

ಮುಂಬೈ: ಐದು ಬಾರಿ ಐಪಿಎಲ್ ಟ್ರೋಫಿ ಗೆದ್ದುಕೊಟ್ಟಿರುವ ಭರ್ಜರಿ ಯಶಸ್ಸಿನ ನಡುವೆಯೂ ರೋಹಿತ್ ಶರ್ಮ ಅವರನ್ನು ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದಿಂದ ಅಕಾಲಿಕವಾಗಿ ಕೆಳಗಿಳಿಸಿರುವುದಕ್ಕೆ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಲಾಂತರ ಸಂಖ್ಯೆಯಲ್ಲಿ ಅನ್ಫಾಲೋ ಮಾಡುವ ಮೂಲಕವೂ ಅಭಿಮಾನಿಗಳು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಮುಂಬೈ ತಂಡದ ಕೆಲ ಸಹ ಆಟಗಾರರೂ ಪರೋಕ್ಷವಾಗಿ ಬೆಂಬಲ ಸೂಚಿಸಿದ್ದಾರೆ.
ಇತ್ತೀಚೆಗೆ ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್ನಿಂದ ಮುಂಬೈ ತಂಡಕ್ಕೆ ಮರಳಿದಾಗ ಸಂಭ್ರಮಿಸಿದ್ದ ಅಭಿಮಾನಿಗಳಿಗೆ, ರೋಹಿತ್ರನ್ನು ದಿಢೀರನೆ ನಾಯಕತ್ವದಿಂದ ಕೆಳಗಿಳಿಸಿರುವುದು ತೀವ್ರ ಆಘಾತ ನೀಡಿದೆ. 2011ರಿಂದ ಮುಂಬೈ ತಂಡದ ಭಾಗವಾಗಿರುವ ರೋಹಿತ್, 2013ರಲ್ಲಿ ಮೊದಲ ಬಾರಿ ನಾಯಕತ್ವ ವಹಿಸಿಕೊಂಡಾಗಲೇ ತಂಡ ಮೊದಲ ಬಾರಿ ಐಪಿಎಲ್ ಟ್ರೋಫಿ ಗೆದ್ದಿತ್ತು. ನಂತರದಲ್ಲಿ 6 ವರ್ಷಗಳ ಅಂತರದಲ್ಲಿ ಮತ್ತೆ 4 ಟ್ರೋಫಿ ಗೆದ್ದುಕೊಟ್ಟಿದ್ದರು.
ಹಿಂಬಾಲಕರ ನಷ್ಟ, ಸಿಎಸ್ಕೆಗೆ ಅಗ್ರ ಪಟ್ಟ ಬಿಟ್ಟುಕೊಟ್ಟ ಮುಂಬೈ
ರೋಹಿತ್ ನಾಯಕತ್ವ ಕಳೆದುಕೊಂಡ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ತಂಡ ಇನ್ಸ್ಟಾಗ್ರಾಂನಲ್ಲಿ ಸುಮಾರು 5 ಲಕ್ಷ ಹಿಂಬಾಲಕರನ್ನು ಕಳೆದುಕೊಂಡಿದೆ ಎನ್ನಲಾಗುತ್ತಿದೆ. ಇದರಿಂದ ಅತಿಹೆಚ್ಚು ಹಿಂಬಾಲರನ್ನು ಹೊಂದಿರುವ ಐಪಿಎಲ್ ತಂಡಗಳ ಪೈಕಿ ಮುಂಬೈಯನ್ನು ಹಿಂದಿಕ್ಕಿ ಚೆನ್ನೆ$ ಸೂಪರ್ಕಿಂಗ್ಸ್ ತಂಡ ಅಗ್ರಸ್ಥಾನಕ್ಕೇರಿದೆ. ಸಿಎಸ್ಕೆ 13.1 ದಶಲಕ್ಷ ಹಿಂಬಾಲಕರನ್ನು ಹೊಂದಿದ್ದರೆ, ಮುಂಬೈ ಹಿಂಬಾಲಕರ ಸಂಖ್ಯೆ ಈಗ 13.2 ಲಕ್ಷದಿಂದ 12.7 ದಶಲಕ್ಷಕ್ಕೆ ಕುಸಿದಿದೆ. ಎಕ್ಸ್ನಲ್ಲೂ ಮುಂಬೈ ತಂಡದ ಹಿಂಬಾಲಕರ ಸಂಖ್ಯೆ 8.6ರಿಂದ 8.2 ದಶಲಕ್ಷಕ್ಕೆ ಇಳಿದಿದೆ. ಆದರೆ ಇದರಲ್ಲಿ ಸಿಎಸ್ಕೆ ಈಗಾಗಲೆ 10.1 ದಶಲಕ್ಷ ಹಿಂಬಾಕರೊಂದಿಗೆ ಅಗ್ರಸ್ಥಾನದಲ್ಲಿತ್ತು.
ಸೂರ್ಯ ಹೃದಯ ಭಗ್ನ!
ರೋಹಿತ್ರನ್ನು ನಾಯಕತ್ವದಿಂದ ಕೆಳಗಿಳಿಸಿದ ಬೆನ್ನಲ್ಲೇ ಮುಂಬೈ ತಂಡದ ಸಹ&ಆಟಗಾರ ಸೂರ್ಯಕುಮಾರ್ ಯಾದವ್ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹೃದಯ ಭಗ್ನಗೊಂಡಿರುವ ಇಮೋಜಿ ಪ್ರಕಟಿಸಿದ್ದಾರೆ. ಈ ಮೂಲಕ, ರೋಹಿತ್ ನಾಯಕತ್ವ ಕಸಿದಿದ್ದಕ್ಕೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೂರ್ಯಕುಮಾರ್ ಪತ್ನಿ ದೇವಿಶಾ ಶೆಟ್ಟಿ ಕೂಡ, "ನೀವು ಹೇಗೆ ಜನರನ್ನು ನಡೆಸಿಕೊಳ್ಳುತ್ತೀರಿ ಎಂಬುದನ್ನು ಸದಾ ನೆನಪಿಟ್ಟುಕೊಳ್ಳಲಾಗುತ್ತದೆ' ಎಂಬ ಸಂದೇಶದ ಪೋಸ್ಟ್ ಮೂಲಕ ರೋಹಿತ್ ಬೆನ್ನಿಗೆ ನಿಂತಂತಿದೆ.
ಜೆರ್ಸಿ, ಧ್ವಜಕ್ಕೆ ಬೆಂಕಿ!
ಮುಂಬೈ ಇಂಡಿಯನ್ಸ್ ತಂಡದ ಜೆರ್ಸಿ, ಧ್ವಜವನ್ನು ಸುಡುವ ವಿಡಿಯೋಗಳನ್ನು ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕವೂ ಕೆಲ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.