

Oshin Sharma IAS: ಉನ್ನತ ಸ್ಥಾನದಲ್ಲಿರುವ ಕೆಲವು ಮಹಿಳಾ ಅಧಿಕಾರಿಗಳು ತಮ್ಮ ಕೆಲಸಕ್ಕಿಂತ ಸೌಂದರ್ಯದಿಂದಲೇ ಹೆಚ್ಚು ಸುದ್ದಿಯಾಗುತ್ತಾರೆ. ರಾಜಸ್ಥಾನದ ಬರ್ಮರ್ ಜಿಲ್ಲೆಯ ಜಿಲ್ಲಾಧಿಕಾರಿ ಟೀನಾ ಡಾಬಿ ಇದಕ್ಕೆ ಉದಾಹರಣೆ. ಇವರು ಸೆಲೆಬ್ರಿಟಿ ಐಎಎಸ್ ಅಧಿಕಾರಿಯೆಂದೇ ಫೇಮಸ್ ಆಗಿದ್ದಾರೆ. ಅದೇ ರೀತಿ ಮತ್ತೊಬ್ಬ ಮಹಿಳಾ ಐಎಎಸ್ ಅಧಿಕಾರಿ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಲೇ ಇರುತ್ತಾರೆ. ತಮ್ಮ ಬೋಲ್ಡ್ ಲುಕ್ನಿಂದಲೇ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಆ ಅಧಿಕಾರಿಯನ್ನು ನಾವಿಂದು ನಿಮಗೆ ಪರಿಚಯಿಸುತ್ತೇವೆ.
ಓಶಿನ್ ಶರ್ಮಾ ಇವರು ಹಿಮಾಚಲ ಪ್ರದೇಶದ ಐಎಎಸ್ ಅಧಿಕಾರಿ. ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ ಆಗಿದ್ದಾರೆ. ಅಲ್ಲದೆ, ಸಾಕಷ್ಟು ಅಭಿಮಾನಿಗಳು ಸಹ ಇದಾರೆ. 32 ವರ್ಷದ ಓಶಿನ್, ಹಿಂದೊಮ್ಮೆ ವರ್ಗಾವಣೆ ವಿಚಾರದಲ್ಲಿ ಭಾರಿ ಸುದ್ದಿಯಾಗಿದ್ದರು. ಹಿಮಾಚಲ ಪ್ರದೇಶದ ಸರ್ಕಾರ ಯುವ ಐಎಎಸ್ ಅಧಿಕಾರಿಗೆ ಹೊಸ ಪೋಸ್ಟಿಂಗ್ ನೀಡದೆ ವರ್ಗಾವಣೆ ಮಾಡಿತ್ತು. ಈ ವೇಳೆ ಓಶಿನ್ ಶರ್ಮಾ ಮಂಡಿಯ ಸ್ಯಾಂಡೋಲ್ ತಹಸೀಲ್ದಾರ್ ಆಗಿದ್ದರು.
ಮಂಡಿ ಜಿಲ್ಲಾಧಿಕಾರಿ ಕಚೇರಿಯ ಮಾಹಿತಿ ಪ್ರಕಾರ, ಆಡಳಿತಾತ್ಮಕ ಆಧಾರದ ಮೇಲೆ ಅವರನ್ನು ವರ್ಗಾವಣೆ ಮಾಡಲಾಗಿದೆ. ಅವರ ಕೆಲಸದ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಿದಾಗ, ತೀರಾ ಕಳಪೆ ಎಂದು ಕಂಡುಬಂದ ನಂತರ ಅವರನ್ನು ಪೋಸ್ಟ್‌ನಿಂದ ತೆಗೆದುಹಾಕಲಾಯಿತು ಎಂದಿದೆ. ಆದರೆ, ಈ ವಿಷಯದಲ್ಲಿ ಯಾವುದೇ ತಾಂತ್ರಿಕ ದೃಢೀಕರಣವಿಲ್ಲ. ಸಾಮಾಜಿಕ ವೇದಿಕೆಗಳಲ್ಲಿ ಆಕ್ರೋಶ ಹೆಚ್ಚಾದರೂ ಓಶಿನ್ ಅವರನ್ನು ಏಕೆ ವರ್ಗಾವಣೆ ಮಾಡಲಾಗಿದೆ ಮತ್ತು ಹೊಸ ಪೋಸ್ಟಿಂಗ್ ಅನ್ನು ಏಕೆ ನಿಯೋಜಿಸಲಾಗಿಲ್ಲ ಎಂಬುದನ್ನು ಆಡಳಿತವು ಸ್ಪಷ್ಟಪಡಿಸಲಿಲ್ಲ.
ಇನ್ನಿ ಓಶಿನ್ ಶರ್ಮಾ ಅವರು ತಮ್ಮ ಕೆಲಸಕ್ಕಿಂತ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುತ್ತಾರೆ. ಓಶಿನ್ ಅವರನ್ನು ಇನ್ಸ್ಟಾಗ್ರಾಂನಲ್ಲಿ 2.96 ಲಕ್ಷ ಮತ್ತು ಫೇಸ್ಬುಕ್ನಲ್ಲಿ 1.28 ಲಕ್ಷ ಫಾಲೋವರ್ಸ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ಸುಮಾರು 8.8 ಲಕ್ಷ ಜನರನ್ನು ಅನುಸರಿಸುತ್ತಿದ್ದಾರೆ.
ಸಂಧೋಲ್‌ಗೆ ವಿದಾಯ ಹೇಳುವ ಸಮಯ. ಇಲ್ಲಿನ ನೆನಪುಗಳು ಜೀವಮಾನ ಉಳಿಯುತ್ತದೆ. ನಿಮ್ಮ ಗೌರವ ಮತ್ತು ಪ್ರೀತಿಗೆ ಧನ್ಯವಾದಗಳು ಎಂದು ಈ ಹಿಂದೆ ವರ್ಗಾವಣೆ ಸಮಯದಲ್ಲಿ ಓಶಿನ್ ಮಾಡಿದ್ದ ವಿದಾಯದ ಪೋಸ್ಟ್ ಭಾರಿ ವೈರಲ್ ಆಗಿತ್ತು. ಅಲ್ಲದೆ, ಭಾರಿ ಜನರು ಅವರ ವರ್ಗಾವಣೆಯನ್ನು ವಿರೋಧಿಸಿದ್ದರು. ಇನ್ನು ಸಾಮಾಜಿಕ ಜಾಲತಾಣದಲ್ಲಿ ಅವರ ಪ್ರಭಾವವೇ ಆಕೆಯ ವರ್ಗಾವಣೆಗೆ ಕಾರಣ ಎಂಬ ಚರ್ಚೆಯು ನಡೆದಿತ್ತು. ಆಕೆ ಜಾಲತಾಣದಲ್ಲಿ ಬೆಳೆಯುತ್ತಿರುವ ಪರಿಯನ್ನು ಕಂಡು ಸ್ಥಳೀಯ ರಾಜಕಾರಣಿಗಳು ಮತ್ತು ಹಿರಿಯ ಅಧಿಕಾರಿಗಳಿಗೂ ಸಹಿಸಿಕೊಳ್ಳಲು ಆಗಲಿಲ್ಲ ಎನ್ನಲಾಗಿದೆ. ಓಶಿನ್ ಸರ್ಕಾರಿ ಕರ್ತವ್ಯಗಳಿಗಿಂತ ಸಾಮಾಜಿಕ ಜಾಲತಾಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದರು ಎಂಬ ಆರೋಪವೂ ಕೇಳಿಬಂದಿತ್ತು.
ಓಶಿನ್ ಅವರು ತಮ್ಮ ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸದ ಕಾರಣ ಶೋಕಾಸ್ ನೋಟಿಸ್ ಸ್ವೀಕರಿಸಿದ್ದರು ಎಂದು ವರದಿಗಳು ಸೂಚಿಸುತ್ತವೆ. ಆಕೆಯ ಸಾಮಾಜಿಕ ಜಾಲತಾಣ ಚಟುವಟಿಕೆಗಳು ಸಾರ್ವಜನಿಕ ಸೇವೆಗಳಿಗೆ ಅಡ್ಡಿಯುಂಟುಮಾಡಿತ್ತು. ಇದು ಅಗತ್ಯ ಆಡಳಿತಾತ್ಮಕ ಕೆಲಸಗಳಲ್ಲಿ ವಿಳಂಬಕ್ಕೆ ಕಾರಣವಾಗಿತ್ತು ಎಂದು ಹಿರಿಯ ಅಧಿಕಾರಿಗಳು ಹೇಳಿದ್ದರು. ಆದರೂ, ಈ ಪ್ರದೇಶದ ಅನೇಕರು ಆಕೆಯನ್ನು ಬೆಂಬಲಿಸಿದ್ದರು. ಹಿಮಾಚಲ ಪ್ರದೇಶದಲ್ಲೇ ತುಂಬಾ ಶ್ರಮವಹಿಸಿ ಕೆಲಸ ಮಾಡುವ ಅಧಿಕಾರಿ ಎಂದು ಜನರು ಹೇಳುತ್ತಿದ್ದರು. ಸಮಾಜ ಕಲ್ಯಾಣ, ಪರಿಸರ ಮತ್ತು ಪಂಚಾಯತ್ ಯೋಜನೆಗೆ ಸಂಬಂಧಿಸಿದ ಕಲ್ಯಾಣ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ಅವರ ಶ್ಲಾಘನೀಯ ಕೆಲಸವನ್ನು ಉಲ್ಲೇಖಿಸಿದ್ದರು. ಓಶಿನ್ ಅವರು ಈ ಹಿಂದೆ ಕೆಲಸ ಮಾಡಿದ ಮಂಡಿ ಮತ್ತು ಕಾಂಗ್ರಾ ಜಿಲ್ಲೆಗಳ ಸ್ಥಳೀಯರು, ವಿಶೇಷವಾಗಿ ಸ್ವಸಹಾಯ ಗುಂಪುಗಳು ಓಶಿನ್ ಅವರ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾರೆ. ಆಕೆಯ ವಿರುದ್ಧದ ಆರೋಪಗಳು ನ್ಯಾಯಸಮ್ಮತಕ್ಕಿಂಗ ಅಸೂಯೆಯಿಂದ ತುಂಬಿದೆ ಎಂದು ಕೆಲವರು ಅವರ ವರ್ಗಾವಣೆಯನ್ನು ವಿರೋಧಿಸಿದ್ದರು.
ಅಂದಹಾಗೆ ಚಂಬಾ ಜಿಲ್ಲೆಯ ಭರ್ಮೂರ್ ಬುಡಕಟ್ಟು ಪ್ರದೇಶದ ಬ್ರಾಹ್ಮಣ ಕುಟುಂಬದಿಂದ ಬಂದ ಓಶಿನ್ ಶರ್ಮಾ, ಬಿಜೆಪಿಯ ಮಾಜಿ ಶಾಸಕ ವಿಶಾಲ್ ನೆಹ್ರಿಯಾ ಅವರನ್ನು ವಿವಾಹವಾಗಿದ್ದರು. ಇಬ್ಬರು ಕಾಲೇಜು ಪರಿಚಯಸ್ಥರಾಗಿದ್ದರು. 2021ರ ಏಪ್ರಿಲ್ನಲ್ಲಿ ಇಬ್ಬರು ಮದುವೆಯಾಗುವ ಮುನ್ನ ರಿಲೇಶನ್ಶಿಪ್ನಲ್ಲಿದ್ದರು. ಆದರೆ, ಮದುವೆಯಾದ ಎರಡೇ ತಿಂಗಳಲ್ಲಿ ತನ್ನ ಪತಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ಭಾರಿ ಸುದ್ದಿಯಲ್ಲಿದ್ದರು. ನೆಹ್ರಿಯಾ ತನ್ನ ಕುಟುಂಬದವರ ಮುಂದೆ ನನಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಆರೋಪಿಸಿ 11 ನಿಮಿಷಗಳ ವಿಡಿಯೋವನ್ನು ಬಿಡುಗಡೆ ಮಾಡಿದ್ದರು. ಇದಾದ ಬಳಿಕ ಇಬ್ಬರು ಡಿವೋರ್ಸ್ ಪಡೆದುಕೊಂಡರು. ಈ ಸಂದರ್ಭದಲ್ಲಿ ಓಶಿನ್ ಅವರು ಭಾರಿ ಸುದ್ದಿಯಾಗಿದ್ದರು. (ಏಜೆನ್ಸೀಸ್)