

ಹೈದರಾಬಾದ್: ಮೊದಲ ಪಂದ್ಯದಲ್ಲಿ ನಿರೀಕ್ಷಿತ ನಿರ್ವಹಣೆ ತೋರದ ಪಾಕಿಸ್ತಾನ ದಾಖಲೆಯ ರನ್ ಚೇಸಿಂಗ್ನಲ್ಲಿ 37 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು. ಆಗ ವಿಕೆಟ್ ಕೀಪರ್-ಬ್ಯಾಟರ್ ಮೊಹಮದ್ ರಿಜ್ವಾನ್ (131* ರನ್, 121 ಎಸೆತ, 8 ಬೌಂಡರಿ, 3 ಸಿಕ್ಸರ್) ಶತಕ ಹಾಗೂ ಯುವ ಬ್ಯಾಟರ್ ಅಬ್ದುಲ್ಲಾ ಶಫೀಕ್ (113 ರನ್, 103 ಎಸೆತ, 10 ಬೌಂಡರಿ, 3 ಸಿಕ್ಸರ್) ಸಿಡಿಸಿದ ಸಮಯೋಚಿತ ಶತಕದ ನೆರವಿನಿಂದ ಬಾಬರ್ ಅಜಮ್ ಪಡೆ ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಶ್ರೀಲಂಕಾ ಎದುರು 6 ವಿಕೆಟ್ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ವಿಶ್ವಕಪ್ನಲ್ಲಿ ಗರಿಷ್ಠ ಮೊತ್ತದ ಚೇಸಿಂಗ್ ದಾಖಲೆ ಬರೆಯಿತು. 2011ರಲ್ಲಿ ಆಂಗ್ಲರೆದುರು ಐರ್ಲೆಂಡ್ 329 ರನ್ ಚೇಸಿಂಗ್ ಮಾಡಿದ್ದು ಹಿಂದಿನ ಗರಿಷ್ಠ.
ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಏಷ್ಯನ್ನರ ಕಾದಾಟದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಲಂಕಾ ಪರ, ಶಹೀನ್ ಷಾ ಅಫ್ರಿದಿ ಹಾಗೂ ಹ್ಯಾರಿಸ್ ರೌಫ್ ಜೋಡಿಯನ್ನು ಸಮರ್ಥವಾಗಿ ಎದುರಿಸಿದ ಕುಸಲ್ ಮೆಂಡಿಸ್ (122 ರನ್, 77 ಎಸೆತ, 14 ಬೌಂಡರಿ, 6 ಸಿಕ್ಸರ್) ಸ್ಫೋಟಕ ಶತಕ ಮತ್ತು ಸಧೀರ ಸಮರವಿಕ್ರಮ (108 ರನ್, 89 ಎಸೆತ, 11 ಬೌಂಡರಿ, 2 ಸಿಕ್ಸರ್) ಶತಕದ ಬಲದಿಂದ 9 ವಿಕೆಟ್ಗೆ 344 ರನ್ ಪೇರಿಸಿತು. ಸವಾಲಿನ ಗುರಿ ಬೆನ್ನಟ್ಟಿದ ಪಾಕ್, ಆರಂಭಿಕ ಆಘಾತದ ಬಳಿಕ ರಿಜ್ವಾನ್-ಶಫೀಕ್ ನಡುವಿನ 3ನೇ ವಿಕೆಟ್ ಜತೆಯಾಟದಿಂದ 48.2 ಓವರ್ಗಳಲ್ಲಿ 4 ವಿಕೆಟ್ಗೆ 345 ರನ್ಗಳಿಸಿ ಯಶಸ್ವಿ ಚೇಸಿಂಗ್ ನಡೆಸಿತು. ಲಂಕಾ ಸತತ 2ನೇ ಸೋಲುಂಡಿತು.
ಶ್ರೀಲಂಕಾ: 9 ವಿಕೆಟ್ಗೆ 344 (ನಿಸ್ಸಂಕ 51, ಕುಸಲ್ ಮೆಂಡಿಸ್ 122, ಸಧೀರ 108, ಧನಂಜಯ 25, ಶನಕ 12, ಹಸನ್ ಅಲಿ 71ಕ್ಕೆ4, ಹ್ಯಾರಿಸ್ ರೌಫ್ 64ಕ್ಕೆ2). ಪಾಕ್: 48.2 ಓವರ್ಗಳಲ್ಲಿ 4 ವಿಕೆಟ್ಗೆ 345 ( ಶಫೀಕ್ 113, ಬಾಬರ್ 10, ರಿಜ್ವಾನ್ 131* ಶಕೀಲ್ 31, ಇಫ್ತಿಕರ್ 22*, ಮಧುಶಂಕ 60ಕ್ಕೆ2).