ಉಗ್ರರ ಗುಂಡಿಗೆ ಬಲಿಯಾದ ನೌಕಾಪಡೆ ಅಧಿಕಾರಿ ವಿನಯ್​ ಪತ್ನಿಗೆ ಟ್ರೋಲಿಗರ ಕಾಟ: ಮಹಿಳಾ ಆಯೋಗ ಆಕ್ರೋಶ! Pahalgam terror attack

Pahalgam terror attack
Published on

Pahalgam terror attack : ಪಹಲ್ಗಾಮ್​ ಭಯೋತ್ಪಾದಕ ದಾಳಿಯಲ್ಲಿ ಬಲಿಯಾದ ನೌಕಾಪಡೆಯ ಅಧಿಕಾರಿ ವಿನಯ್ ನರ್ವಾಲ್​ ಅವರ ಪತ್ನಿ ಹಿಮಾಂಶಿ ವಿರುದ್ಧ ಸಿಕ್ಕಾಪಟ್ಟೆ ಟ್ರೋಲ್​ ಮಾಡಲಾಗುತ್ತಿದ್ದು, ಇದನ್ನು ರಾಷ್ಟ್ರೀಯ ಮಹಿಳಾ ಆಯೋಗ ಖಂಡಿಸಿದೆ. ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕಾಗಿ ಟ್ರೋಲ್ ಮಾಡುವುದು ಅತಿರೇಕದ ಸಂಗತಿ ಎಂದು ಟೀಕಿಸಿದೆ.

ಏಪ್ರಿಲ್​ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟರು. ಅವರಲ್ಲಿ ಲೆಫ್ಟಿನೆಂಟ್ ವಿನಯ್ ಅಗರ್ವಾಲ್ ಕೂಡ ಒಬ್ಬರು. ಧರ್ಮದ ಬಗ್ಗೆ ಕೇಳಿದ ನಂತರ ಭಯೋತ್ಪಾದಕರು ಅವರ ಮೇಲೆ ದಾಳಿ ಮಾಡಿ ಕೊಂದರು. ಈ ದಾಳಿಯಿಂದ ಇಡೀ ದೇಶವೇ ಆಘಾತಕ್ಕೊಳಗಾಗಿದೆ. ಆದಾಗ್ಯೂ, ಕೆಲವರು ಸಾಮಾಜಿಕ ಜಾಲತಾಣದಲ್ಲಿ ವಿನಯ್ ಅವರ ಪತ್ನಿ ಹಿಮಾಂಶಿ ಅವರನ್ನು ಗುರಿಯಾಗಿಸಿಕೊಂಡು ಟ್ರೋಲ್​ ಮಾಡುತ್ತಿರುವುದು ದುಃಖಕರ ಸಂಗತಿಯಾಗಿದೆ.

ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕಾಗಿ ಅವರನ್ನು ಟ್ರೋಲ್ ಮಾಡುವುದು ಅತಿರೇಕದ ಸಂಗತಿ. ಅವರ ವೈಯಕ್ತಿಕ ಜೀವನವನ್ನು ಗುರಿಯಾಗಿಸಿಕೊಂಡು ಇಂತಹ ಕೆಟ್ಟ ಕಾಮೆಂಟ್‌ಗಳನ್ನು ಮಾಡುವುದು ಸರಿಯಲ್ಲ ಎಂದು ತಮ್ಮ ಎಕ್ಸ್​ ಖಾತೆಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ ಖಂಡಿಸಿದೆ. ಅಲ್ಲದೆ, ದೇಶದ ಪ್ರತಿಯೊಬ್ಬ ಮಹಿಳೆಯ ಗೌರವ ಮತ್ತು ಘನತೆಯನ್ನು ರಕ್ಷಿಸುವುದು ಮಹಿಳಾ ಆಯೋಗದ ಉದ್ದೇಶ ಎಂದು ಹೇಳಿದೆ.

ಮತ್ತೊಂದೆಡೆ, ಆಯೋಗದ ಅಧ್ಯಕ್ಷೆ ವಿಜಯಾ ರಹತ್ಕರ್ ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ದೇಶದ ಅನೇಕ ನಾಗರಿಕರು ಸಾವಿಗೀಡಾದರು. ಈ ದಾಳಿಯಲ್ಲಿ, ಲೆಫ್ಟಿನೆಂಟ್ ವಿನಯ್ ನರ್ವಾಲ್ ಸೇರಿದಂತೆ ಇತರ ಜನರನ್ನು ಅವರ ಧರ್ಮದ ಬಗ್ಗೆ ಕೇಳಿದ ನಂತರ ಗುಂಡಿಕ್ಕಿ ಕೊಲ್ಲಲಾಯಿತು. ಈ ಭಯೋತ್ಪಾದಕ ದಾಳಿಯಿಂದ ಇಡೀ ದೇಶವು ನೋವಿನಲ್ಲಿದೆ ಮತ್ತು ಕೋಪಗೊಂಡಿದೆ. ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಮರಣದ ನಂತರ, ಅವರ ಪತ್ನಿ ಹಿಮಾಂಶಿ ನರ್ವಾಲ್ ಅವರು ಕಾರ್ಯಕ್ರಮವೊಂದರಲ್ಲಿ ನೀಡಿದ ಹೇಳಿಕೆಗಳನ್ನು ಗುರಿಯಾಗಿಸಿಕೊಂಡು ಅವರನ್ನು ಟ್ರೋಲ್​ ಮಾಡಲಾಗುತ್ತಿದೆ. ಇದು ನಿಜಕ್ಕೂ ದುರಾದೃಷ್ಟಕರ. ಬಹುಶಃ ಅವರು ನೀಡಿದ ಪ್ರತಿಕ್ರಿಯೆ ಕೆಲವರಿಗೆ ಸರಿಯಿಲ್ಲದಿರಬಹುದು. ಆದರೆ, ಯಾವುದೇ ರೀತಿಯ ಭಿನ್ನಾಭಿಪ್ರಾಯವನ್ನು ಸಭ್ಯತೆಯಿಂದ ಮತ್ತು ಸಾಂವಿಧಾನಿಕ ಮಿತಿಯೊಳಗೆ ವ್ಯಕ್ತಪಡಿಸಬೇಕು. ಮಹಿಳೆಯನ್ನು ಅವರ ಸೈದ್ಧಾಂತಿಕ ಅಭಿವ್ಯಕ್ತಿ ಅಥವಾ ವೈಯಕ್ತಿಕ ಜೀವನದ ಆಧಾರದ ಮೇಲೆ ಟ್ರೋಲ್ ಮಾಡುವುದು ಸರಿಯಲ್ಲ. ಪ್ರತಿಯೊಬ್ಬ ಮಹಿಳೆಯ ಘನತೆ ಮತ್ತು ಗೌರವವು ಮೌಲ್ಯಯುತವಾಗಿದೆ ಎಂದಿದ್ದಾರೆ.

ಅಂದಹಾಗೆ, ನೌಕಾಪಡೆಯ ಅಧಿಕಾರಿ ವಿನಯ್ ನರ್ವಾಲ್ ಅವರ ಸ್ಮರಣಾರ್ಥ ಆಯೋಜಿಸಲಾದ ಸಮಾರಂಭದಲ್ಲಿ ಮಾತನಾಡಿದ ಹಿಮಾಂಶಿ, ಮುಸ್ಲಿಮರು ಅಥವಾ ಕಾಶ್ಮೀರಿಗಳ ಬಗ್ಗೆ ನನಗೆ ಯಾವುದೇ ದ್ವೇಷವಿಲ್ಲ. ನನಗೆ ಶಾಂತಿ ಮತ್ತು ನ್ಯಾಯ ಮಾತ್ರ ಬೇಕು ಎಂದು ಭಾವುಕರಾಗಿ ಹೇಳಿದರು. ಈ ಸಮಯದಲ್ಲಿ ದೇಶದ ಜನರಲ್ಲಿರುವ ಕೋಪವನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ, ಜನರು ಮುಸ್ಲಿಮರು ಅಥವಾ ಕಾಶ್ಮೀರಿಗಳ ವಿರುದ್ಧ ತಿರುಗುವುದನ್ನು ನಾನು ಬಯಸುವುದಿಲ್ಲ. ನಮಗೆ ಶಾಂತಿ ಮಾತ್ರ ಬೇಕು. ನಮಗೆ ಖಂಡಿತವಾಗಿಯೂ ನ್ಯಾಯ ಸಿಗಬೇಕು ಎಂದು ಹೇಳಿದರು. ಅಲ್ಲದೆ, ಕೋಮು ಘರ್ಷಣೆಗಳನ್ನು ಕೊನೆಗೊಳಿಸುವಂತೆ ಮನವಿ ಮಾಡಿದರು. ಅವರ ಪತಿ ವಿನಯ್ ನರ್ವಾಲ್ ಕೂಡ ಅದನ್ನೇ ಬಯಸಿದ್ದರು ಎಂದು ಹೇಳಿದರು. ಹಿಮಾಂಶಿ ಅವರು ನೀಡಿದ ಈ ಹೇಳಿಕೆಗಳಿಗಾಗಿ ಕೆಲವರು ಅವರ ವಿರುದ್ಧ ಟ್ರೋಲ್​ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಆಯೋಗ ಖಂಡಿಸಿದೆ.

ಅಂದಹಾಗೆ, ಹಿಮಾಂಶಿ ಗುರುಗ್ರಾಮದವರು. ಪಿಎಚ್‌ಡಿ ಪದವೀಧರೆ. ಕೆಲವು ವಾರಗಳ ಹಿಂದೆ ಅಂದ್ರೆ ಏಪ್ರಿಲ್ 16 ರಂದು ನೌಕಾಪಡೆಯ ಅಧಿಕಾರಿ ವಿನಯ್ ನರ್ವಾಲ್ ಅವರನ್ನು ವಿವಾಹವಾದರು. ಏಪ್ರಿಲ್ 19ರಂದು ನಡೆದ ಆರತಕ್ಷತೆಯ ನಂತರ, ಹನಿಮೂನ್‌ಗಾಗಿ ಕಾಶ್ಮೀರದ ಪಹಲ್ಗಾಮ್‌ಗೆ ಹೋದರು. ಏಪ್ರಿಲ್ 22 ರಂದು, ಹಿಮಾಂಶಿ ಅವರು ತಮ್ಮ ಪತಿಯೊಂದಿಗೆ ಪಹಲ್ಗಾಮ್​ನ ಬೈಸರನ್​ ಹುಲ್ಲುಗಾವಲಿನಲ್ಲಿ ಉತ್ತಮ ಸಮಯವನ್ನು ಕಳೆಯುತ್ತಿದ್ದಾಗ, ಬಂದೂಕುಧಾರಿಗಳು ಬಂದೂಕುಗಳಿಂದ ಗುಂಡು ಹಾರಿಸಿದರು. ವಿನಯ್ ನರ್ವಾಲ್‌ಗೆ ಗುಂಡುಗಳು ತಗುಲಿ ಸ್ಥಳದಲ್ಲೇ ಸಾವಿಗೀಡಾದರು. ಹಿಮಾಂಶಿ ತನ್ನ ಗಂಡನ ದೇಹದ ಬಳಿ ಕುಸಿದು ಬಿದ್ದು, ಕಣ್ಣೀರು ಹಾಕಿದರು. ಇದಕ್ಕೆ ಸಂಬಂಧಿಸಿದ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಹರಿಯಾಣದಲ್ಲಿ ಮಿಲಿಟರಿ ಗೌರವಗಳೊಂದಿಗೆ ವಿನಯ್ ನರ್ವಾಲ್ ಅವರ ಅಂತ್ಯಕ್ರಿಯೆ ನಡೆಯಿತು. ಮುಖ್ಯಮಂತ್ರಿ ನಯಾಬ್​ ಸಿಂಗ್​ ಸೈನಿ ಅವರೊಂದಿಗೆ ಕೇಂದ್ರ ಸಚಿವ ಖಟ್ಟರ್ ಮತ್ತು ಹಲವಾರು ನಾಯಕರು ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net