ದಾವಣಗೆರೆಯಲ್ಲಿ ರೌಡಿಶೀಟರ್ ಕಣುಮ ಬರ್ಬರ ಹತ್ಯೆ: ಏಳೆಂಟು ಜನರ ತಂಡದಿಂದ ದಾಳಿ, ಬೆಚ್ಚಿಬಿದ್ದ ಜನತೆ! Rowdy sheeter Kanuma

Rowdy sheeter Kanuma
Published on

Rowdy sheeter Kanuma : ದಾವಣಗೆರೆ ನಗರದ ಹದಡಿ ರಸ್ತೆಯ ಮಳಿಗೆಯೊಂದದಲ್ಲಿ, ರೌಡಿಶೀಟರ್ ಸಂತೋಷ ಕುಮಾರ್ ಅಲಿಯಾಸ್ ಕಣುಮ ಸಂತೋಷ್ (೫೦)ನನ್ನು ದುಷ್ಕರ್ಮಿಗಳು ಹಾಡಹಗಲಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.

ಸೋಮವಾರ ಸಂಜೆ ೫ ಗಂಟೆ ಸುಮಾರಿನಲ್ಲಿ ಈ ಕೃತ್ಯ ನಡೆದಿದೆ. ಹದಡಿ ರಸ್ತೆಯ ಸೋಮೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮುಂಭಾಗದ ಕ್ಲಬ್‌ನ ಮಳಿಗೆಯೊಂದಕ್ಕೆ ಬಂದಿದ್ದನ್ನು ಖಾತ್ರಿಪಡಿಸಿಕೊಂಡಿದ್ದ ಏಳೆಂಟು ಜನರ ತಂಡ ಆಟೋದಲ್ಲಿ ಬಂದಿದೆ.

ಮಚ್ಚುಗಳ ಸಹಿತ ಏಕಾಏಕಿ ಮಳಿಗೆಗೆ ನುಗ್ಗಿದ ತಂಡದ ಐವರು, ಕಣುಮನ ಮೇಲೆ ಕೆಲವೇ ನಿಮಿಷದಲ್ಲಿ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಮೊದಲು ಕಣುಮನ ಮುಖಕ್ಕೆ ಕಾಳುಮೆಣಸಿನ ಪುಡಿ ಎರಚಿದ್ದು, ಆತ ಓಡಿ ಬೇರೆ ಕೊಠಡಿಗೆ ಬಂದಾಗ ಮಚ್ಚಿನಿಂದ ಮುಖ, ಕೈ ಭಾಗಗಳನ್ನು ಕೊಚ್ಚಿ ಕೊಲೆ ಮಾಡಿದ್ದ ತಂಡ ದೊಡ್ಡ ಕೂಗು ಹಾಕಿ ಅಲ್ಲಿಂದ ತೆರಳಿದೆ. ಘಟನೆ ವೇಳೆ ಅಲ್ಲಿದ್ದ ಜನರು ಗಾಬರಿಯಿಂದ ಓಡಿಹೋಗಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ ಕೆಟಿಜೆ ನಗರದ ಕಣುಮ ಸಂತೋಷ್ ವಿರುದ್ಧ ಕೊಲೆ, ವಂಚನೆ ಸೇರಿ ೧೦ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ರೌಡಿ ಬುಳ್ಳ ನಾಗನ ಕೊಲೆ ಪ್ರಕರಣದಲ್ಲಿ ಕಣುಮ ಪ್ರಮುಖ ಆರೋಪಿಯಾಗಿದ್ದ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಕಣುಮನ ಮನೆ ಬಳಿಯೇ ಬೆದರಿಕೆ ಹಾಕಿತ್ತು ಎನ್ನಲಾದ ರೌಡಿಗಳ ತಂಡ ಈ ಕೊಲೆ ಮಾಡಿದೆ ಎಂದು ಶಂಕಿಸಲಾಗಿದೆ.

ಘಟನಾ ಸ್ಥಳಕ್ಕೆ ಪೂರ್ವ ವಲಯದ ಐಜಿಪಿ ಡಾ.ಬಿ.ಆರ್.ರವಿಕಾಂತೇಗೌಡ, ಎಸ್ಪಿ ಉಮಾ ಪ್ರಶಾಂತ್ ಭೇಟಿ ನೀಡಿ ಪರಿಶೀಲಿಸಿದರು. ಶ್ವಾನ ದಳವನ್ನು ಕರೆಸಲಾಗಿತ್ತು. ಜನಸಂದಣಿ ಹೆಚ್ಚಿದ್ದರಿಂದ ಕೆಲ ಕಾಲ ಹದಡಿ ರಸ್ತೆಯಲ್ಲಿ ಸಂಚಾರ ವ್ಯತ್ಯಯವಾಗಿತ್ತು.

ಕಣುಮ ಸಂತೋಷನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಆರೋಪಿತರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಪ್ರಕರಣದ ತನಿಖೆಗೆ ಡಿವೈಎಸ್‌ಪಿ ಶರಣ ಬಸವೇಶ್ವರ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಲಾಗಿದೆ. ತನಿಖೆ ಬಳಿಕವೇ ಉತ್ತರ ಸಿಗಲಿದೆ ಎಂದು ಎಸ್ಪಿ ಉಮಾ ಪ್ರಶಾಂತ್ ಪ್ರತಿಕ್ರಿಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net