

ವರಮಹಾಲಕ್ಷ್ಮೀ ಹಬ್ಬ ಸಂಭಮದ ಜತೆಗೆ ಸ್ಯಾಂಡಲ್ವುಡ್ಗೆ ಮತ್ತೊಂದು ಶುಭಸುದ್ದಿ. 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (National Award) ಘೋಷಣೆ ಆಗಿದೆ. ಕನ್ನಡದ ಕಾಂತಾರ ಸಿನಿಮಾವನ್ನು ನಿರ್ದೇಶಿಸಿ ಮತ್ತು ನಟಿಸಿದ್ದ ರಿಷಭ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ಒಲಿದಿದೆ. ಕೇಂದ್ರ ಮಾಹಿತಿ ಹಾಗೂ ಪ್ರಸಾರ ಇಲಾಖೆ ಈ ಪ್ರಶಸ್ತಿಯನ್ನು ಘೋಷಿಸಿದೆ.
ಕರ್ನಾಟಕದಲ್ಲಿನ 250ಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ಜತೆಗೆ ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ ಹೀಗೆ ಜಾಗತಿಕವಾಗಿ ಇತರ ಸ್ಥಳಗಳಲ್ಲಿ ಏಕಕಾಲದಲ್ಲಿ ಕಾಂತಾರ ಸಿನಿಮಾ 2022 ಸೆಪ್ಟೆಂಬರ್ 30ರಂದು ಬಿಡುಗಡೆಯಾಯಿತು. ಹೊಂಬಾಳೆ ಫಿಲ್ಮಂಸ್ ಬ್ಯಾನರ್ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸಖತ್ ಸೌಂಡ್ ಮಾಡಿತ್ತು. ಬರೋಬ್ಬರಿ 400 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿತ್ತು. ಭರ್ಜರಿ ಕಲೆಕ್ಷನ್ ಪಡೆದ ಸಿನಿಮಾ ಕಾಂತಾರ ಕನ್ನಡದಲ್ಲಿ ತೆರೆಕಂಡ ಬಳಿಕ ಬೇರೆ ಭಾಷೆಗಳಿಗೂ ಡಬ್ ಆಗಿ ಅಲ್ಲಿಯೂ ಕಾಂತಾರ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿತ್ತು.
2022ರ ಜನವರಿ 1 ರಿಂದ ಡಿಸೆಂಬರ್ 31ರವರೆಗಿನ ಸೆನ್ಸಾರ್ ಆಗಿರುವ ಸಿನಿಮಾಗಳನ್ನು ಈ ಅವಾರ್ಡ್ಗೆ ಪರಿಗಣಿಸಲಾಗಿದೆ. ಈ ಪಟ್ಟಿಯಲ್ಲಿ ಕಾಂತಾರ ಸಿನಿಮಾವನ್ನು ನಿರ್ದೇಶಿಸಿ, ನಟಿಸಿದ್ದ ರಿಷಭ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ಅತ್ಯುತ್ತಮ ನಟ ಪ್ರಶಸ್ತಿಗೆ ದಕ್ಷಿಣದ ಇಬ್ಬರು ನಟರ ನಡುವೆ ಪೈಪೋಟಿ ಏರ್ಪಟಿತ್ತು. ರಿಷಭ್ ಶೆಟ್ಟಿ ಹಾಗೂ ಮಲಯಾಳಂ ಮೆಗಾಸ್ಟಾರ್ ಮಮ್ಮುಟ್ಟಿ ಇಬ್ಬರ ಹೆಸರು ಮುನ್ನೆಲೆಯಲ್ಲಿತ್ತು. ಈ ಪೈಕಿ ರಿಷಭ್ ಶೆಟ್ಟಿ ಅವರು ಅತ್ಯುತ್ತಮ ನಟ ಪಟ್ಟವನ್ನು ಪಡೆದುಕೊಂಡಿದ್ದಾರೆ. ಕಾಂತಾರ ಚಿತ್ರ ಇದುವರೆಗೂ 10 ಫಿಲ್ಮ್ಫೇರ್ ಹಾಗೂ 10 ಸೈಮಾ ಪ್ರಶಸ್ತಿ ಪಡೆದುಕೊಂಡಿದೆ.