ಇರ್ಫಾನ್​ ನೆನಪಲ್ಲಿ ಹೀಗೊಂದು ಒಳ್ಳೆಯ ಕೆಲಸ ...

Irfan Khan
Published on

ಬಾಲಿವುಡ್ ನಟ ಇರ್ಫಾನ್​ ಖಾನ್ ಹೆಸರು ಶಾಶ್ವತವಾಗಿ ಉಳಿಯುವುದಕ್ಕೆ ಮಹಾರಾಷ್ಟ್ರದ ಇಗತ್‌ಪುರಿ ಹಳ್ಳಿಯವರು ಒಂದು ಒಳ್ಳೆಯ ಕೆಲಸ ಮಾಡಿದ್ದಾರೆ. ಇರ್ಫಾನ್​ ಖಾನ್ ನೆನಪಲ್ಲಿ ಹಳ್ಳಿಯ ಬಡಾವಣೆಯೊಂದಕ್ಕೆ ಹೀರೋ ಚೀ ವಾಡಿ ಎಂದು ನಾಮಕರಣ ಮಾಡಿದ್ದಾರೆ.

ಎಲ್ಲಾ ಸರಿ, ಈ ಹಳ್ಳಿಗೂ, ಇರ್ಫಾನ್​ಗೂ ಏನು ಸಂಬಂಧ? ಅವರ್ಯಾಕೆ ಇರ್ಫಾನ್​ ನೆನಪಲ್ಲಿ ಬಡಾವಣೆಯ ಹೆಸರು ಬದಲಿಸಬೇಕು? ಎಂಬಂತಹ ಪ್ರಶ್ನೆಗಳು ಬರುವುದು ಸಹಜ. ವಿಷಯ ಏನೆಂದರೆ, ಒಂದು ದಶಕದ ಹಿಂದೆ ಇಗತ್‌ಪುರಿ ಹಳ್ಳಿಯಲ್ಲಿ ಇರ್ಫಾನ್​ ಸ್ವಲ್ಪ ಜಾಗ ಖರೀದಿಸಿದ್ದರಂತೆ. ಆ ಹಳ್ಳಿಗಾಗಿ ಒಂದಿಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದರಂತೆ. ಅದೇ ಕಾರಣಕ್ಕೆ, ಹಳ್ಳಿಯ ಬಡಾವಣೆಯೊಂದಕ್ಕೆ ಹೀರೋ ಚೀ ವಾಡಿ (ಹೀರೋನ ಬಡಾವಣೆ) ಎಂದು ನಾಮಕರಣ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಇಗತ್‌ಪುರಿ ಬಳಿ ಇರ್ಫಾನ್​ ಜಾಗ ಖರೀದಿಸಿದಾಗ, ಹಳ್ಳಿಗರ ಸಂಪರ್ಕ ಹೆಚ್ಚಿರಲಿಲ್ಲವಂತೆ. ಕ್ರಮೇಣ ಸಂಪರ್ಕ ಬೆಳೆಯುತ್ತಿದ್ದಂತೆ, ಅಲ್ಲಿನ ಜನರ ಸಮಸ್ಯೆಗಳು ಸಹ ಅರ್ಥವಾಗಿದೆ. ಆ ಹಳ್ಳಿಗೆ ಕೆಲವು ಬೇಸಿಕ್ ಆದಂತಹ ಸೌಕರ್ಯಗಳು ಸಹ ಸಿಗುತ್ತಿಲ್ಲ ಎಂದು ಸ್ಪಷ್ಟವಾದಾಗ, ಇರ್ಫಾನ್​ ತಾವೇ ಮುಂದೆ ನಿಂತು ಒಂದಿಷ್ಟು ಕೆಲಸಗಳನ್ನು ಮಾಡಿಸಿದ್ದಾರೆ. ಇದರಿಂದ ಹಳ್ಳಿಗರಿಗೆ ಹತ್ತಿರವಾಗಿದ್ದಾರೆ.

ಅಷ್ಟೇ ಅಲ್ಲ, ಆ ಹಳ್ಳಿಯ ಉತ್ಸವಗಳಲ್ಲಿ ಇರ್ಫಾನ್​ ಭಾಗಿಯಾಗುತ್ತಿದ್ದರಂತೆ. ಅಲ್ಲಿನ ಬುಡಕಟ್ಟು ಮಕ್ಕಳಿಗೆ ಪುಸ್ತಕ, ರೇನ್‌ಕೋಟ್, ಸ್ವೆಟರ್‌ಗಳನ್ನು ಕೊಡುತ್ತಿದ್ದರಂತೆ. ಇದೆಲ್ಲದರಿಂದ ಅವರು ಹಳ್ಳಿಗರ ಪ್ರೀತಿ ಪಾತ್ರರಾಗಿದ್ದಾರೆ. ಹೀಗೆ ಪ್ರೀತಿ ಪಾತ್ರರಾಗಿದ್ದ ಇರ್ಫಾನ್​, ಒಂದು ದಿನ ಹಠಾತ್ತನೇ ನಿಧನರಾದಾಗ, ಹಳ್ಳಿಗರು ಅಕ್ಷರಶಃ ಬೇಸರಗೊಂಡಿದ್ದಾರೆ. ಇರ್ಫಾನ್​ ಅವರ ನೆನಪಲ್ಲಿ ಏನಾದರೂ ಮಾಡಬೇಕು ಎಂದು ಯೋಚಿಸುತ್ತಿದ್ದಾಗ, ಐಡಿಯಾ ಹೊಳೆದಿದೆ. ಅದೇ ಕಾರಣಕ್ಕೆ, ಇರ್ಫಾನ್​ ನೆನಪಲ್ಲಿ ಹಳ್ಳಿಯ ಬಡಾವಣೆಗೆ ಹೀರೋ ಚೀ ವಾಡಿ ಎಂದು ನಾಮಕರಣ ಮಾಡಲಾಗಿದೆ.

ಹೀರೋಗಳ ನೆನಪಲ್ಲಿ ರಸ್ತೆಗಳಿಗೆ, ಬಡಾವಣೆಗಳಿಗೆ, ಪಾರ್ಕುಗಳಿಗೆ ಅವರ ಹೆಸರಿಡುವುದು ಹೊಸದೇನಲ್ಲ. ಇರ್ಫಾನ್​ ನೆನಪಲ್ಲೂ ಇಂಥದ್ದೊಂದು ಕೆಲಸ ಆಗುತ್ತಿದೆ ಎನ್ನುವುದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net