

ತೆಲಂಗಾಣ: ಹೈದರಾಬಾದ್ ಪಿಎಚ್ಡಿ ವಿದ್ಯಾರ್ಥಿ ರೋಹಿತ್ ವೇಮುಲ ಸಾವಿನ ಪ್ರಕರಣದ ತನಿಖೆಯನ್ನು ತೆಲಂಗಾಣ ಪೊಲೀಸರು ಕೊನೆಗೊಳಿಸಿದ್ದು, ಎಲ್ಲಾ ಆರೋಪಿಗಳಿಗೂ ಕ್ಲೀನ್ ಚಿಟ್ ನೀಡಿದ್ದಾರೆ. ತೆಲಂಗಾಣದ ಕಾಂಗ್ರೆಸ್ ಸರ್ಕಾರದ ಅಡಿಯಲ್ಲೇ ಎಲ್ಲಾ ಆರೋಪಿಗಳು ದೋಷಮುಕ್ತರಾಗಿದ್ದಾರೆ.
2016ರ ಜನವರಿಯಲ್ಲಿ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ರೋಹಿತ್ ವೆಮುಲಾ ಅವರ ಆತ್ಮಹತ್ಯೆ ಬಳಿಕ ವಿಶ್ವವಿದ್ಯಾನಿಲಯಗಳಲ್ಲಿ ದಲಿತರ ಮೇಲಿನ ತಾರತಮ್ಯದ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾರಣವಾಗಿತ್ತು. ರೋಹಿತ್ ವೆಮುಲಾ ದಲಿತ ವಿದ್ಯಾರ್ಥಿಯಲ್ಲ. ತನ್ನ ಜಾತಿಯ ಗುರುತು ಬಹಿರಂಗವಾಗಬಹುದು ಎಂಬ ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತೆಲಂಗಾಣ ಪೊಲೀಸರು ಹೈಕೋರ್ಟ್ಗೆ ತಿಳಿಸಿದೆ. ಹೈಕೋರ್ಟ್ ಈಗ ರೋಹಿತ್ ವೇಮುಲ ಅವರ ಕುಟುಂಬಕ್ಕೆ ಪ್ರತಿಭಟನಾ ಅರ್ಜಿಯ ರೂಪದಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸುವಂತೆ ಸೂಚಿಸಿದೆ.
ಸಿಕಂದರಾಬಾದ್ನ ಮಾಜಿ ಸಂಸದ ಬಂಡಾರು ದತ್ತಾತ್ರೇಯ, ಎಂಎಲ್ಸಿ ಎನ್. ರಾಮಚಂದರ್ ರಾವ್, ಹೈದರಾಬಾದ್ ವಿಶ್ವವಿದ್ಯಾಲಯದ ಉಪಕುಲಪತಿ ಅಪ್ಪಾ ರಾವ್, ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಎಬಿವಿಪಿ ಮುಖಂಡರು ಸೇರಿದಂತೆ ಹಲವಾರನ್ನು ಪ್ರಕರಣದ ಆರೋಪಿಗಳನ್ನಾಗಿ ಮಾಡಲಾಗಿತ್ತು.ಈಗ ಪೊಲೀಸರು ಎಲ್ಲರನ್ನು ಆರೋಪದಿಂದ ಕೈ ಬಿಟ್ಟಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ರೋಹಿತ್ ವೇಮುಲ ದಲಿತ ಎಂಬ ಕಾರಣಕ್ಕೆ ಆತನನ್ನು ಸಾಯಿಸಲಾಯಿತು ಎಂದು ಹೇಳಿಕೆ ನೀಡಿದ್ದರು. ಇದೀಗ ತೆಲಂಗಾಣದ ಕಾಂಗ್ರೆಸ್ ಸರ್ಕಾರವೇ ಆತ ದಲಿತನಲ್ಲ ಎಂದು ಕ್ಲೋಸರ್ ರಿಪೋರ್ಟ್ ಸಲ್ಲಿಸಿದೆ.
ವೇಮುಲ ಸಹೋದರ ಅಸಮಾಧಾನ: ತೆಲಂಗಾಣ ಪೊಲೀಸರು ತೆಲಂಗಾಣ ಹೈಕೋರ್ಟ್ಗೆ ವರದಿಯನ್ನು ಸಲ್ಲಿಸಿದ ಕೆಲವೇ ಗಂಟೆಗಳ ನಂತರ, ಮೃತ ವಿದ್ಯಾರ್ಥಿಯ ಸಹೋದರ ರಾಜಾ ವೇಮುಲ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಸೋದರನ ಸಾವಿಗೆ ನ್ಯಾಯ ಸಿಕ್ಕಿಲ್ಲ ಎಂದಿದ್ದಾರೆ. ಇದು ಸಂಪೂರ್ಣವಾಗಿ ತಪ್ಪು, ಒಬ್ಬ ಪೊಲೀಸ್ ಅಧಿಕಾರಿಯು ವ್ಯಕ್ತಿಯ ಜಾತಿಯನ್ನು ನಿರ್ಧರಿಸಲು ಸಾಧ್ಯವಿಲ್ಲ. ನಾಳೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಭೇಟಿ ಮಾಡಲಿದ್ದೇವೆ. ಪ್ರತಿಭಟನೆ ನಡೆಸುತ್ತೇವೆ ಎಂದು ರಾಜಾ ವೇಮುಲ ಹೇಳಿದರು.