

ನವದೆಹಲಿ: ಬಾಂಗ್ಲಾದೇಶ ವಿರುದ್ಧ ಶನಿವಾರ (ಜೂನ್ 22) ನಡೆದ ಟಿ20 ವಿಶ್ವಕಪ್ನ ಸೂಪರ್ 8 ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ದಾಖಲಿಸಿದ್ದು ಎಲ್ಲರಿಗು ತಿಳಿದಿದೆ. ಈ ಪಂದ್ಯದಲ್ಲಿ ಕುತೂಹಲಕಾರಿ ಘಟನೆಯೊಂದು ನಡೆಯಿತು. ಬಾಂಗ್ಲಾದೇಶದ ಮೊದಲ ವಿಕೆಟ್ ಪತನಗೊಂಡಾಗ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಸಿಟ್ಟಿಗೆದ್ದು ಕೇಕೆ ಹಾಕಿ ಸಂಭ್ರಮಿಸಿದರು. ಇದೇ ಮೊದಲ ಬಾರಿಗೆ ರೋಹಿತ್ ಇಷ್ಟೊಂದು ಆಕ್ರಮಣಕಾರಿಯಾಗಿ ಕಂಡರು. ಇದು ಅಭಿಮಾನಿಗಳಲ್ಲೂ ಬಹಳ ಅಚ್ಚರಿ ಮೂಡಿಸಿತು.
ಹಿಟ್ಮ್ಯಾನ್ ಹೀಗೆ ಸಂಭ್ರಮಿಸಲು ಭಾರತದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿಯೇ ಕಾರಣ ಎಂಬುದು ಎಲ್ಲರ ಅಭಿಪ್ರಾಯವಾಗಿದೆ. ಈ ಕುರಿತು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಆದರೆ, ತಮ್ಮ ಸಂಭ್ರಮಕ್ಕೆ ವಿರಾಟ್ ಕಾರಣರಲ್ಲ ಎಂದು ರೋಹಿತ್ ಸ್ಪಷ್ಟಪಡಿಸಿದ್ದಾರೆ.
ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದ ನಂತರ ಬಾಂಗ್ಲಾದೇಶದ ತಂಜಿಮ್ ಹಸನ್ ಸಾಕಿಬ್ ಅವರು ದೊಡ್ಡ ಮಟ್ಟದಲ್ಲಿ ಸಂಭ್ರಮಾಚರಣೆ ಮಾಡಿದರು. ವಿರಾಟ್ನತ್ತ ಆವೇಶದಿಂದ ನೋಡುತ್ತಾ ಜೋರಾಗಿ ಕೂಗಿ ಸಂಭ್ರಮಿಸಿದರು. ಬಳಿಕ ಬಾಂಗ್ಲಾದೇಶದ ಬ್ಯಾಟಿಂಗ್ ವೇಳೆ ಮೊದಲ ವಿಕೆಟ್ (ಲಿಟ್ಟನ್ ದಾಸ್) ಬಿದ್ದಾಗ ರೋಹಿತ್ ಶರ್ಮ ಕೋಪದಿಂದ ಕೇಕೆ ಹಾಕಿ ಸಂಭ್ರಮಿಸಿದರು.
ಕೊಹ್ಲಿ ವಿಕೆಟ್ ಸಂಭ್ರಮಿಸಿದ್ದಕ್ಕೆ ರೋಹಿತ್ ಸೇಡು ತೀರಿಸಿಕೊಂಡರು ಎಂದು ಜಾಲತಾಣದಲ್ಲಿ ಹೇಳಲಾಗಿದೆ. ಆದರೆ, ನಿಜವಾದ ಕಾರಣದ ಬಗ್ಗೆ ರೋಹಿತ್ ಸ್ಪಷ್ಟನೆ ನೀಡಿದ್ದಾರೆ. ವಿಕೆಟ್ ಬೀಳುವ ಮೊದಲು ಹಾರ್ದಿಕ್ ಪಾಂಡ್ಯ ಜೊತೆ ಲಿಟ್ಟನ್ ದಾಸ್ ಬಗ್ಗೆ ಚರ್ಚಿಸಿದ್ದೆ. ವಿಶೇಷ ಯೋಜನೆ ಸಿದ್ಧಪಡಿಸಿದೆವು. ಅದಕ್ಕೆ ತಕ್ಕಂತೆ ಫೀಲ್ಡಿಂಗ್ ಸೆಟ್ ಮಾಡಲಾಗಿತ್ತು. ಆ ತಂತ್ರ ಫಲ ನೀಡಿದ್ದರಿಂದ ಆ ಉತ್ಸಾಹದಲ್ಲಿ ಒಂದಷ್ಟು ಕೇಕೆ ಹಾಕಿ ಸಂಭ್ರಮಿಸಿದ್ದಾಗಿ ವಿವರಿಸಿದರು.
ಸೂಪರ್ 8ರ ಹಂತದಲ್ಲಿ ಆಡಿರುವ ಎರಡೂ ಪಂದ್ಯಗಳನ್ನು ಗೆದ್ದಿರುವ ಭಾರತ, ಗ್ರೂಪ್ 1ರಂದು ಅಗ್ರಸ್ಥಾನದಲ್ಲಿದೆ. ಇಂದು ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಕಣಕ್ಕಿಳಿಯಲಿದೆ. ಈಗಾಗಲೇ ಅಫ್ಘಾನಿಸ್ತಾನದ ವಿರುದ್ಧ ಸೋತು ಸುಣ್ಣವಾಗಿರುವ ಆಸ್ಟ್ರೇಲಿಯಾ, ಸೆಮಿಫೈನಲ್ಗೆ ಹೋಗಬೇಕಾದರೆ ಟೀಮ್ ಇಂಡಿಯಾ ವಿರುದ್ಧ ಗೆಲ್ಲಲೇಬೇಕಿದೆ. ಇತ್ತ ಟೀಮ್ ಇಂಡಿಯಾ ಈಗಾಗಲೇ ಸೆಮೀಸ್ಗೆ ಸ್ಥಾನ ಪಡೆದಿದೆ. (ಏಜೆನ್ಸೀಸ್)