

Rinku Singh : ಐಪಿಎಲ್ 2025ರ ಮೆಗಾ ಹರಾಜಿಗೂ ಮುನ್ನ ಆಟಗಾರರ ರಿಟೇನ್ ಮತ್ತು ರಿಲೀಸ್ ಪಟ್ಟಿಯನ್ನು ಅ.31ರಂದು ಬಿಡುಗಡೆ ಮಾಡಲಾಗಿದೆ. ಎಲ್ಲ 10 ಫ್ರಾಂಚೈಸಿಗಳು ಐಪಿಎಲ್ 2025 ಗಾಗಿ ಉಳಿಸಿಕೊಳ್ಳಲು ಬಯಸುವ ಆಟಗಾರರ ಹೆಸರುಗಳನ್ನು ಪ್ರಕಟಿಸಿವೆ. ಇದರಲ್ಲಿ ಪ್ರಮುಖವಾಗಿ ಗಮನ ಸೆಳೆದಿದ್ದು ಮಾತ್ರ ಟೀಮ್ ಇಂಡಿಯಾದ ಯುವ ಆಟಗಾರ ರಿಂಕು ಸಿಂಗ್. ಅದಕ್ಕೆ ಕಾರಣವೂ ಇದೆ.
ಸರಿಯಾಗಿ 5 ತಿಂಗಳ ಹಿಂದೆ ರಿಂಕು ಸಿಂಗ್ ಒಂದು ಮಾತು ಆಡಿದ್ದರು. ಅದೇನೆಂದು ತಿಳಿಯುವ ಮುನ್ನ ಕಳೆದ ಐಪಿಎಲ್ ಅಂದರೆ, ಸೀಸನ್ 17ರ ಬಗ್ಗೆ ಮೊದಲು ತಿಳಿಯೋಣ. ಈ ಸೀಸನ್ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ಚಾಂಪಿಯನ್ ಆಗಿದ್ದು ನಿಮಗೆಲ್ಲ ಗೊತ್ತೇ ಇದೆ. ಫೈನಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ (ಎಸ್ಆರ್ಎಚ್) ತಂಡವನ್ನು ಸೋಲಿಸಿ ಕೋಲ್ಕತ್ತ ವಿಜೇತ ತಂಡವಾಗಿ ಹೊರಹೊಮ್ಮಿತು. ಈ ಮೂಲಕ ಮೂರನೇ ಬಾರಿಗೆ ಕೆಕೆಆರ್ ಪ್ರಶಸ್ತಿ ಜಯಿಸಿತು. 10 ವರ್ಷಗಳ ಬಳಿಕ ಕಪ್ ಗೆದ್ದ ಖುಷಿಯಲ್ಲಿ ಆಟಗಾರರು ಮತ್ತು ಕೆಕೆಆರ್ ಅಭಿಮಾನಿಗಳು ಸಂಭ್ರಮಿಸಿದರು.
ಕೆಕೆಆರ್ ಕಪ್ ಗೆದ್ದಾಗ ಎಲ್ಲರಿಗಿಂತ ಹೆಚ್ಚಾಗಿ ಫಿನಿಶರ್ ರಿಂಕು ಸಿಂಗ್ ಹೆಚ್ಚು ಸಂಭ್ರಮಿಸಿದರು. ಸಹ ಆಟಗಾರರನ್ನು ಅಪ್ಪಿಕೊಂಡು ಅಭಿನಂದಿಸಿದರು. ಒಳ್ಳೆಯ ಸಾಧನೆ ಮಾಡಿದ್ದೇವೆ ಎಂದು ಕೂಗಿ ಟ್ರೋಫಿಗೆ ಮುತ್ತಿಟ್ಟರು. ಇಡೀ ಕೆಕೆಆರ್ ಸಂಭ್ರಮಾಚರಣೆಯಲ್ಲಿ ರಿಂಕು ಸಿಂಗ್ ಹೈಲೈಟ್ ಆಗಿದ್ದರು. ಆದರೆ, 17ನೇ ಸೀಸನ್ನಲ್ಲಿ ಆಡುವುದಕ್ಕಾಗಿ ರಿಂಕು ಸಿಂಗ್ ಪಡೆದಿದ್ದು ಕೇವಲ 55 ಲಕ್ಷ ರೂಪಾಯಿ. ಕಳೆದ ಕೆಲವು ಸೀಸನ್ಗಳಿಂದ ತಂಡದ ಯಶಸ್ಸಿನಲ್ಲಿ ರಿಂಕು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಉತ್ತಮ ಫಿನಿಶರ್ ಆಗಿ ಹಲವು ಪಂದ್ಯಗಳಲ್ಲಿ ಏಕಾಂಗಿಯಾಗಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಟೀಂ ಇಂಡಿಯಾ ಪರ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸಾಧನೆ ಮಾಡಿದ್ದಾರೆ. ಆದರೆ, ಅವರ ಸಂಭಾವನೆ ಮಾತ್ರ ಏಕೆ ಕಡಿಮೆ ಎಂಬ ಪ್ರಶ್ನೆಗಳು ಎದ್ದಿದ್ದವು.
2024ರ ಐಪಿಎಲ್ಗೂ ಮುನ್ನ ನಡೆದ ಮಿನಿ ಹರಾಜಿನಲ್ಲಿ ಕೋಲ್ಕತ್ತ ತಂಡವು ಮಿಚೆಲ್ ಸ್ಟಾರ್ಕ್ ಅವರನ್ನು 24.75 ಕೋಟಿ ರೂ.ಗೆ ಖರೀದಿಸಿತು. ಇದು ರಿಂಕು ಮತ್ತು ಸ್ಟಾರ್ಕ್ ನಡುವಿನ ಸಂಭಾವನೆ ಬಗ್ಗೆ ಚರ್ಚೆಗೆ ಕಾರಣವಾಯಿತು. ಈಗ ಅಸಲಿ ವಿಚಾರದ ಕಡೆ ಬರೋಣ. 5 ತಿಂಗಳ ಹಿಂದೆ ಮಾಧ್ಯಮವೊಂದಕ್ಕೆ ರಿಂಕು ಸಿಂಗ್ ಸಂದರ್ಶನ ನೀಡಿದ್ದರು. ಈ ವೇಳೆ ಸಂಭಾವನೆ ಬಗ್ಗೆ ಪ್ರತಿಕ್ರಿಯಿಸಿದ ರಿಂಕು, ನನಗೆ 55 ಲಕ್ಷ ರೂ. ಸಂಬಳವೇ ಜಾಸ್ತಿ ಎಂದಿದ್ದರು. ಅಲ್ಲದೆ, ನಾನು ಕ್ರಿಕೆಟ್ನಲ್ಲಿ ಈ ಮಟ್ಟಕ್ಕೆ ಬರುತ್ತೇನೆ ಅಂತ ಅಂದುಕೊಂಡಿರಲಿಲ್ಲ. ಏನು ಸಿಕ್ಕಿದೆಯೋ ಅದರಲ್ಲೇ ನನಗೆ ತೃಪ್ತಿ ಇದೆ. ಬಾಲ್ಯದಲ್ಲಿ ಐದು ರೂಪಾಯಿಗೆ ದುಡಿದಿದ್ದೆ. ಈಗ 55 ಲಕ್ಷ ಸಂಪಾದಿಸುತ್ತಿದ್ದೇನೆ. ಇದಕ್ಕಿಂತ ಸಂತೋಷ ಏನಿದೆ? ದೇವರು ನನಗೆ ಕೊಟ್ಟಿದ್ದರಲ್ಲಿ ಖಂಡಿತವಾಗಿಯೂ ಸಂತೋಷಪಡುತ್ತೇನೆ. ಇದ್ಯಾವುದು ಇಲ್ಲದಿರುವ ದಿನಗಳನ್ನು ನೋಡಿದ್ದೇನೆ. ನನಗೆ ಹಣದ ಬೆಲೆ ತಿಳಿದಿದೆ ಎಂದು ಹೇಳಿದ್ದರು. ಈ ವೇಳೆ ರಿಂಕು ಅವರ ಮಾತುಗಳನ್ನು ಕೇಳಿ ಕ್ರೀಡಾಭಿಮಾನಿಗಳು ಮನಸಾರೆ ಕೊಂಡಾಡಿದ್ದರು.
ಅಂದು ಕೇವಲ 55 ಲಕ್ಷ ರೂ. ಪಡೆದಿದ್ದ ರಿಂಕು ಸಿಂಗ್ ಇಂದು ಏಕಾಏಕಿ 13 ಕೋಟಿ ರೂ. ಜಾಕ್ಪಾಟ್ ಹೊಡೆದಿದ್ದಾರೆ. ಹೌದು, ಇತ್ತೀಚೆಗೆ ಕೆಕೆಆರ್ ತಂಡ ಬಿಡುಗಡೆ ಮಾಡಿದ ಐಪಿಎಲ್ ರಿಟೇನ್ ಪಟ್ಟಿಯಲ್ಲಿ ರಿಂಕು ಸಿಂಗ್ ಸ್ಥಾನ ಪಡೆದಿದ್ದಾರೆ. ಬರೋಬ್ಬರಿ 13 ಕೋಟಿ ರೂ. ನೀಡಿ ಕೆಕೆಆರ್ ಫ್ರಾಂಚೈಸಿ ರಿಂಕು ಸಿಂಗ್ ಉಳಿಸಿಕೊಂಡಿದೆ. ಒಂದೇ ಸೀಸನ್ನಲ್ಲಿ ರಿಂಕ್ ಈ ಬೃಹತ್ ಮೊತ್ತವನ್ನು ಪಡೆದಿದ್ದಾರೆ. ಕಳೆದ ಬಾರಿ 55 ಲಕ್ಷ ಪಡೆದಿದ್ದ ರಿಂಕು ಇದೀಗ 13 ಕೋಟಿ ರೂ. ಪಡೆಯಲಿದ್ದಾರೆ. ರಿಂಕು ಅವರ ಒಳ್ಳೆಯ ಮನಸ್ಸಿಗೆ ಸಿಕ್ಕ ಪ್ರತಿಫಲ ಇದಾಗಿದೆ. ಅಂದು ಅವರಾಡಿದ ಒಳ್ಳೆಯ ಮಾತುಗಳಿಗೆ ಧನ ದೇವತೆಯೇ ಫಿದಾ ಆಗಿ, ಇಂದು ರಿಂಕು ಮನೆಯ ಬಾಗಿಲು ತಟ್ಟಿದ್ದಾಳೆ. ಅಲ್ಲದೆ, ರಿಂಕು ಶ್ರಮಕ್ಕೆ ಸಿಕ್ಕ ಪ್ರತಿಫಲವೂ ಇದಾಗಿದೆ.
ಐಪಿಎಲ್ 2025ರ ರಿಟೇನ್ ಪಟ್ಟಿಯಲ್ಲಿ ನಿರೀಕ್ಷೆ ಮಾಡಿದಂತೆಯೇ ವಿರಾಟ್ ಮತ್ತು ರೋಹಿತ್ಗೆ ಹೆಚ್ಚಿನ ಬೆಲೆ ಸಿಕ್ಕಿಲ್ಲ. ಇವರಿಬ್ಬರಿಗೂ ಹೋಲಿಸಿದರೆ ಸನ್ ರೈಸರ್ಸ್ ಹೈದರಾಬಾದ್ ಆಟಗಾರ ಹೆನ್ರಿಚ್ ಕ್ಲಾಸೆನ್ ಅತ್ಯಧಿಕ ಬೆಲೆ ಪಡೆದಿದ್ದಾರೆ. ಕ್ಲಾಸೆನ್ಗಾಗಿ ಸನ್ ರೈಸರ್ಸ್ ಹೈದರಾಬಾದ್ ತಂಡ ಬರೋಬ್ಬರಿ 23 ಕೋಟಿ ರೂ. ಖರ್ಚು ಮಾಡಿದೆ. ಇದು ಈ ಬಾರಿಯ ಅತ್ಯಂತ ದುಬಾರಿ ಮೊತ್ತವಾಗಿದೆ. ಮುಂಬರುವ ಹರಾಜಿನಲ್ಲಿ ಯಾರಾದರೂ ಇದನ್ನು ಮೀರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಇನ್ನು ವಿರಾಟ್ ಕೊಹ್ಲಿ ಅವರು 21 ಕೋಟಿ ರೂ. ಪಡೆಯುವ ಮೂಲಕ ಎರಡನೇ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ರೋಹಿತ್ ಶರ್ಮಗೆ 16.30 ಕೋಟಿ ಸಿಕ್ಕಿದೆ. ವಿರಾಟ್ ಅವರಂತೆಯೇ ಲಖನೌ ಆಟಗಾರ ನಿಕೋಲಸ್ ಪೂರನ್ ಕೂಡ 21 ಕೋಟಿ ರೂ. ಸಿಕ್ಕಿದೆ.
ಪ್ಯಾಟ್ ಕಮಿನ್ಸ್ (ಎಸ್ಆರ್ಎಚ್), ರುತುರಾಜ್ ಗಾಯಕ್ವಾಡ್ (ಸಿಎಸ್ಕೆ), ಜಸ್ಪ್ರೀತ್ ಬುಮ್ರಾ (ಮುಂಬೈ), ರಶೀದ್ ಖಾನ್ (ಗುಜರಾತ್ ಟೈಟಾನ್ಸ್), ಸಂಜು ಸ್ಯಾಮ್ಸನ್ (ರಾಜಸ್ಥಾನ ರಾಯಲ್ಸ್), ಯಶಸ್ವಿ ಜೈಸ್ವಾಲ್ (ರಾಜಸ್ಥಾನ ರಾಯಲ್ಸ್) ಹಾಗೂ ರವೀಂದ್ರ ಜಡೇಜಾ (ಸಿಎಸ್ಕೆ) ತಲಾ 18 ಕೋಟಿ ರೂ. ಪಡೆದಿದ್ದಾರೆ. ಅನ್ಕ್ಯಾಪ್ಡ್ ಪ್ಲೇಯರ್ ಕೋಟಾದ ಅಡಿಯಲ್ಲಿ ಎಂಎಸ್ ಧೋನಿ 4 ಕೋಟಿ ರೂ. ಕಡಿಮೆ ಮೊತ್ತ ಗಳಿಸಿದ್ದಾರೆ. ಕೆಕೆಆರ್ ಆಟಗಾರ ರಿಂಕು ಸಿಂಗ್ ಜಾಕ್ ಪಾಟ್ ಹೊಡೆದಿದ್ದಾರೆ. ಅವರ ಸಂಭಾವನೆ 55 ಲಕ್ಷ ರೂ.ನಿಂದ 13 ಕೋಟಿ ರೂ.ಗೆ ಏರಿಕೆಯಾಗಿದೆ. (ಏಜೆನ್ಸೀಸ್)