

Rohit Sharma: ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳುವ ಮೂಲಕ ತಮ್ಮ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದ ದಿಗ್ಗಜ ಬ್ಯಾಟರ್ ರೋಹಿತ್ ಶರ್ಮ, ಬಿಸಿಸಿಐಗೂ ತಮ್ಮ ದಿಢೀರ್ ನಿರ್ಧಾರದಿಂದ ಅಚ್ಚರಿಗೊಳಿಸಿದ್ದಾರೆ.
ಇನ್ನೇನು ಐಪಿಎಲ್ ಮುಗಿದ ತಕ್ಷಣವೇ ಜೂನ್ನಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಸರಣಿಗೆ ಭಾರತ ತಂಡದ ನಾಯಕನಾಗಿ ರೋಹಿತ್ ಮುಂದುವರಿಯಲಿದ್ದಾರೆ ಎಂದೇ ಭಾವಿಸಿದ್ದ ಕ್ರಿಕೆಟ್ ಪ್ರಿಯರಿಗೆ ಇದೀಗ ಅವರ ನಿರ್ಧಾರ ಆಶ್ಚರ್ಯ ತಂದಿದೆ. ಬಿಸಿಸಿಐ ಕೂಡ ಕೆಲವು ದಿನಗಳ ಹಿಂದೆಯಷ್ಟೇ ತಂಡ ರಚನೆ ಹಾಗೂ ನಾಯಕನ ಆಯ್ಕೆ ಬಗ್ಗೆ ಲೆಕ್ಕಾಚಾರಗಳನ್ನು ನಡೆಸಿತ್ತು. ಅಸಲಿಗೆ ಆಯ್ಕೆದಾರರ ಪಟ್ಟಿಯಲ್ಲಿ ರೋಹಿತ್ ಶರ್ಮ ಹೆಸರೂ ಇತ್ತು ಎಂಬುದು ಗಮನಾರ್ಹ.
ರೋಹಿತ್ ಶರ್ಮ ನಿವೃತ್ತಿ ಬೆನ್ನಲ್ಲೇ ಈಗ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಯಾರು ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ? ಬಿಸಿಸಿಐ ಯಾರಿಗೆ ಅಧಿಕಾರ ವಹಿಸಲಿದೆ ಎಂಬುದರ ಕುರಿತು ಕ್ರಿಕೆಟ್ ಅಭಿಮಾನಿಗಳಲ್ಲಿ ಆಸಕ್ತಿದಾಯಕ ಚರ್ಚೆ ಭುಗಿಲೆದ್ದಿದೆ. ಪ್ರಸ್ತುತ ಈ ಪಟ್ಟಿಯಲ್ಲಿ ನಾಲ್ಕು ಹೆಸರುಗಳು ಮುಂಚೂಣಿಯಲ್ಲಿವೆ. ಟೀಮ್ ಇಂಡಿಯಾ ಮೂಲಗಳ ಮಾಹಿತಿಯ ಪ್ರಕಾರ, ಜಸ್ಪ್ರೀತ್ ಬುಮ್ರಾ, ಕೆ.ಎಲ್. ರಾಹುಲ್, ಶುಭಮನ್ ಗಿಲ್ ಮತ್ತು ರಿಷಭ್ ಪಂತ್ ಅವರ ಹೆಸರುಗಳು ಬಿಸಿಸಿಐ ಪರಿಗಣನೆಯಲ್ಲಿವೆ ಎನ್ನಲಾಗಿದೆ.
ಕಳೆದ ವರ್ಷ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಆಸೀಸ್ ವಿರುದ್ಧ ಸರಣಿ ಸೋತ ಭಾರತ ತಂಡವನ್ನು ರೋಹಿತ್ ಶರ್ಮ ಕ್ಯಾಪ್ಟನ್ ಆಗಿ ಮುನ್ನಡೆಸಿದ್ದರು. ರೋಹಿತ್ ಶರ್ಮ ಅನುಪಸ್ಥಿತಿಯಲ್ಲಿ ಬುಮ್ರಾ ಎರಡು ಪಂದ್ಯಗಳಿಗೆ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು. ಬುಮ್ರಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ಮೊದಲ ಟೆಸ್ಟ್ ಗೆದ್ದಿತು. ಸರಣಿಯ ಉಳಿದ ಪಂದ್ಯಗಳಲ್ಲಿ ಬುಮ್ರಾ ಉಪನಾಯಕನಾಗಿ ಕಾಣಿಸಿಕೊಂಡರು. ಆದಾಗ್ಯೂ, ಫಿಟ್ನೆಸ್ ಸಮಸ್ಯೆಗಳಿಂದಾಗಿ ಕೆಲವು ಪಂದ್ಯಗಳನ್ನು ಆಡಲು ಬುಮ್ರಾ ತೀರ ಪರದಾಡುತ್ತಿರುವ ಹಿನ್ನೆಲೆ ಅವರಿಗೆ ನಾಯಕತ್ವ ಕೊಡುವ ಬಗ್ಗೆ ಆಯ್ಕೆದಾರರು ಯೋಚಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
ಇನ್ನು ರಿಷಭ್ ಪಂತ್, ಕೆ.ಎಲ್. ರಾಹುಲ್ ಮತ್ತು ಶುಭಮನ್ ಗಿಲ್ ಅವರ ಹೆಸರುಗಳು ಸಹ ಟೆಸ್ಟ್ ನಾಯಕತ್ವದ ರೇಸ್‌ನಲ್ಲಿವೆ. ಆದಾಗ್ಯೂ, ಬ್ಯಾಟಿಂಗ್‌ನಲ್ಲಿ ಸ್ಥಿರತೆ ಕೊರತೆಯಿಂದಾಗಿ ರಿಷಭ್ ಪಂತ್‌ಗೆ ಹೆಚ್ಚುವರಿ ಜವಾಬ್ದಾರಿಗಳನ್ನು ನೀಡಲು ಆಯ್ಕೆದಾರರು ಆಸಕ್ತಿ ಹೊಂದಿಲ್ಲ ಎನ್ನಲಾಗಿದೆ. ಗುಜರಾತ್ ಟೈಟನ್ಸ್ ತಂಡದ ನಾಯಕನಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿರುವ ಶುಭಮನ್ ಗಿಲ್, ತಮ್ಮ ಬ್ಯಾಟಿಂಗ್ ಪ್ರದರ್ಶನದಲ್ಲಿಯೂ ಉತ್ತಮ ಸ್ಕೋರ್ ಗಳಿಸಿ, ಎಲ್ಲರ ಗಮನ ಸೆಳೆದಿದ್ದಾರೆ. ಶುಭಮನ್ ಗಿಲ್ ಅವರನ್ನು ಟೆಸ್ಟ್ ಕ್ಯಾಪ್ಟನ್ ಆಗಿ ಆಯ್ಕೆ ಮಾಡುವ ಸಾಧ್ಯತೆಗಳು ಹೆಚ್ಚಿವೆ.
ಆದಾಗ್ಯೂ, ಗಿಲ್ಗೆ ಈಗ 25 ವರ್ಷ ವಯಸ್ಸು. ಭವಿಷ್ಯದಲ್ಲಿಯೂ ಅವರನ್ನು ನಾಯಕನನ್ನಾಗಿ ಮಾಡುವುದು ಒಳ್ಳೆಯದು ಎಂದು ಆಯ್ಕೆದಾರರು ಅಭಿಪ್ರಾಯಪಟ್ಟಿದ್ದಾರೆಂದು ಹೇಳಲಾಗಿದೆ. ಮತ್ತೊಂದೆಡೆ, ಕೆ.ಎಲ್. ರಾಹುಲ್ ಕೂಡ ತಮ್ಮ ಬ್ಯಾಟಿಂಗ್‌ನಲ್ಲಿ ಸ್ಥಿರತೆ ಕಾಪಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ, ಆಯ್ಕೆದಾರರು ನಾಯಕತ್ವದ ಜವಾಬ್ದಾರಿಯನ್ನು ಈ ನಾಲ್ವರಲ್ಲಿ ಯಾರಿಗೆ ಹಸ್ತಾರಿಸುತ್ತಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ತಿಳಿಯಬೇಕಿದೆ,(ಏಜೆನ್ಸೀಸ್).