ಮುಂಬೈ: ಇತ್ತೀಚೆಗೆ ಮಹಾನಗರಗಳಲ್ಲಿ ರೋಡ್ ರೇಜ್ ( Road Rage ) ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಕ್ಷುಲಕ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳುತ್ತಿರುವ ವಾಹನ ಸವಾರರು ರಸ್ತೆಯಲ್ಲೇ ಬಡಿದಾಡಿಕೊಳ್ಳುತ್ತಿದ್ದಾರೆ. ಇದೀಗ ಪತ್ನಿಯ ಎದುರಲ್ಲೇ ಬೈಕ್ ಸವಾರನೊಬ್ಬನ ಪ್ರಾಣ ತೆಗೆದಿರುವ ಆಘಾತಕಾರಿ ಘಟನೆ ಮುಂಬೈನಲ್ಲಿ ನಡೆದಿದೆ.

ಓವರ್ಟೇಕ್ ಮಾಡುವ ವಿಚಾರದಲ್ಲಿ ಶುರುವಾದ ವಾಗ್ವಾದದ ನಡುವೆಯೇ 28 ವರ್ಷದ ಬೈಕ್ ಸವಾರನ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿ ಹತ್ಯೆ ಮಾಡಿದ್ದಾರೆ. ಈ ಘಟನೆ ಮುಂಬೈನ ಮಲಾಡ್ ಏರಿಯಾದಲ್ಲಿ ಶನಿವಾರ (ಅ.12) ನಡೆದಿದೆ. ಮೃತ ವ್ಯಕ್ತಿಯನ್ನು ಆಕಾಶ್ ಮೈನೆ ಎಂದು ಗುರುತಿಸಲಾಗಿದೆ.
ಆಕಾಶ್ ಮತ್ತು ಅವರ ಪತ್ನಿ ಬೈಕ್‌ನಲ್ಲಿ ಹೋಗುತ್ತಿರುವಾಗ ಆಟೋರಿಕ್ಷಾವೊಂದು ಅವರನ್ನು ಹಿಂದಿಕ್ಕಿತು. ಇದೇ ವಿಚಾರದಲ್ಲಿ ಆಟೋ ಚಾಲಕ ಮತ್ತು ಆಕಾಶ್ ನಡುವೆ ವಾಗ್ವಾದ ಉಂಟಾಯಿತು. ಬಳಿಕ ಆಟೋ ಚಾಲಕ ಸ್ಥಳಕ್ಕೆ ತನ್ನ ಸಹಚರರನ್ನು ಕರೆಸಿದಾಗ ವಾಗ್ವಾದ ಹಿಂಸೆಯ ರೂಪಕ್ಕೆ ತಿರುಗಿತು. ಆಕಾಶ್ ಮೇಲೆ ಆಟೋ ಚಾಲಕನ ಸಹಚರರು ತೀವ್ರ ದಾಳಿ ನಡೆಸಿದ್ದರಿಂದ ಆಕಾಶ್ ಮೃತಪಟ್ಟರು.
ಅಂದಹಾಗೆ ಮೃತ ಆಕಾಶ್, ಹೈದರಾಬಾದ್‌ನ ಟೆಕ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಏಳು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು. ಅವರ ಪಾಲಕರು ಮಲಾಡ್ ಈಸ್ಟ್ನಲ್ಲಿ ನೆಲೆಸಿದ್ದಾರೆ. ಆಕಾಶ್ ಅವರು ಹೊಸ ಕಾರನ್ನು ಬುಕ್ ಮಾಡಿದ್ದರು ಮತ್ತು ದಸರಾ (ಅಕ್ಟೋಬರ್ 12) ರಂದು ಡೆಲಿವರಿ ತೆಗೆದುಕೊಳ್ಳಲು ಉತ್ಸುಕರಾಗಿದ್ದರು. ಸಂಜೆ 5.30ರ ಸುಮಾರಿಗೆ ಆತ ಮತ್ತು ಆತನ ಪತ್ನಿ ಕಾರ್ ಶೋರೂಂನಿಂದ ಬೈಕ್‌ನಲ್ಲಿ ಪಾಲಕರ ನಿವಾಸಕ್ಕೆ ಹಿಂತಿರುಗುತ್ತಿದ್ದರು. ಈ ವೇಳೆ ಶಿವಾಜಿ ಚೌಕ್‌ನಲ್ಲಿ ಆಟೋರಿಕ್ಷಾ ಚಾಲಕ, ಬೈಕ್ ಅನ್ನು ಹಿಂದಿಕ್ಕಿದನು. ಇನ್ನೇನು ಬೈಕ್ಗೆ ಡಿಕ್ಕಿ ಹೊಡೆಯಬೇಕು ಎನ್ನುವಂತೆ ಓವರ್ಟೇಕ್ ಮಾಡಿದನು. ಇದರಿಂದ ಆಕ್ರೋಶಗೊಂಡ ಆಕಾಶ್ ಆಟೋ ಚಾಲಕನನ್ನು ಗದರಿದ್ದಾನೆ. ಬಳಿಕ ನಡೆದ ವಾಗ್ವಾದದಲ್ಲಿ ಆಕಾಶ್ ಪ್ರಾಣವೇ ಹೊಗಿದೆ.
ಇದನ್ನೂ ಓದಿ: ಸಮಾಧಿಯಿಂದ ಹುಡುಗಿಯ ಶವ ಹೊರತೆಗೆದು ಅತ್ಯಾಚಾರ? ಆರೋಪಿಗಳಿಬ್ಬರ ಬಂಧನ, ಜನರ ಆಕ್ರೋಶ! Dead body
ಅಂದಹಾಗೆ ಆಕಾಶ್ ಮತ್ತು ಆಟೋ ಚಾಲಕ ಅವಿನಾಶ್ ಕದಂ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಇದರ ಬಗ್ಗೆ ಆಕಾಶ್ ಪತ್ನಿ, ಅತ್ತೆ ದೀಪಾಲಿಗೆ ಕರೆ ಮಾಡಿ ತಿಳಿಸಿದ್ದಾರೆ. ಈ ವೇಳೆ ದೀಪಾಲಿ ಮತ್ತು ಆಕೆಯ ಪತಿ ದತ್ತಾತ್ರೇಯ ಮತ್ತೊಂದು ಆಟೋದಲ್ಲಿ ಸ್ಥಳಕ್ಕೆ ಬಂದಿದ್ದಾರೆ. ಇತ್ತ ಆಟೋ ಚಾಲಕ ಕದಂ ಕರೆ ಮಾಡಿ 10 ರಿಂದ 15 ಜನರ ಗುಂಪನ್ನು ಕರೆಸಿಕೊಂಡನು. ನನ್ನ ಪತಿ ಮತ್ತು ನಾನು ಉದ್ವಿಗ್ನತೆಯನ್ನು ತಗ್ಗಿಸಲು ಮತ್ತು ಎಲ್ಲರನ್ನು ಶಾಂತಗೊಳಿಸಲು ಪ್ರಯತ್ನಿಸಿದೆವು. ಆಕಾಶ್ ಕೂಡ ತನ್ನ ಬೈಕ್‌ನಲ್ಲಿ ಹಿಂತಿರುಗಲು ಯತ್ನಿಸಿದನು. ಆದರೆ, ಗುಂಪು ಅವನನ್ನು ಎಳೆದಾಡಿತು. ಆಕಾಶ್ ನೆಲಕ್ಕೆ ಬಿದ್ದಾಗ, ನಾನು ಅವನ ಮೇಲೆ ಬಿದ್ದು ಮಾನವ ಗುರಾಣಿಯಂತೆ ರಕ್ಷಿಸಲು ಪ್ರಯತ್ನಿಸಿದೆ. ಆದರೆ, ದುಷ್ಕರ್ಮಿಗಳು ನನ್ನ ಮತ್ತು ನನ್ನ ಮಗನಿಗೆ ಹೊಡೆಯುವುದನ್ನು ಮುಂದುವರೆಸಿದರು. ಅವರಲ್ಲಿ ಕೆಲವರು ನನ್ನ ಗಂಡನ ಮೇಲೆಯೂ ಹಲ್ಲೆ ಮಾಡಿದರು. ಕೆಲವು ಆರೋಪಿಗಳು ಕುಡಿದ ಅಮಲಿನಲ್ಲಿದ್ದರು. ಅವರೆಲ್ಲ ನನ್ನ ಮಗನ ಮೇಲೆ ದಾಳಿ ಮಾಡಲು ಕತ್ತಿಗಳನ್ನು ತಂದಿದ್ದರು. ಮಗನ ಮೇಲೆ ಹಲ್ಲೆ ಮಾಡುತ್ತಿದ್ದರೆ, ಅಲ್ಲಿದ್ದವರೆಲ್ಲ ನೋಡುತ್ತಾ, ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು. ನಮ್ಮ ಸಹಾಯಕ್ಕೆ ಯಾರೂ ಮುಂದೆ ಬರಲಿಲ್ಲ ಎಂದು ಆಕಾಶ್ ತಾಯಿ ದೀಪಾಲಿ ಕಣ್ಣೀರು ಸುರಿಸಿದರು.
ಇನ್ನು ಆಕಾಶ್ ಪ್ರತಿದಾಳಿ ನಡೆಸಿ ಇಬ್ಬರು ಆರೋಪಿಗಳಿಗೆ ಹೊಡೆದಿದ್ದು, ಅವರೂ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕಾಶ್ ತಂದೆ ದತ್ತಾತ್ರೇಯ ಅವರು ಪೊಲೀಸ್ ತುರ್ತು ಸಂಖ್ಯೆ ‘100’ಕ್ಕೆ ಕರೆ ಮಾಡಿ ಮಾಹಿತಿ ನೀಡಿದರು. ಈ ವೇಳೆ ಪೊಲೀಸ್ ವ್ಯಾನ್ ಸ್ಥಳಕ್ಕೆ ಆಗಮಿಸಿ ಒಂದೆರಡು ದಾಳಿಕೋರರನ್ನು ಕಸ್ಟಡಿಗೆ ತೆಗೆದುಕೊಂಡರೆ ಉಳಿದವರು ಪರಾರಿಯಾದರು. ಇತ್ತ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆಕಾಶ್‌ನನ್ನು ದೀಪಾಲಿ ಮತ್ತು ದತ್ತಾತ್ರೇಯ ಬಾಳಾಸಾಹೇಬ್ ಠಾಕ್ರೆ ಟ್ರಾಮಾಕೇರ್ ಆಸ್ಪತ್ರೆಗೆ ಸಾಗಿಸಿದರು. ಆದರೆ, ಆಸ್ಪತ್ರೆಯ ದಾಖಲಾತಿ ಕಠಿಣವಾಗಿತ್ತು. ಹಿರಿಯ ಎಂಎನ್‌ಎಸ್ ಕಾರ್ಯಕಾರಿಯೊಬ್ಬರು ಆಸ್ಪತ್ರೆಗೆ ಬಂದು ಆಡಳಿತದೊಂದಿಗೆ ಮಾತನಾಡುವವರೆಗೂ ನನ್ನ ಮಗ ಸ್ಟ್ರೆಚರ್‌ನಲ್ಲಿಯೇ ಇದ್ದನು. ಆ ತಡರಾತ್ರಿ, ನನ್ನ ಮಗ ಗಾಯದಿಂದ ಬಳಲಿ ಕೊನೆಯುಸಿರೆಳೆದನು ಎಂದು ದೀಪಾಲಿ ಹೇಳಿದರು.
ಕದಮ್ (ಆಟೋ ಚಾಲಕ), ಅಮಿತ್ ವಿಶ್ವಕರ್ಮ, ಆದಿತ್ಯ ಸಿಂಗ್, ಜೈಪ್ರಕಾಶ್ ಆಮ್ಟೆ, ರಾಕೇಶ್ ಧಾಗ್ಲೆ, ಸಾಹಿಲ್ ಕದಮ್, ಅಕ್ಷಯ್ ಪವಾರ್, ಪ್ರತೀಕೇಶ್ ಸುರ್ವೆ ಮತ್ತು ವೈಭವ್ ಸಾವಂತ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯ ನ್ಯಾಯಾಲಯ ಅವರನ್ನು ಅಕ್ಟೋಬರ್ 22 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ದೀಪಾಲಿ ಆಗ್ರಹಿಸಿದ್ದಾರೆ.
ಕೊಲೆ ಆರೋಪದ ಮೇಲೆ ಒಂಬತ್ತು ಮಂದಿಯನ್ನು ದಿಂಡೋಶಿ ಪೊಲೀಸರು ಬಂಧಿಸಿದ್ದು, ವಿಚಾರಣೆ ಆರಂಭಿಸಿದ್ದಾರೆ. (ಏಜೆನ್ಸೀಸ್)
Ratan Tata ಅವರ ಪ್ರೀತಿಯ ಶ್ವಾನ Goa ಇನ್ನಿಲ್ಲ! ಅಸಲಿ ವಿಚಾರ ಬಿಚ್ಚಿಟ್ಟ ಪೊಲೀಸ್ ಆಫೀಸರ್