‘ಕೆಜಿಎಫ್​’ ಸಲುವಾಗಿ ಯಶ್ ವರ್ಕೌಟ್​ ಶೈಲಿ ಬದಲು

collage (18)
Published on

ಬೆಂಗಳೂರು: ಕೆಜಿಎಫ್​ ಸಿನಿಮಾ ಸಲುವಾಗಿ ನಟ ಯಶ್​ ಜಿಮ್​ನಲ್ಲಿ ಬೆವರಿಳಿಸುತ್ತಿದ್ದಾರೆ. ಅದರಲ್ಲೂ ಲಾಕ್​ಡೌನ್​ ಬಿಡುವಿನ ಅವಧಿಯಲ್ಲಿ ಪೂರ್ತಿ ಗಮನವನ್ನು ದೇಹವನ್ನು ಹುರಿಗೊಳಿಸುವುದರಲ್ಲಿಯೇ ಕಳೆದಿದ್ದಾರೆ. ಇದೀಗ ಶೂಟಿಂಗ್​ ಶುರುವಾಗುತ್ತಿದ್ದಂತೆ, ವರ್ಕೌಟ್​ನಲ್ಲಿ ಮತ್ತಷ್ಟು ಬದಲಾವಣೆ ಮಾಡಿಕೊಂಡಿದ್ದಾರೆ ಯಶ್​.

ಹೌದು, ಕೆಜಿಎಫ್​ ಮೊದಲ ಭಾಗಕ್ಕಿಂತ ಎರಡನೇ ಭಾಗದಲ್ಲಿ ಯಶ್​ ಅವತಾರ ಬೇರೆ ರೀತಿಯಲ್ಲಿಯೇ ಇರಲಿದೆ. ಈಗಾಗಲೇ ಅಂಥಹ ಒಂದಷ್ಟು ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಅದಕ್ಕೆ ತಕ್ಕಂತೆ ಚಾಪ್ಟರ್ 1ರಲ್ಲಿ ಇದ್ದಿದ್ದಕ್ಕಿಂತ ಹೆಚ್ಚು ಪ್ರಾತಿನಿಧ್ಯ ಚಾಪ್ಟರ್ 2ರಲ್ಲಿ ಇರುವುದರಿಂದ ಅದಕ್ಕಾಗಿ ಹೆಚ್ಚು ಶ್ರಮವಹಿಸುತ್ತಿದ್ದಾರೆ.

ಇಷ್ಟು ದಿನ ದಿನಕ್ಕೆ ಒಂದೇ ಹೊತ್ತು ಜಿಮ್​ನಲ್ಲಿ ಕಳೆಯುತ್ತಿದ್ದ, ಇತ್ತೀಚೆಗೆ ಎರಡು ಹೊತ್ತು ಅಂದರೆ, ಬೆಳಗ್ಗೆ ಆರು ಗಂಟೆಯಿಂದ ಮೂರು ತಾಸು ಮತ್ತು ಸಂಜೆ ಎರಡು ತಾಸು ವರ್ಕೌಟ್​ ನಡೆಸುತ್ತಿದ್ದಾರೆ. ಬೆಳಗ್ಗೆ ಅರ್ಧ ಗಂಟೆ ಕಾರ್ಡಿಯೋ, ವೇಟ್​ ಟ್ರೇನಿಂಗ್​ ನಡೆದರೆ, ಸಂಜೆ ವೇಳೆ ಆ್ಯಬ್ಸ್​ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಇದೆಲ್ಲದರ ಜತೆಗೆ ಕಟ್ಟುನಿಟ್ಟಿನ ಡಯಟ್​ನಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ಈಗಾಗಲೇ ಬಹುತೇಕ ಶೂಟಿಂಗ್​ ಮುಗಿಸಿಕೊಂಡಿರುವ ಚಿತ್ರತಂಡ, ಒಂದಷ್ಟು ಮಾತಿನ ಭಾಗದ ಚಿತ್ರೀಕರಣ ಮತ್ತು ಸಂಜಯ್​ ದತ್​ ಅವರ ಭಾಗದ ಶೂಟಿಂಗ್​ ಅಷ್ಟೇ ಬಾಕಿ ಉಳಿದಿದೆ. ಅದು ಮುಗಿದರೆ, ಚಿತ್ರ ಮುಗಿದಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net