, ಇದು ನನ್ನ ಉತ್ತಮ ಸ್ನೇಹಿತೆ, ನಾವು ಹೋಟೆಲ್ ಕಡೆಗೆ ಹೋದಾಗ ಇದನ್ನು ಕಳೆದುಕೊಂಡೆ, ನನಗೆ ತುಂಬಾ ಬೇಸರವಾಯಿತು, ನನ್ನ ಹೃದಯ ಒಡೆದ ಹಾಗೆ ಅನಿಸಿತು' ಎಂದು ತಿಳಿಸಿದ್ದಾಳೆ.
ವ್ಯಾಲೆಂಟಿನಾ ಪೋಷಕರೂ ಪೈಲಟ್ ಡ್ಯಾನನ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಬಾಲಕಿಯ ತಂದೆ, 'ಈ ಜಗತ್ತಿನಲ್ಲಿ ಇನ್ನು ದಯೆ ಇದೆ ಎಂಬುದಕ್ಕೆ ಇದು ಮತ್ತೊಂದು ಗುರುತು ಎಂದು ನಾನು ಭಾವಿಸುತ್ತೇನೆ. ಅದಕ್ಕೆ ಜೇಮ್ಸ್ ನಮಗೆ ಸಹಾಯ ಮಾಡಲು ಸಾಧ್ಯವಾಯಿತು ಎಂದು ನನಗೆ ನಿಜವಾಗಿಯೂ ಸಂತೋಷವಾಗಿದೆ. ಅದಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ' ಎಂದು ತಿಳಿಸಿದ್ದಾರೆ.