ರಸ್ತೆಯಲ್ಲಿ ಹೊಂಡಗಳ ಶೃಂಗಾರ! : ಲಾಲ್‌ಬಾಗ್-ಕುರುಡಪದವು ಮಾರ್ಗದ ದುಸ್ಥಿತಿ : ದಶಕಗಳೇ ಕಳೆದರೂ ಇಲ್ಲ ದುರಸ್ತಿ ಭಾಗ್ಯ

03
Published on

ಪುರುಷೋತ್ತಮ ಭಟ್ ಬದಿಯಡ್ಕ

ಕರ್ನಾಟಕ ಭಾಗಕ್ಕೆ ಸೇರಿದ ಲಾಲ್‌ಬಾಗ್-ಕುರುಡಪದವು ರಸ್ತೆಯಲ್ಲಿ ಡಾಂಬರಿಗಿಂತ ಹೊಂಡಗುಂಡಿಗಳೇ ರಾರಾಜಿಸುತ್ತಿದ್ದು, ಸ್ಥಳೀಯ ಮುಖಂಡರು, ಜನಪ್ರತಿನಿಧಿಗಳ ಅಭಿವೃದ್ಧಿ ಕಾರ್ಯಗಳು ಕೇವಲ ಬಾಯಿಮಾತಿಗಷ್ಟೇ ಸೀಮಿತವಾಗಿದೆ.

ಮಾಸಿಕುಮೇರಿ- ಕುರುಡಪದವು ರಸ್ತೆ ಕೂಡ ದುರಸ್ತಿಯಾಗದೇ ಸುಮಾರು ದಶಕಗಳೇ ಕಳೆದಿದ್ದು, ಪೈವಳಿಕೆ ಪಂಚಾಯಿತಿ ವ್ಯಾಪ್ತಿಯ ಲಾಲ್‌ಬಾಗ್‌ನಿಂದ ಕುರುಡಪದವು ತನಕ ಮಾರಣಾಂತಿಕ ಗುಂಡಿಗಳೇ ವಿಜೃಂಭಿಸುತ್ತಿವೆ. ಈ ಭಾಗಗಳಲ್ಲಿ ನಿತ್ಯವೂ ಸಾವಿರಾರು ವಾಹನಗಳು ಅಪಾಯದ ಜತೆಗೆ ಸಂಚರಿಸುತ್ತಿವೆ. ಮಳೆಗಾಲ ನೀರು ತುಂಬಿರುವುದರಿಂದ ಹೊಂಡಗಳು ಗೋಚರಿಸದೇ ಅಪಘಾತಗಳೂ ಆಗುತ್ತಿದ್ದು, ವಾಹನಗಳೂ ಹಾನಿಗೊಳಗಾಗುತ್ತಿವೆ.

ಪೈವಳಿಕೆ ಪಂಚಾಯಿತಿಯ ಒಟ್ಟು ನಾಲ್ಕು ವಾರ್ಡ್‌ಗಳನ್ನು ಸಂಪರ್ಕಿಸುವ ಈ ರಸ್ತೆಯನ್ನು ಸುಮಾರು ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದರೂ ಕಾಮಗಾರಿಗಳು ಮಾತ್ರ ಆಮೇಗತಿಯಲ್ಲಿ ಸಾಗುತ್ತಿವೆ. ರಸ್ತೆ ಅಭಿವೃದ್ಧಿಗೆ 4.30 ಕೋಟಿ ರೂ. ಮಂಜೂರಾಗಿದ್ದರೂ ಕಾಮಗಾರಿ ಕಳಪೆ ಇದೆ ಎಂದು ಸ್ಥಳೀಯರು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಲಾಲ್‌ಭಾಗ್- ಕುರುಡಪದವು ರಸ್ತೆ ದುರಸ್ತಿಗೊಂಡು ದಶಕಗಳೇ ಕಳೆದಿದ್ದು, ಮಳೆಗಾಲ ಪ್ರಾರಂಭವಾದ ಬಳಿಕ ರಸ್ತೆಯಲ್ಲಿರುವ ಬೃಹತ್ ಹೊಂಡಗಳೆಲ್ಲವೂ ಅಕ್ಷಶಃ ಕೆಸರಿನ ಕೂಪವಾಗಿ ಬದಲಾಗುತ್ತಿವೆ. ಇದೇ ರಸ್ತೆ ಸಂಪರ್ಕಿಸುವ ಚಿಪ್ಪಾರು ಅಮ್ಮೇರಿಯಲ್ಲಿ ಸ್ಥಳೀಯರು ಬಾಳೆಗಿಡ ನೆಟ್ಟು ಕೆಲವು ತಿಂಗಳ ಹಿಂದೆ ಪ್ರತಿಭಟನೆ ನಡೆಸಿದ್ದರು.

ತೇಪೆ ಕಾರ್ಯಕ್ಕೆ ಸೀಮಿತ

ಸ್ಥಳೀಯ ಜನರು ಇತ್ತೀಚೆಗಷ್ಟೇ ಮಂಜೇಶ್ವರದ ಜಿಡಬ್ಲುೃಡಿ ಕಚೇರಿ ಮುಂದೆ ಪ್ರತಿಭಟಿಸಿದ್ದು, ಜನರ ಸತತ ಒತ್ತಡಕ್ಕೆ ಮಣಿದ ಸ್ಥಳೀಯಾಡಳಿತ ಲಾಲ್‌ಬಾಗ್-ಕುರುಡಪದವು ರಸ್ತೆಗೆ ತೇಪೆ ಹಾಕಲು ಆರಂಭಿಸಿದೆ. ಆದರೂ ಹದಗೆಟ್ಟ ರಸ್ತೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಕುರುಡಪದವು ಹಾಗೂ ಲಾಲ್‌ಬಾಗ್ ಜನರು ಒತ್ತಾಯಿಸಿದ್ದಾರೆ.

ಪೈವಳಿಕೆ ಪಂಚಾಯಿತಿಯ 1ನೇ ವಾರ್ಡಿನ ಪಾರೇಕೋಡಿ ಕೊಮ್ಮಂಗಳ ರಸ್ತೆಗೆ 3 ತಿಂಗಳ ಹಿಂದೆ 5 ಲಕ್ಷ ರೂ. ವೆಚ್ಚದಲ್ಲಿ ಡಾಂಬರು ಹಾಕಿದ್ದು, ಅವು ಕಿತ್ತುಹೋಗಿ ಮತ್ತೊಮ್ಮೆ ಬೃಹತ್ ಹೊಂಡಗಳು ಬಾಯ್ತೆರೆದಿವೆ. ಊರವರೆಲ್ಲ ಜತೆಗೂಡಿ ಪ್ರತಿಭಟನೆ ರೂಪದಲ್ಲಿ ಹೊಂಡ ಮುಚ್ಚಲು ಆರಂಭಿಸಿದ್ದೇವೆ. ಸ್ಥಳೀಯಾಡಳಿತ ಕೂಡಲೇ ಸ್ಪಂದಿಸದಿದ್ದಲ್ಲಿ ಹೋರಾಟ ಅನಿವಾರ್ಯ. ಇಬ್ರಾಹಿಂ ಅಮ್ಮೇರಿ, ಸ್ಥಳೀಯ ಲಾಲ್ಬಾಗ್ ಕುರುಡಪದವು ರಸ್ತೆ ಶೋಚನೀಯವಸ್ಥೆಗೆ ತಲುಪಿದ್ದು, ದುರಸ್ತಿಗೊಳಿಸುವಂತೆ ಒತ್ತಾಯಿಸಿ ಜಿಡಬ್ಲುೃಡಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದೇವೆ. ಸ್ವತಃ ನಾವೇ ಹೊಂಡಗುಂಡಿಗಳನ್ನು ತಾತ್ಕಾಲಕವಾಗಿ ಮುಚ್ಚಿದ್ದೇವೆ. ಕೇರಳ-ಕರ್ನಾಟಕಕ್ಕೆ ಸೇರಿದ ಹಲವು ಪ್ರದೇಶಗಳಲ್ಲಿ ಈ ಪ್ರದೇಶದ ರಸ್ತೆ ಮಾತ್ರ ಹದಗೆಟ್ಟಿದೆ. ರವಿ ಕುರುಡಪದವು, ಸ್ಥಳೀಯ

  • ಹಲವೆಡೆ ಅರ್ಧಂಬರ್ಧ ಕಾಮಗಾರಿ
  • ಮಳೆಗಾಲದಲ್ಲಿ ಕೆಸರಿನ ಕೂಪವಾಗುವ ರೋಡ್
  • ಚುನಾವಣೆ ವೇಳೇಗಷ್ಟೇ ಅಭಿವೃದ್ಧಿ ಭರವಸೆ
ರಸ್ತೆಯ ಹೊಂಡದಲ್ಲಿ ಸಂಗ್ರಹಗೊಂಡಿದ್ದ ನೀರನ್ನು ತೆಗೆಯುತ್ತಿರುವ ಸ್ಥಳೀಯ.
ರಸ್ತೆಯ ಹೊಂಡದಲ್ಲಿ ಸಂಗ್ರಹಗೊಂಡಿದ್ದ ನೀರನ್ನು ತೆಗೆಯುತ್ತಿರುವ ಸ್ಥಳೀಯ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net