ನಿವೃತ್ತಿ ಪ್ರಶ್ನೆಗಳಿಂದ ಸದ್ಯ ದೂರ! 3ನೇ ಏಕದಿನ ಪಂದ್ಯದಲ್ಲಿ ಮತ್ತೊಂದು ದಾಖಲೆಯತ್ತ 'ಹಿಟ್​ಮ್ಯಾನ್​' | Rohit Sharma

rohit
Published on

ನವದೆಹಲಿ: ಅ.23ರಂದು ಅಡಿಲೇಡ್ ಕ್ರೀಡಾಂಗಣದಲ್ಲಿ ನಡೆದ ಆತಿಥೇಯ ಆಸೀಸ್​ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮ (Rohit Sharma) 73 ರನ್​ಗಳ ಅದ್ಭುತ ಇನ್ನಿಂಗ್ಸ್ ನೀಡಿದರು. ಶತಕದಿಂದ ವಂಚಿತರಾದರೂ ಅಪರೂಪದ ದಾಖಲೆಗೆ ಹಿಟ್​ಮ್ಯಾನ್​ ಸಾಕ್ಷಿಯಾದರು. ಮೊದಲ ಪಂದ್ಯದಲ್ಲಿ ಕಳಪೆ ಪ್ರದರ್ಶನದಿಂದ ನಿವೃತ್ತಿ ಪ್ರಶ್ನೆಗಳು ಜೋರಾಗಿದ್ದವು. ಆದರೆ, ದ್ವಿತೀಯ ಮ್ಯಾಚ್​ನಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿ, ಸದ್ಯದ ಮಟ್ಟಿಗೆ ನಿವೃತ್ತಿ ಪ್ರಶ್ನೆಗಳಿಂದ ದೂರ ಉಳಿದಿದ್ದಾರೆ. ​

ಶುಭಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಒಂದೇ ಓವರ್‌ನಲ್ಲಿ ಔಟಾದ ಬಳಿಕ, ತಂಡದ ಜವಾಬ್ದಾರಿಯನ್ನು ಹೊತ್ತ ರೋಹಿತ್​, 97 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್‌ ಸಹಾಯದಿಂದ 73 ರನ್ ಬಾರಿಸಿದರು. ಈ ಮೂಲಕ ತಾವು ಯಾಕೆ 'ಹಿಟ್​ಮ್ಯಾನ್' ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ಮೊದಲ ಎರಡು ಏಕದಿನ ಪಂದ್ಯಗಳನ್ನು ಸೋತಿರುವ ಭಾರತ, ಒಂದು ಪಂದ್ಯ ಬಾಕಿ ಉಳಿದಿರುವಂತೆಯೇ ಸರಣಿಯನ್ನು ಕಳೆದುಕೊಂಡಿದೆ. ಈಗ ಮೂರನೇ ಏಕದಿನ ಪಂದ್ಯ ಶನಿವಾರ (ಅ.25) ಸಿಡ್ನಿಯಲ್ಲಿ ನಡೆಯಲಿದ್ದು, ಭಾರತಕ್ಕೆ ಕ್ಲೀನ್​ ಸ್ವೀಪ್​ನಿಂದ ಬಚಾವ್ ಆಗಲು ಒಂದು ಅವಕಾಶವಿದೆ.

ಆರು ಸಿಕ್ಸರ್​...

ಈ ಪಂದ್ಯಕ್ಕೂ ಮುನ್ನ, ರೋಹಿತ್ ಶರ್ಮ ಮತ್ತೊಂದು ಅಪರೂಪದ ದಾಖಲೆಗೆ ಹತ್ತಿರವಾಗಿದ್ದಾರೆ. ಈ ಪಂದ್ಯದಲ್ಲಿ ರೋಹಿತ್ ಏನಾದರೂ ಆರು ಸಿಕ್ಸರ್‌ಗಳನ್ನು ಬಾರಿಸಿದರೆ, ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಈ ದಾಖಲೆ ಪ್ರಸ್ತುತ ಪಾಕಿಸ್ತಾನಿ ಆಟಗಾರ ಶಾಹಿದ್ ಅಫ್ರಿದಿ ಹೆಸರಿನಲ್ಲಿದೆ. ಅಫ್ರಿದಿ 398 ಏಕದಿನ ಪಂದ್ಯಗಳಲ್ಲಿ 351 ಸಿಕ್ಸರ್‌ ಹೊಡೆದಿದ್ದಾರೆ. ರೋಹಿತ್​, 275 ಏಕದಿನ ಪಂದ್ಯಗಳಲ್ಲಿ 346 ಸಿಕ್ಸರ್‌ ಬಾರಿಸಿದ್ದಾರೆ. ಈ ಪಟ್ಟಿಯಲ್ಲಿ ಕ್ರಿಸ್ ಗೇಲ್, ಜಯಸೂರ್ಯ ಮತ್ತು ಎಂ.ಎಸ್. ಧೋನಿ ನಂತರದ ಸ್ಥಾನದಲ್ಲಿದ್ದಾರೆ.

ಏಕದಿನ ಪಂದ್ಯಗಳಲ್ಲಿ ಅತಿಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರರಿವರು

1. ಶಾಹಿದ್ ಅಫ್ರಿದಿ (ಪಾಕಿಸ್ತಾನ): 398 ಪಂದ್ಯ, 351 ಸಿಕ್ಸರ್‌

2. ರೋಹಿತ್ ಶರ್ಮ (ಭಾರತ): 275 ಪಂದ್ಯ, 346 ಸಿಕ್ಸರ್‌

3. ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್): 301 ಪಂದ್ಯ, 331 ಸಿಕ್ಸರ್‌

4. ಸನತ್ ಜಯಸೂರ್ಯ (ಶ್ರೀಲಂಕಾ): 445 ಪಂದ್ಯ, 270 ಸಿಕ್ಸರ್‌

5. ಎಂ.ಎಸ್. ಧೋನಿ (ಭಾರತ): 350 ಎಸೆತ, 229 ಸಿಕ್ಸರ್‌

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net