

ಹಾಂಗ್ಝೌ: ಭಾರತದ ನಾವಿಕ ಪರ್ಮಿಂದರ್ ಸಿಂಗ್ ಏಷ್ಯನ್ ಗೇಮ್ಸ್ನ ರೋಯಿಂಗ್ ಸ್ಪರ್ಧೆಯ ಕ್ವಾಡ್ರಪಲ್ ಸ್ಕಲ್ಸ್ ವಿಭಾಗದಲ್ಲಿ ಕಂಚಿನದ ಪದಕ ಗೆಲ್ಲುವ ಮೂಲಕ ತಂದೆಯ ಸಾಧನೆಯನ್ನು ಸರಿಗಟ್ಟಿದ್ದಾರೆ.
23 ವರ್ಷದ ಪರ್ಮಿಂದರ್ ಅವರ ತಂದೆ ಇಂದ್ರಪಾಲ್ ಸಿಂಗ್ ಕೂಡ 21 ವರ್ಷಗಳ ಹಿಂದೆ 2002ರ ಬೂಸಾನ್ ಏಷ್ಯನ್ ಗೇಮ್ಸ್ನಲ್ಲಿ ಕಾಕ್ಸ್ಲೆಸ್ ಫೋರ್ ವಿಭಾಗದಲ್ಲಿ ಕಂಚು ಗೆದ್ದ ಭಾರತ ತಂಡದ ಭಾಗವಾಗಿದ್ದರು.
"ಇದು ನಿಜಕ್ಕೂ ಅಪೂರ್ವ ಅನುಭವ. ತಂದೆಯಿಂದಾಗಿಯೇ ನಾನು ರೋಯಿಂಗ್ನತ್ತ ಆಸಕ್ತಿ ತೋರಿದ್ದೆ ಮತ್ತು ಪದಕ ಗೆದ್ದಿದ್ದೇನೆ' ಎಂದು ಪರ್ಮಿಂದರ್ ಹೇಳಿದ್ದಾರೆ. ಇಂದ್ರಪಾಲ್ ಅವರು ಒಲಿಂಪಿಕ್ಸ್ನ (2000) ರೋಯಿಂಗ್ನಲ್ಲಿ ಸ್ಪರ್ಧಿಸಿದ ಮೊದಲ ಭಾರತೀಯರೂ ಆಗಿದ್ದಾರೆ. ಈಗ ಅವರು ಭಾರತ ರೋಯಿಂಗ್ ತಂಡದ ಕೋಚ್ ಕೂಡ ಆಗಿದ್ದಾರೆ.