

ನವದೆಹಲಿ: ಕಳೆದ ಒಂದು ತಿಂಗಳಿಂದ ಐಪಿಎಲ್ 2025ರ (IPL 2025) ಸದ್ದು-ಗದ್ದಲ ಜೋರಾಗಿದ್ದು, ಯಾವ ಸ್ಟಾರ್ ಆಟಗಾರರು ಈಗಿರುವ ತಮ್ಮ ಫ್ರಾಂಚೈಸಿಗೆ ಗುಡ್ಬೈ ಹೇಳಲಿದ್ದಾರೆ? ಹರಾಜು ಪ್ರಕ್ರಿಯೆಯಲ್ಲಿ ಬೇರೊಂದು ತಂಡಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಪ್ರಶ್ನೆ, ಗೊಂದಲಗಳ ಸುರಿಮಳೆ ಸದ್ಯ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಐಪಿಎಲ್ನ ಅಷ್ಟು ಫ್ರಾಂಚೈಸಿಗಳು ತಾವು ಉಳಿಸಿಕೊಳ್ಳಲು ಬಯಸುವ ಆಟಗಾರರ ಪಟ್ಟಿಯನ್ನು ಇಂದೇ ( ಅಕ್ಟೋಬರ್ 31, 2024) ಸಲ್ಲಿಸುವುದು ನಿಯಮ. ಅದರಂತೆ ಇಂದು ಯಾರನ್ನೆಲ್ಲ ಆಯಾ ತಂಡಗಳು ಕೈಬಿಟ್ಟಿವೆ, ಯಾರನ್ನು ತಮ್ಮೊಂದಿಗೆ ಇರಿಸಿಕೊಂಡಿವೆ ಎಂಬುದು ಸ್ಪಷ್ಟವಾಗಿ ತಿಳಿಯಲಿದೆ. ಈ ಮಧ್ಯೆ ಡೆಲ್ಲಿ ಕ್ಯಾಪಿಟಲ್ಸ್ ಮಾತ್ರ ತಮ್ಮ ಟೀಮ್ನ ನಾಯಕನಾಗಿ ಕಳೆದ ಬಾರಿ ಕೋಲ್ಕತ ನೈಟ್ ರೈಡರ್ಸ್ ಗೆಲುವಿಗೆ ಕಾರಣವಾದ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ರನ್ನು ಕರೆತರಲು ತೆರೆಮರೆಯಲ್ಲಿ ಕೆಲಸ ಮಾಡುತ್ತಿದೆ ಎಂಬುದು ಇದೀಗ ವರದಿ ಮೂಲಕ ತಿಳಿದುಬಂದಿದೆ. ಅಸಲಿಗೆ ಡಿಸಿ ತೆಗೆದುಕೊಂಡಿರುವ ಈ ನಿರ್ಧಾರದ ಹಿಂದಿದೆ ಬಲವಾದ ಕಾರಣ.
ಕಳೆದ 17ನೇ ಆವೃತ್ತಿಯಲ್ಲಿ ಕೋಲ್ಕತ ನೈಟ್ ರೈಡರ್ಸ್ನ ಫೈನಲ್ಗೆ ಕೊಂಡೊಯ್ದಿದ್ದ ಕ್ಯಾಪ್ಟನ್ ಶ್ರೇಯಸ್ ಅಯ್ಯರ್, 2024ರ ಐಪಿಎಲ್ ಚಾಂಪಿಯನ್ಸ್ ಆಗಿ ತಂಡವನ್ನು ಯಶಸ್ಸಿನತ್ತ ಮುನ್ನಡೆಸಿದರು. ದೊಡ್ಡ ಗೆಲುವಿಗೆ ಕಾರಣವಾದ ಹಿನ್ನಲೆ ತಮ್ಮ ಹಿಂದಿನ 12.60 ಕೋಟಿ ರೂ. ಮೊತ್ತವನ್ನು ಈ ಬಾರಿ ಹೆಚ್ಚಿಸಿ ಎಂದು ಫ್ರಾಂಚೈಸಿ ಬಳಿ ಅಯ್ಯರ್ ಕೇಳಿಕೊಂಡಿದ್ದಾರೆ. ಆದರೆ, ಈ ಬಗ್ಗೆ ಮಾಲೀಕರು ತನ್ನ ಮನವಿಗೆ ಮನ್ನಣೆ ನೀಡದ ಕಾರಣ, ಇದೀಗ ಶ್ರೇಯಸ್ ತಮ್ಮ ನಿರ್ಧಾರ ಬದಲಿಸಲಿದ್ದಾರೆ ಎಂದು ಹೇಳಲಾಗಿದೆ. ಇದೇ ವಿಷಯಕ್ಕೆ ಅಯ್ಯರ್ರನ್ನು ಆಕ್ಷನ್ನಲ್ಲಿ ಬಿಟ್ಟುಕೊಡಲು ಪ್ರಾಂಚೈಸಿ ಕೂಡ ನಿರ್ಧರಿಸಿದೆ. ಇದನ್ನು ಗಮನಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಮ್ಮ ಟೀಮ್ಗೆ ಶ್ರೇಯಸ್ ಅಯ್ಯರ್ ಬಂದರೆ ಬೆಸ್ಟ್ ಎಂದು ನಿರ್ಣಯಿಸಿದ್ದು, ಹರಾಜಿಗಾಗಿ ಎದುರುನೋಡುತ್ತಿದೆ,(ಏಜೆನ್ಸೀಸ್).