

ಬೆಂಗಳೂರು: ಲಾಕ್ಡೌನ್ ಹಿನ್ನೆಲೆಯಲ್ಲಿ ಬಹುತೇಕರು ಒಂದಲ್ಲ ಒಂದು ಚಟುವಟಿಕೆಯಲ್ಲಿ ತಲ್ಲೀನರಾಗಿದ್ದಾರೆ. ಅದರಲ್ಲೂ ಸಿನಿಮಾ ಮಂದಿಯಂತೂ ತುಸು ಜಾಸ್ತಿನೇ ಮಗ್ನರಾಗಿದ್ದಾರೆ. ಫಿಟ್ನೆಸ್, ಆಹಾರ, ಓದು, ಸಿನಿಮಾ ಹೇಗೆ ಒಂದಿಲ್ಲೊಂದು ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಇದೀಗ ‘ರಾಬರ್ಟ್’ ಬೆಡಗಿ ಆಶಾ ಭಟ್, ತಮ್ಮೊಳಗಿನ ಕಲೆಯನ್ನು ಹೊರಹಾಕಿದ್ದಾರೆ. ಅದೂ ಹಾಡಿನ ಮೂಲಕ ಎಂಬುದಿಲ್ಲಿ ವಿಶೇಷ.
ಇದನ್ನೂ ಓದಿ: ಇರ್ಫಾನ್ ನೆನಪಲ್ಲಿ ಹೀಗೊಂದು ಒಳ್ಳೆಯ ಕೆಲಸ …
ಹೌದು, ಮಾಡೆಲಿಂಗ್ ನಂಟಿನ ಜಾಡು ಹಿಡಿದು ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿರುವ ಆಶಾ ಭಟ್, ಲಾಕ್ಡೌನ್ ಸಮಯವನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹಾಡು, ನೃತ್ಯದಲ್ಲಿ ಬಿಜಿಯಾಗಿದ್ದಾರೆ. ಹೀಗಿರುವಾಗಲೇ ಮಂಗಳವಾರ ‘ಅಮೃತವರ್ಷಿಣಿ’ ಚಿತ್ರದ ತುಂತುರು ಅಲ್ಲಿ ನೀರ.. ಹಾಡಿಗೆ ಧ್ವನಿಯಾಗಿದ್ದಾರೆ. ಆ ವಿಡಿಯೋ ತುಣುಕನ್ನು ಟ್ವಿಟರ್ನಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.
ಬರೀ ಹಾಡನ್ನಷ್ಟೇ ಹಂಚಿಕೊಂಡಿಲ್ಲ. ಒಂದಿಷ್ಟು ಸಾಲುಗಳ ಕ್ಯಾಪ್ಷನ್ ಸಹ ನೀಡಿದ್ದಾರೆ ಆಶಾ. ‘ಹಾಡು ಹೇಳುವುದರಿಂದ ನನಗೊಂದು ರೀತಿ ಖುಷಿ. ಕಂಫರ್ಟ್ ಫೀಲ್ ಆಗುತ್ತದೆ. ನನ್ನಿಷ್ಟದ ಹಾಡನ್ನು ಹಾಡಲು ಪ್ರಯತ್ನಿಸಿದ್ದೇನೆ. ನಿಮಗಿಷ್ಟವಾಗಬಹುದು. ಕೊನೆಗೆ ನಿಮ್ಮ ಜಾಗರೂಕತೆಯಲ್ಲಿಯೇ ಹಾಡು ಕೇಳಿ’ ಎಂದೂ ಹೇಳಿಕೊಂಡಿದ್ದಾರೆ.
ಎಲ್ಲ ಅಂದುಕೊಂಡಂತೆ ಆಗಿದ್ದರೆ, ಏ. 10ಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ರಾಬರ್ಟ್’ ಚಿತ್ರ ಬಿಡುಗಡೆ ಆಗಿರಬೇಕಿತ್ತು. ಕರೊನಾ ಹಿನ್ನೆಲೆಯಲ್ಲಿ ರಿಲೀಸ್ ದಿನಾಂಕವನ್ನು ಮುಂದೂಡಲಾಗಿದೆ. ಚಿತ್ರದಲ್ಲಿ ದರ್ಶನ್ಗೆ ಜೋಡಿಯಾಗಿ ಆಶಾ ಭಟ್ ನಟಿಸಿದ್ದು, ಸದ್ಯ ರಾಬರ್ಟ್ ಗುಂಗಿನಲ್ಲಿಯೇ ಲಾಕ್ಡೌನ್ ದಿನಗಳನ್ನೂ ದೂಡುತ್ತಿದ್ದಾರೆ.