

ನವದೆಹಲಿ: ಈಗಾಗಲೇ ಟಿ-20 ಕ್ರಿಕೆಟ್ ತಂಡದ ನಾಯಕನಾಗಿರುವ ಹಿಟ್ ಮ್ಯಾನ್ ರೋಹಿತ್ ಶರ್ಮಾರನ್ನು ಇದೀಗ ಏಕದಿನ ತಂಡದ ನಾಯಕನನ್ನಾಗಿ ಬಿಸಿಸಿಐ ಆಯ್ಕೆ ಮಾಡಿದ್ದು, ಟ್ವಿಟ್ಟರ್ನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದೆ.
ಈ ಮೂಲಕ ಏಕದಿನ ಹಾಗೂ ಟಿ-20 ತಂಡಕ್ಕೆ ಹಿಟ್ಮ್ಯಾನ್ ಅವರಿಗೆ ನಾಯಕನ ಸ್ಥಾನ ನೀಡಲಾಗಿದೆ. ಉಳಿದಂತೆ ಟೆಸ್ಟ್ ತಂಡದಲ್ಲಿ ಉಪನಾಯಕನಾಗಿ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಟಿ-20 ವಿಶ್ವಕಪ್ ಮುಕ್ತಾಯಗೊಳ್ಳುತ್ತಿದ್ದಂತೆ ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದಿದ್ದರು. ಇದರ ಬೆನ್ನಲ್ಲೇ ಕೊಹ್ಲಿ ಏಕದಿನ ತಂಡದ ನಾಯಕತ್ವಕ್ಕೂ ವಿದಾಯ ಘೋಷಣೆ ಮಾಡಲಿದ್ದಾರೆ ಎಂಬ ಮಾತುಗಳು ಹರಿದಾಡಿದ್ದವು. ಇದೀಗ ಅಧಿಕೃತವಾಗಿ ಬಿಸಿಸಿಐ ಮಾಹಿತಿ ಹೊರಹಾಕಿದ್ದು, ಏಕದಿನ ತಂಡದ ನಾಯಕತ್ವದ ಸ್ಥಾನದಿಂದಲೂ ಅವರನ್ನ ಕೆಳಗಿಳಿಸಲಾಗಿದೆ.
ವಿರಾಟ್ ಕೊಹ್ಲಿ ಇದೀಗ ಟೆಸ್ಟ್ ತಂಡದ ನಾಯಕನಾಗಿ ಮಾತ್ರ ಮುಂದುವರೆಯಲಿದ್ದಾರೆ. ಇವರ ಉಪನಾಯಕನಾಗಿ ರೋಹಿತ್ ಶರ್ಮಾ ಸಾಥ್ ನೀಡಲಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾ ಡಿಸೆಂಬರ್ 26ರಿಂದ ಟೆಸ್ಟ್ನಲ್ಲಿ ಭಾಗಿಯಾಗಲಿದ್ದು, ತದನಂತರ ಏಕದಿನ ಸರಣಿಯಲ್ಲಿ ಭಾಗಿಯಾಗಲಿದೆ.