

ದುಬೈ: ವಿಶ್ವಕಪ್ನಲ್ಲಿ ಭಾರತ ತಂಡವನ್ನು ದಿಟ್ಟವಾಗಿ ಮುನ್ನಡೆಸುವ ಜತೆಗೆ ಬ್ಯಾಟಿಂಗ್ನಲ್ಲೂ ಮಿಂಚುತ್ತಿರುವ ನಾಯಕ ರೋಹಿತ್ ಶರ್ಮ ಐಸಿಸಿ ಏಕದಿನ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ 5 ಸ್ಥಾನ ಬಡ್ತಿ ಸಂಪಾದಿಸಿದ್ದು, 6ನೇ ಸ್ಥಾನ ಅಲಂಕರಿಸಿದ್ದಾರೆ. ಶುಭಮಾನ್ ಗಿಲ್ 2ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಇದರಿಂದ ಟೀಮ್ ಇಂಡಿಯಾದ ಇಬ್ಬರೂ ಆರಂಭಿಕರು ಅಗ್ರ 10ರೊಳಗೆ ಸ್ಥಾನ ಸಂಪಾದಿಸಿದ ವಿಶೇಷ ಸಾಧನೆ ದಾಖಲಾಗಿದೆ.
ವಿಶ್ವಕಪ್ನಲ್ಲಿ ಸತತ 2 ಶತಕ ಸಿಡಿಸಿದ ದಣ ಆಫ್ರಿಕಾದ ವಿಕೆಟ್ ಕೀಪರ್-ಬ್ಯಾಟರ್ ಕ್ವಿಂಟನ್ ಡಿಕಾಕ್ ಕೂಡ 3 ಸ್ಥಾನ ಬಡ್ತಿ ಪಡೆದಿದ್ದು, 3ನೇ ಸ್ಥಾನಕ್ಕೇರಿದ್ದಾರೆ. ಪಾಕ್ ನಾಯಕ ಬಾಬರ್ ಅಜಮ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಜತೆಗೆ 2ನೇ ಸ್ಥಾನದಲ್ಲಿರುವ ಗಿಲ್ಗಿಂತ ಮುನ್ನಡೆಯನ್ನು 18 ಅಂಕಗಳಿಗೆ ವಿಸ್ತರಿಸಿಕೊಂಡಿದ್ದಾರೆ.
ಬೌಲಿಂಗ್ನಲ್ಲಿ ಅಗ್ರಸ್ಥಾನದಲ್ಲಿರುವ ಜೋಶ್ ಹ್ಯಾಸಲ್ವುಡ್ಗಿಂತ (660) ಕಿವೀಸ್ ವೇಗಿ ಟ್ರೆಂಟ್ ಬೌಲ್ಟ್ (659) ಕೇವಲ 1 ಅಂಕ ಹಿಂದಿದ್ದಾರೆ. 3ನೇ ಸ್ಥಾನದಲ್ಲಿರುವ ಭಾರತದ ವೇಗಿ ಮೊಹಮದ್ ಸಿರಾಜ್ (656) ಕೂಡ ಕೇವಲ 3 ಅಂಕಗಳಿಂದ ಹಿಂದಿದ್ದಾರೆ. 4ನೇ ಸ್ಥಾನದಲ್ಲಿರುವ ಆಫ್ಘನ್ ಸ್ಪಿನ್ನರ್ ರಶೀದ್ ಖಾನ್ (654) ಕೂಡ ಅಲ್ಪ ಹಿನ್ನಡೆಯಲ್ಲಿದ್ದು, ಮುಂದಿನ ವಾರದ ವೇಳೆ ಬೌಲರ್ಗಳ ರ‍್ಯಾಂಕಿಂಗ್‌ನಲ್ಲಿ ಕೆಲ ಏರುಪೇರುಗಳನ್ನು ನಿರೀಕ್ಷಿಸಬಹುದಾಗಿದೆ.