

ಪುತ್ತೂರು ಗ್ರಾಮಾಂತರ : ಆಲ್ಟೊ ಕಾರೊಂದುಮುಂದಿನಿಂದ ತೆರಳುತಿದ್ದ ದ್ವಿಚಕ್ರ ವಾಹನಕ್ಕೆ ಬಡಿದು ಬಳಿಕ ಎದುರಿನಿಂದ ಬರುತಿದ್ದ ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದ ಘಟನೆ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕುಂಬ್ರ ಸಮೀಪದ ಶೇಖಮಲೆ - ಅಟಲ್ ನ ಗರದಲ್ಲಿ ಭಾನುವಾರ ಸಂಜೆ ನ ಡೆದಿದ್ದು, ಘಟನೆಯಲ್ಲಿ ಆಲ್ಟೊದಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.
ಕೊಡಗು ಜಿಲ್ಲೆಯ ಸೋಮವಾರ ಪೇಟೆ ಸಮೀಪದ ವಾಲುನೂರು ಗ್ರಾಮದ ತ್ಯಾಗತ್ತೂರು ನಿವಾಸಿ ನಾಗಪ್ಪ ಅವರ ಪುತ್ರ ರವೀಂದ್ರ (57) ಮತ್ತು ನೆರೆಯ ನಿವಾಸಿ ಲೋಕೇಶ್ (48) ಮೃತಪಟ್ಟವರು. ಟ್ಯಾಂಕರ್ ಚಾಲಕನಾಗಿ ದುಡಿಯುತ್ತಿದ್ದ ರವೀಂದ್ರ ಅವರು ಮಂಗಳೂರಿನಲ್ಲಿ ವಾಸ್ತವ್ಯವಿದ್ದ ಬಾಡಿಗೆ ಕೊಠಡಿಯನ್ನು ಖಾಲಿ ಮಾಡಿ ಮಡಿಕೇರಿ ಕಡೆಗೆ ತೆರಳುತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಮಂಗಳೂರಿನಿಂದ ಮಡಿಕೇರಿ ಕಡೆಗೆ ರವೀಂದ್ರ ಅವರು ಚಲಾಯಿಸಿಕೊಂಡು ಹೋಗುತಿದ್ದ ಆಲ್ಟೊ ಕಾರು ಕುಂಬ್ರ ಸಮೀಪದ ಶೇಖಮಲೆ ಅಟಲ್ ನಗರದ ಸೇತುವೆ ಬಳಿ ಎದುರಿನಿಂದ ತೆರಳುತಿದ್ದ ಆಕ್ಟಿವಾವನ್ನು ಹಿಂದಿಕ್ಕುವ ಯತ್ನದಲ್ಲಿ ಅದಕ್ಕೆ ಬಡಿದಿದ್ದು, ಈ ವೇಳೆ ಚಾಲಕನ ಹತೋಟಿ ಕಳಕೊಂಡ ಆಲ್ಟೊ ಕಾರು ಈಶ್ವರಮಂಗಲ ಕಡೆಯಿಂದ ಪುತ್ತೂರು ಕಡೆಗೆ ಬರುತಿದ್ದ ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದಿರುವುದಾಗಿ ತಿಳಿದು ಬಂದಿದೆ. ಘಟನೆಯಲ್ಲಿ ಆಲ್ಟೊ ಕಾರಿನಲ್ಲಿದ್ದ ರವೀಂದ್ರ ಮತ್ತು ಲೋಕೇಶ್ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಬೊಲೆರೋ ವಾಹನ ಚಲಾಯಿಸುತಿದ್ದ ಬಡ ಗನ್ನೂರು ಗ್ರಾಮ ಪಂಚಾಯಿತಿ ಸದಸ್ಯ ರವಿರಾಜ್ ರೈ ಸಜಂಕಾಡಿ ಮತ್ತು ಅವರ ಪತ್ನಿ ಸುಧಾ.ರೈ ಹಾಗೂ ಆಕ್ಟಿವಾ ಚಾಲಕ ಮಹಮ್ಮದ್ ಇಸ್ಮಾಯಿಲ್ ಅವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರವೀಂದ್ರ ಅವರು ಮಂಗಳೂರಿನಲ್ಲಿ ವಾಸ್ತವ್ಯವಿದ್ದ ಬಾಡಿಗೆ ಕೊಠಡಿಯನ್ನು ಖಾಲಿ ಮಾಡಲು ತನ್ನ ಮನೆ ಸಮೀಪದ ನಿವಾಸಿಯಾದ ಕಾರ್ಪೆಂಟರ್ ವೃತ್ತಿಯ ಲೋಕೇಶ್ ಅವರನ್ನು ಕರೆದುಕೊಂಡು ಹೋಗಿದ್ದರು. ಈ ಘಟನೆಯಲ್ಲಿ ಅವರು ಬಲಿಯಾಗಿದ್ದಾರೆ.
ಸಂಪ್ಯ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.