

ನವದೆಹಲಿ: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ತುಂಬಾ ಮರೆವು ಇದ್ದಂತೆ ಕಾಣುತ್ತದೆ. ಇದು ಈಗಾಗಲೇ ಹಲವು ಬಾರಿ ಸಾಬೀತಾಗಿದೆ. ನಿಜ ಜೀವನದಲ್ಲಿ ಮಾತ್ರವಲ್ಲ, ವೃತ್ತಿ ಜೀವನದಲ್ಲೂ ತನ್ನ ಮರೆವಿನ ಮೂಲಕವೇ ಹಿಟ್ಮ್ಯಾನ್ ಸಾಕಷ್ಟು ಬಾರಿ ಸುದ್ದಿಯಾಗಿದ್ದಾರೆ.
ಒಮ್ಮೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ವೇಳೆ ಅವರು ಟಾಸ್ ಮಾಡಲು ಹೋದಾಗ, ಪ್ಲೇಯಿಂಗ್ ಇಲೆವೆನ್ ಅನ್ನು ಮರೆತುಬಿಟ್ಟರು. ತಂಡದಲ್ಲಿರುವ ಹೊಸ ಆಟಗಾರರು ಯಾರು? ತಾನು ಯಾರನ್ನು ತೆಗೆದಿದ್ದೇನೆ ಎಂಬುದನ್ನು ಮರೆತಿದ್ದರಿಂದ ಲೈವ್ನಲ್ಲಿ ತೊಂದರೆಗೆ ಸಿಲುಕಿದರು. ಇದನ್ನು ನೋಡಿದ ಕಾಮೆಂಟೇಟರ್ ಹಾಗೂ ಕಿವೀಸ್ ನಾಯಕ ಹಾಗೂ ಅಭಿಮಾನಿಗಳು ಕೂಡ ನಗೆಗಡಲಲ್ಲಿ ತೇಲಿದರು.
ಅದೇ ರೀತಿ ಟಿ20 ವಿಶ್ವಕಪ್ ಸಂದರ್ಭದಲ್ಲಿ ಪಾಕ್ ವಿರುದ್ಧದ ಲೀಗ್ ಪಂದ್ಯದ ವೇಳೆ ಜೇಬಿನಲ್ಲೇ ನಾಣ್ಯವನ್ನು ಇಟ್ಟುಕೊಂಡು ಟಾಸ್ ಮಾಡುವಾಗ ನಾಣ್ಯಕ್ಕಾಗಿ ನಾಯಕ ರೋಹಿತ್ ಶರ್ಮ ಹುಡುಕಾಡಿದ ವಿಡಿಯೋ ವೈರಲ್ ಆಗಿತ್ತು. ಸದಾ ಕ್ರಿಕೆಟ್ ಪಂದ್ಯಗಳಲ್ಲಿ ಬಿಜಿಯಾಗಿರುವ ರೋಹಿತ್, ಹೋಟೆಲ್ ಕೊಠಡಿಗಳಲ್ಲಿ ಫೋನ್ ಮತ್ತು ಪಾಸ್ಪೋರ್ಟ್ಗಳನ್ನು ಮರೆತಿರುವ ಘಟನೆಗಳೂ ನಡೆದಿವೆ.
ರೋಹಿತ್ ಗಜನಿಯಂತೆ ಬದಲಾಗುತ್ತಿದ್ದಾರೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಏಕೆಂದರೆ, ಹಿಟ್ಮ್ಯಾನ್ ತನ್ನ ಪತ್ನಿ ರಿತಿಕಾ ಸಾಜ್ದೇಹ್ ಮತ್ತು ಮಗಳು ಸಮೈರಾ ಅವರೊಂದಿಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಬಳಿಕ ಹೊರಬಂದು ಮಾಧ್ಯಮದವರನ್ನು ಭೇಟಿ ಮಾಡಿ ಕಾರು ಹತ್ತಿ ಹೊರಟು ಹೋದರು. ಆದರೆ ಮನೆಗೆ ಹೋಗುವ ಧಾವಂತದಲ್ಲಿ ರೋಹಿತ್ ಅವರು ತನ್ನ ಬ್ಯಾಗ್ಗಳನ್ನು ಮರೆತುಬಿಟ್ಟರು. ಕಾರನ್ನು ಹತ್ತಿದ ನಂತರ, ತನ್ನ ಬ್ಯಾಗ್ಗಳನ್ನು ನೆನಪಿಸಿಕೊಂಡು, ಅದನ್ನು ತರಲು ತನ್ನ ಸಿಬ್ಬಂದಿಗೆ ಹೇಳಿದರು. ಕಾರಿನಲ್ಲಿ ಹಿಟ್ಮ್ಯಾನ್ ಪಕ್ಕದಲ್ಲಿದ್ದ ಅವರ ಪತ್ನಿ ರಿತಿಕಾ, ಇದನ್ನು ನೋಡಿ ಒಂದು ಕ್ಷಣ ಶಾಕ್ ಆಗಿ, ವಿಚಿತ್ರವಾಗಿ ಪ್ರತಿಕ್ರಿಯೆ ನೀಡಿದರು.
ಬ್ಯಾಗ್ಗಳನ್ನು ತರುವಂತೆ ಸಿಬ್ಬಂದಿಗೆ ಆದೇಶಿಸಿದ ರೋಹಿತ್, ಅಲ್ಲಿಂದ ಹೊರಟು ಹೋದರು. ಈ ಸಂಪೂರ್ಣ ಘಟನೆ ಮಾಧ್ಯಮದ ಕ್ಯಾಮರಾಗಳಲ್ಲಿ ದಾಖಲಾಗಿದ್ದು, ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇದನ್ನು ನೋಡಿದ ನೆಟ್ಟಿಗರು ರೋಹಿತ್ ಗಜನಿಯಂತೆ ಬದಲಾಗುತ್ತಿದ್ದಾರೆ ಎಂದು ಟ್ರೋಲ್ ಮಾಡುತ್ತಿದ್ದಾರೆ.
ಸದ್ಯ ಮುಂಬೈನಲ್ಲಿರುವ ಹಿಟ್ಮ್ಯಾನ್ ಇನ್ನೆರಡು ದಿನದಲ್ಲಿ ಶ್ರೀಲಂಕಾಕ್ಕೆ ತೆರಳಲಿದ್ದು, ಮೂರು ಏಕದಿನ ಪಂದ್ಯಗಳನ್ನು ಆಡಲಿದ್ದಾರೆ. ಟಿ20 ವಿಶ್ವಕಪ್ ಬಳಿಕ ಇದು ಅವರ ಮೊದಲ ಸರಣಿಯಾಗಿದೆ. ಮುಂದಿನ ವರ್ಷ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಹೀಗಾಗಿ ಮುಂಬರುವ ಏಕದಿನ ಪಂದ್ಯಗಳು ತಂಡಕ್ಕೆ ಅತ್ಯಂತ ನಿರ್ಣಾಯಕವಾಗಲಿದೆ. (ಏಜೆನ್ಸೀಸ್)